ನವದೆಹಲಿ: ಪಾಸ್ಪೋರ್ಟ್ ಅರ್ಜಿಯಲ್ಲಿ ತಮ್ಮ ಮೇಲಿರುವ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಮರೆ ಮಾಚಿದ್ದಕ್ಕೆ ನರ್ಮದಾ ಉಳಿಸಿ ಆಂದೋಲನದ ಮೇಧಾ ಪಾಟ್ಕರ್ ಅವರನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ಕೋರಿ ಮುಂಬೈ ಪಾಸ್ಪೋರ್ಟ್ ಕಚೇರಿ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದೆ.
2019ರ ಜೂನ್ನಲ್ಲಿ ಈ ಬಗ್ಗೆ ಮೇಧಾ ವಿರುದ್ಧ ಪತ್ರಕರ್ತರೊಬ್ಬರು ದೂರು ದಾಖಲಿಸಿದ್ದರು. ಅದರಲ್ಲಿ ಕ್ರಿಮಿನಲ್ ದೂರುಗಳ ಸಂಗತಿಗಳನ್ನು ಮರೆ ಮಾಚಿ ಪಾಸ್ಪೋರ್ಟ್ ಪಡೆದಿದ್ದಾರೆ ಎಂದು ಆರೋಪಿಸಿದ್ದರು.
ಆ ದೂರಿನಲ್ಲಿ ಮೇಧಾ ಪಾಟ್ಕರ್ ವಿರುದ್ಧ 9 ಕ್ರಿಮಿನಲ್ ಪ್ರಕರಣಗಳಿರುವ ಬಗ್ಗೆ ಸಾಕ್ಷಿಗಳನ್ನು ನೀಡಲಾಗಿತ್ತು. ಈ ಎಲ್ಲ ಪ್ರಕರಣಗಳು ಮಧ್ಯಪ್ರದೇಶದಲ್ಲಿ ದಾಖಲಾಗಿದ್ದು ವಿಚಾರಣೆಗೆ ಬಾಕಿ ಇವೆ ಎಂದು ತಿಳಿಸಲಾಗಿತ್ತು.
2017ರ ಮಾರ್ಚ್ 30ರಂದು ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಮೇಧಾ ಪಾಟ್ಕರ್, ತನ್ನ ವಿರುದ್ಧ ಯಾವ ಕ್ರಿಮಿನಲ್ ಪ್ರಕರಣಗಳು ಇಲ್ಲ ಎಂದು ಅರ್ಜಿಯಲ್ಲಿ ಭರ್ತಿ ಮಾಡಿದ್ದರು. ಕ್ರಿಮಿನಲ್ ದೂರಿನ ಕಾಲಂನಲ್ಲಿ ನನ್ (ಇಲ್ಲ) ಎಂದು ದಾಖಲಿಸಿದ್ದರು.
ಮುಂಬೈ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ಮಧ್ಯಪ್ರದೇಶದ ಪೊಲೀಸ್ ಮಹಾ ನಿರ್ದೇಶಕರಿಗೂ ಈ ಬಗ್ಗೆ ಪತ್ರ ಬರೆದಿತ್ತು. ಆಗ ಡಿಜಿಪಿ ಮೇಧಾ ಅವರ ವಿರುದ್ಧ ಐದು ಕ್ರಿಮಿನಲ್ ಪ್ರಕರಣಗಳಿರುವ ಬಗ್ಗೆ ಮಾಹಿತಿ ನೀಡಿದ್ದರು.
ಇದರಿಂದ ಪಾಸ್ಪೋರ್ಟ್ ಕಚೇರಿ ಮೇಧಾ ಅವರಿಗೆ ಅಕ್ಟೋಬರ್ 18ರಂದು ನೋಟಿಸ್ ಜಾರಿಗೊಳಿಸಿತ್ತು. ಅದಕ್ಕೆ ಅವರು 10 ದಿನಗೊಳಗಾಗಿ ಉತ್ತರ ನೀಡಲು ತಿಳಿಸಲಾಗಿತ್ತು. (ಏಜೆನ್ಸೀಸ್)