ನ್ಯೂಸ್

ಸಾರ್ವಜನಿಕ ಸ್ಥಳಗಳಲ್ಲಿ ಲ್ಯಾಪ್‍ಟಾಪ್‍ ಬಳಸುವ ಮುನ್ನ ಎಚ್ಚರ! ಕೀ ಬೋರ್ಡ್ ಕ್ಲಿಕ್‍ ಸದ್ದನ್ನು ಕೇಳಿಸಿಕೊಂಡೇ ಪಾಸ್‍ವರ್ಡ್ ಕದಿಯುತ್ತೆ ಈ AI…

Webdesk - Athul Damale

ನವದೆಹಲಿ: ಸಾರ್ವಜನಿಕ ಸ್ಥಳಗಳಲ್ಲಿ ಲ್ಯಾಪ್‍ಟಾಪ್‍ ಅಥವಾ ಕಂಪ್ಯೂಟರ್ನಲ್ಲಿ ನಿಮ್ಮ ಪಾಸ್‍ವರ್ಡ್ ಟೈಪ್ ಮಾಡುವಾಗ ನೀವು ನಿಮ್ಮ ಸ್ಕ್ರೀನ್ ಅಥವಾ ಕೀಪ್ಯಾಡ್ ಅನ್ನು ಯಾರಾದರೂ ನೋಡುತ್ತಿದ್ದಾರಾ ಎನ್ನುವುದನ್ನು ಗಮನಿಸುತ್ತೀರಾ? ಹಾಗಾದರೆ ನೀವು ಹ್ಯಾಕರ್‍ಗಳ ಹೊಸ ತಂತ್ರದ ಬಗ್ಗೆ ತಿಳಿದಿಲ್ಲ ಎಂದರ್ಥ. ಏಕೆಂದರೆ ನಿಮ್ಮ ಕೀಬೋರ್ಡ್ ಮಾಡುವ ಶಬ್ದಗಳೂ ನಿಮ್ಮ ಪಾಸ್ ವರ್ಡ್ಅನ್ನು ಬಹಿರಂಗಪಡಿಸಬಹುದು ಎಂದು ನಿಮಗೆ ತಿಳಿದಿದೆಯೇ?

ಝೆಡ್‍ಡಿ ನೆಟ್ ವರದಿಯ ಪ್ರಕಾರ ಹೊಸ ಅಧ್ಯಯನವೊಂದು ಈ ಆಶ್ಚರ್ಯಕರ ವಿಚಾರವನ್ನು ಬಹಿರಂಗಪಡಿಸಿದೆ. ನೀವು ಟೈಪ್ ಮಾಡಿದಾಗ ನಿಮ್ಮ ಕೀಬೋರ್ಡ್ ಮಾಡುವ ಸಣ್ಣ ಶಬ್ದಗಳನ್ನು ಕೇಳುವ ಮೂಲಕ ನಿಮ್ಮ ಪಾಸ್ ವರ್ಡ್ ಗಳನ್ನು ಕಂಡುಹಿಡಿಯಲು ಹ್ಯಾಕರ್ ಗಳು ವಿಶೇಷ ತಂತ್ರಜ್ಞಾನವನ್ನು ಬಳಸಬಹುದಾಗಿದೆ.

ಈ ಹೊಸ ಮಾದರಿಯ ಹ್ಯಾಕಿಂಗ್ ದಾಳಿಯನ್ನು "ಅಕೌಸ್ಟಿಕ್ ಸೈಡ್-ಚಾನೆಲ್ ಅಟ್ಯಾಕ್" ಎಂದು ಕರೆಯಲಾಗುತ್ತದೆ. ಇದು ನಿಮ್ಮ ಕೀಬೋರ್ಡ್ ಮಾಡುವ ಸದ್ದುಗಳನ್ನು ಕೇಳಿಸಿಕೊಳ್ಳುತ್ತದೆ. ಈ ಶಬ್ದಗಳನ್ನು ವಿಶ್ಲೇಷಿಸುವ ಮೂಲಕ, ಸುಧಾರಿತ ತಂತ್ರಜ್ಞಾನ ಹೊಂದಿರುವ ಹ್ಯಾಕರ್‍ಗಳು ನೀವು ಟೈಪ್ ಮಾಡುತ್ತಿರುವ ನಿಖರವಾದ ಅಕ್ಷರಗಳು ಮತ್ತು ಸಂಖ್ಯೆಗಳನ್ನು ಅರಿತುಕೊಳ್ಳಬಹುದು. ಈ ಮೂಲಕ ನಿಮ್ಮ ಬ್ಯಾಂಕ್ ಖಾತೆ, ಫೇಸ್‍ಬುಕ್, ಜಿಮೇಲ್, ಇತ್ಯಾದಿಯಾಗಿ ಪ್ರತಿಯೊಂದು ಖಾತೆಗೂ ಹ್ಯಾಕರ್‍ಗಳಿಗೆ ಪ್ರವೇಶವನ್ನು ನೀಡುತ್ತದೆ.

ಈ ಬೆದರಿಕೆ ಎಷ್ಟು ಗಂಭೀರವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು, ತಜ್ಞರ ತಂಡವು ಸಣ್ಣ ಪ್ರಯೋಗವನ್ನು ನಡೆಸಿತು. ಅವರು ಶಕ್ತಿಯುತ ಲ್ಯಾಪ್ ಟಾಪ್, ಮ್ಯಾಕ್ ಬುಕ್ ಪ್ರೊ 16 ಇಂಚಿನ ಬಳಸಿದ್ದಾರೆ. ಕೀಬೋರ್ಡ್ ನ ಶಬ್ದಗಳನ್ನು ಸೆರೆಹಿಡಿಯಲು ಅವರು ಮೃದುವಾದ ಬಟ್ಟೆಯ ಮೇಲೆ ಕೇವಲ 17 ಸೆಂ.ಮೀ ದೂರದಲ್ಲಿರುವ ಸಣ್ಣ ಐಫೋನ್ 13 ಮಿನಿ ಅನ್ನು ಇರಿಸಿದರು. ಶಬ್ದಗಳನ್ನು ಸೆರೆಹಿಡಿಯಲು ಅವರು ಲ್ಯಾಪ್ ಟಾಪ್‍ನ ಸ್ವಂತ ರೆಕಾರ್ಡಿಂಗ್ ಡಿವೈಸ್ ಬಳಸಿದರು.

ಈ ರೆಕಾರ್ಡ್ ಮಾಡಿದ ಡೇಟಾವನ್ನು ನಂತರ AIನಿಂದ ನಡೆಸಲ್ಪಡುವ ಸ್ಮಾರ್ಟ್ ಕಂಪ್ಯೂಟರ್ ಪ್ರೋಗ್ರಾಂ ಅನ್ನು ಕಲಿಸಲು ಬಳಸಲಾಗುತ್ತಿತ್ತು. ಟೈಪಿಂಗ್ ಶಬ್ದಗಳನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎನ್ನುವುದನ್ನು AI ಕಲಿತುಕೊಳ್ಳುತ್ತದೆ. ಒಮ್ಮೆ ತರಬೇತಿ ಪಡೆದ ನಂತರ, ಈ AI ಅನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಐಫೋನ್ ರೆಕಾರ್ಡಿಂಗ್ ನಿಂದ ಶೇಕಡಾ 95ರಷ್ಟು ಮತ್ತು ಲ್ಯಾಪಟಾಪ್ ನ ರೆಕಾರ್ಡಿಂಗ್ ನಿಂದ ಶೇಕಡಾ 93 ರಷ್ಟು ನಿಖರತೆಯೊಂದಿಗೆ ಯಾವ ಕೀಲಿಗಳನ್ನು ಒತ್ತಲಾಗುತ್ತಿದೆ ಎಂಬುದನ್ನು ಯಶಸ್ವಿಯಾಗಿ ಕಂಡುಹಿಡಿದಿದೆ.

ಈ ತಂತ್ರಜ್ಞಾನವನ್ನು ಇನ್ನಷ್ಟು ಅಭಿವೃದ್ಧಿಪಡಿಸಿದರೆ ಇನ್ನಷ್ಟು ನಿಖರತೆಯೂ ಸಾಧ್ಯವಾಗುತ್ತದೆ. ಇನ್ನು, ಭಯಾನಕ ಅಂಶವೇನೆಂದರೆ, ಈ ತಂತ್ರಜ್ಞಾನವನ್ನು ನಮ್ಮದೇ ಗ್ಯಾಜೆಟ್‍ನಲ್ಲಿ ಸ್ಪ್ಯಾಮ್‍ ಲಿಂಕ್‍ಗಳನ್ನು ಕ್ಲಿಕ್‍ ಮಾಡಿಸಿ ಇನ್ಸ್ಟಾಲ್‍ ಮಾಡಿಸಬಹುದಾಗಿದೆ. ರೆಕಾರ್ಡ್‍ ಆಗುವ ಆಡಿಯೋ ಹ್ಯಾಕರ್‍ಗಳ ಕೈಗೆ ತಲುಪಿದಂತೆಯೆ ಪಾಸ್‍ವರ್ಡ್‍ ಕೂಡ ಅವರಿಗೆ ತಿಳಿದುಬಿಡುತ್ತದೆ. ಇದು ವಿಶಿಷ್ಟ ಟೈಪಿಂಗ್ ವಿಧಾನಗಳ ಮತ್ತು ಮಿಶ್ರ ಅಕ್ಷರಗಳ ಪಾಸ್‍ವರ್ಡ್ನ ಅಗತ್ಯವನ್ನು ಎತ್ತಿ ತೋರಿಸುತ್ತದೆ. (ಏಜೆನ್ಸೀಸ್)