ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಮೊದಲ ರೈಲು ಗುರುವಾರ ಬಂದು ತಲುಪಿತು. ರೈಲಿನಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಕಡ್ಡಾಯ ಕ್ವಾರಂಟೈನ್ಗೆ ಕಳುಹಿಸಲು ಅಧಿಕಾರಿಗಳು ಯತ್ನಿಸಿದಾಗ ಪ್ರಯಾಣಿಕರಿಂದ ತೀವ್ರ ಪ್ರತಿರೋಧ ವ್ಯಕ್ತವಾಯಿತು.
ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ವೇಟಿಂಗ್ ರೂಂನಲ್ಲಿ ಸೇರಿಕೊಂಡು ಪ್ರತಿಭಟನೆ ಆರಂಭಿಸಿದರು. ಇದರಿಂದಾಗಿ ಕೆಎಸ್ಆರ್ ರೈಲು ನಿಲ್ದಾಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ಇದನ್ನೂ ಓದಿ: ಕರೊನಾಕ್ಕೆ ಸಿದ್ಧವಾಗಿದೆ ಆಯುರ್ವೇದದ 4 ಮದ್ದು; ಕ್ಲಿನಿಕಲ್ ಪ್ರಯೋಗಕ್ಕೆ ಸಿದ್ಧತೆ
ನವದೆಹಲಿಯಿಂದ ಹೊರಟಿದ್ದ ನವದೆಹಲಿ-ಬೆಂಗಳೂರು ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲು ಗುರುವಾರ ಬೆಳಗ್ಗ 6 ಗಂಟೆ 40 ನಿಮಿಷಕ್ಕೆ ಕೆಎಸ್ಆರ್ ರೈಲು ನಿಲ್ದಾಣ ತಲುಪಬೇಕಿತ್ತು. ಆದರೆ ಬೆಳಗ್ಗೆ 7.18ಕ್ಕೆ ಬಂದು ತಲುಪಿತ್ತು. ಅನಂತಪುರ, ಗುಂತ್ಕಲ್, ಸಿಕಂದರಾಬಾದ್, ನಾಗ್ಪುರ, ಭೋಪಾಲ್ ಮತ್ತು ಝಾನ್ಸಿ ಸೇರಿ ಒಟ್ಟು 1 ಸಾವಿರ ಪ್ರಯಾಣಿಕರು ಆ ರೈಲಿನಲ್ಲಿ ಬೆಂಗಳೂರು ತಲುಪಿದ್ದರು. ಇವರೆಲ್ಲರಿಗೂ ಕಡ್ಡಾಯವಾಗಿ 14 ದಿನ ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇರುವಂತೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಹೇಳಿದರು. ಇದು ಅವರನ್ನು ಕೆರಳಿಸಿತು.
ನಿಲ್ದಾಣದಲ್ಲಿದ್ದ ವೇಟಿಂಗ್ ರೂಂನೊಳಗೆ ಸೇರಿಕೊಂಡ ನೂರಾರು ಪ್ರಯಾಣಿಕರು ಹೊರಬರಲು ನಿರಾಕರಿಸಿ 7 ಗಂಟೆಗೂ ಹೆಚ್ಚುಕಾಲದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕೇಂದ್ರ ಸರ್ಕಾರವೂ ಪ್ರಕಟಿಸಿತು ‘ವರ್ಕ್ ಫ್ರಂ ಹೋಮ್’ ಕರಡು ಮಾರ್ಗಸೂಚಿ
ಆಹಾರ ಮತ್ತು ನೀರು ಇಲ್ಲದೆ ಬೆಂಗಳೂರು ತಲುಪಿರುವ ತಮಗೆ ಮೊದಲೇ ಸಾಂಸ್ಥಿಕ ಕ್ವಾರಂಟೈನ್ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಬೇಕಿತ್ತು. ಆದರೆ ಹಾಗೆ ಮಾಡದೆ ಈಗ ಕ್ವಾರಂಟೈನ್ಗೆ ಹೋಗುವಂತೆ ಕಡ್ಡಾಯಗೊಳಿಸಿದರೆ ಹೇಗೆ ಎಂಬುದು ಪ್ರತಿಭಟನಾಕಾರರ ಪ್ರಶ್ನೆಯಾಗಿತ್ತು.
ಇನ್ನು ಕೆಲವರು ಕ್ವಾರಂಟೈನಲ್ಲಿ ಇರಲು ಹಣ ಕೊಡಬೇಕಾಗುತ್ತದೆ. ಆದರೆ ತಮ್ಮ ಬಳಿ ಹಣ ಇಲ್ಲದ ಕಾರಣ ಕ್ವಾರಂಟೈನ್ಗೆ ಹೋಗಲು ಸಾಧ್ಯವಿಲ್ಲ. ಆದ್ದರಿಂದ, ಮನೆಗೆ ಹೋಗಲು ನಮಗೆ ಅವಕಾಶ ಕೊಡಿ ಎಂದು ಅಧಿಕಾರಿಗಳಿಗೆ ದುಂಬಾಲು ಬಿದ್ದಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ಗಳಲ್ಲಿ ಉಚಿತ ಕ್ವಾರಂಟೈನ್ ವ್ಯವಸ್ಥೆ ಇದೆ. ಅಲ್ಲಿಗೆ ಹೋಗುವಂತೆ ಅಧಿಕಾರಿಗಳು ಸೂಚಿಸಿದರು. ಆದರೆ ಅದಕ್ಕೂ ನಿರಾಕರಿಸಿದ ಪ್ರಯಾಣಿಕರು ಮಧ್ಯಾಹ್ನ 2.50ರಲ್ಲೂ ನಿಲ್ದಾಣದಲ್ಲೇ ಪ್ರತಿಭಟನೆ ಮುಂದುವರಿಸಿದ್ದಾರೆ.