Gold Ring Recovery (ಚಿತ್ರ X) 
ನ್ಯೂಸ್

ರೈಲ್ವೆ ಶೌಚಾಲಯಕ್ಕೆ ಬಿತ್ತು ಲಕ್ಷಾಂತರ ರೂಪಾಯಿಯ ಉಂಗುರ! ಆಮೇಲೆ ನಡೆದಿದ್ದೇ ಒಂದು ರೋಚಕ ಪವಾಡ! Gold Ring Recovery

ಪ್ರಮುಖ ಮುಖ್ಯಾಂಶಗಳು

  • ರೈಲ್ವೆಯ ಶೌಚಾಲಯದ ಪೈಪ್ ಒಳಗೆ ಬಿದ್ದ ವಸ್ತುಗಳು ಮರಳಿ ಸಿಗುವುದು ಅಸಾಧ್ಯ
  • ಪಶ್ಚಿಮ ರೈಲ್ವೆಯ ಅಧಿಕಾರಿಗಳ ಕರ್ತವ್ಯನಿಷ್ಠೆಯಿಂದಾಗಿ ಬೆಲೆಬಾಳುವ ಉಂಗುರ ಕೈಸೇರಿದೆ
  • ಬಾಂದ್ರಾ ಟರ್ಮಿನಸ್‌ನಿಂದ ಭುಜ್‌ಗೆ ತೆರಳುತ್ತಿದ್ದ ರೈಲಿನಲ್ಲಿ ಈ ಘಟನೆ ಸಂಭವಿಸಿದೆ
  • ಉಂಗುರವನ್ನು ಪ್ರಯಾಣಿಕರಿಗೆ ಹಿಂತಿರುಗಿಸಿದಾಗ ಅವರ ಮುಖದಲ್ಲಿದ್ದ ಸಂತೋಷ ನೋಡಲು ಅದ್ಭುತವಾಗಿತ್ತು
ಅಹಮದಾಬಾದ್​: ರೈಲ್ವೆಯ ಶೌಚಾಲಯದ ಪೈಪ್ ಅಥವಾ ಟ್ಯಾಂಕ್ ಒಳಗೆ ಬಿದ್ದ ವಸ್ತುಗಳು ಮರಳಿ ಸಿಗುವುದು ಅಸಾಧ್ಯ ಎಂಬ ಮಾತಿದೆ. ಆದರೆ, ಪಶ್ಚಿಮ ರೈಲ್ವೆಯ ಅಧಿಕಾರಿಗಳ ಸಮಯಪ್ರಜ್ಞೆ ಮತ್ತು ಕರ್ತವ್ಯನಿಷ್ಠೆಯಿಂದಾಗಿ ವ್ಯಕ್ತಿಯೊಬ್ಬರ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಉಂಗುರವು (Gold Ring Recovery) ಸುರಕ್ಷಿತವಾಗಿ ಕೈಸೇರಿದ್ದು, ಈ ರೋಚಕ ಘಟನೆಯ ವಿವರವನ್ನು ಅಹಮದಾಬಾದ್​ನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಘಟನೆ ಏನು?

ಬಾಂದ್ರಾ ಟರ್ಮಿನಸ್‌ನಿಂದ ಭುಜ್‌ಗೆ ತೆರಳುತ್ತಿದ್ದ ರೈಲಿನಲ್ಲಿ ಈ ಘಟನೆ ಸಂಭವಿಸಿದೆ. ಪ್ರಯಾಣಿಕರೊಬ್ಬರು ಶೌಚಾಲಯಕ್ಕೆ ಹೋದಾಗ ಆಕಸ್ಮಿಕವಾಗಿ ಅವರ ಬೆಲೆಬಾಳುವ ಚಿನ್ನದ ಉಂಗುರವನ್ನು ಚರಂಡಿ ಪೈಪ್​ನಲ್ಲಿ ಬೀಳಿಸಿಕೊಂಡಿದ್ದಾರೆ. ಇದರಿಂದ ಹತಾಶೆಗೊಂಡ ಅವರು ತನ್ನ ಉಂಗುರ ಶಾಶ್ವತವಾಗಿ ಕಳೆದುಹೋಯಿತು ಎಂದು ಭಾವಿಸಿದ್ದರು.
ಆದರೆ, ರೈಲು ಅಹಮದಾಬಾದ್​ ನಿಲ್ದಾಣವನ್ನು ತಲುಪಿದ ತಕ್ಷಣ ಒಂದು ಸವಾಲಿನ ರೆಸ್ಕ್ಯೂ ಆಪರೇಷನ್ ಆಗಿ ಪರಿವರ್ತನೆಯಾಯಿತು. ಹಿರಿಯ ವಿಭಾಗ ಎಂಜಿನಿಯರ್ ಸಂಜಯ್ ಯಾದವ್, ಸಿಟಿಎಸ್ ಸಿಬ್ಬಂದಿ ವೀರೇಂದ್ರ ಕುಮಾರ್ ಸಿಂಗ್ ಮತ್ತು ಇವರ ತಂಡವು ಹೊಲಸು ತುಂಬಿದ್ದ ಟ್ಯಾಂಕ್​, ಪೈಪ್​ಲೈನ್​ಗಳು ಮತ್ತು ವಿಪರೀತ ದುರ್ವಾಸನೆಯ ನಡುವೆ ಗಂಟೆಗಟ್ಟಲೆ ಕೆಲಸ ಮಾಡಿ ಅಂತಿಮವಾಗಿ ಉಂಗುರವನ್ನು ಹೊರತೆಗೆದು ಪ್ರಯಾಣಿಕರಿಗೆ ನೀಡಿದ್ದಾರೆ.

ಪೋಸ್ಟ್​ನಲ್ಲೇನಿದೆ?

ಉಂಗುರವನ್ನು ಪ್ರಯಾಣಿಕರಿಗೆ ಹಿಂತಿರುಗಿಸಿದಾಗ ಅವರ ಮುಖದಲ್ಲಿದ್ದ ಸಂತೋಷ ನೋಡಲು ಅದ್ಭುತವಾಗಿತ್ತು. ಭಾರತೀಯ ರೈಲ್ವೆಯು ಪ್ರಯಾಣಿಕರನ್ನು ಕೇವಲ ಅವರ ಗಮ್ಯಸ್ಥಾನಗಳಿಗೆ ಕರೆದೊಯ್ಯುವುದಿಲ್ಲ, ಬದಲಿಗೆ ಅವರ ನಂಬಿಕೆ ಮತ್ತು ಭಾವನೆಗಳನ್ನು ಕೂಡ ಸುರಕ್ಷಿತವಾಗಿರಿಸುತ್ತದೆ ಎಂದು ಡಿಆರ್‌ಎಂ ವೇದ್ ಪ್ರಕಾಶ್ ಅವರು ತಂಡದ ಪ್ರಾಮಾಣಿಕತೆಯನ್ನು ಶ್ಲಾಘಿಸಿದರು.
ಈ ಪೋಸ್ಟ್​ ಎಲ್ಲೆಡೆ ವೈರಲ್ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ಪ್ರತಿಕ್ರಿಯಿಸಿದ್ದು, ಒಬ್ಬ ಬಳಕೆದಾರರು ಪ್ರಚಾರಗಳ ಮೂಲಕ ಅಥವಾ ನಗದು ಪ್ರೋತ್ಸಾಹದ ಮೂಲಕ ಅವರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಬೇಕು ಎಂದು ಕಾಮೆಂಟ್​ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ಡಿಆರ್‌ಎಂ ಅಹಮದಾಬಾದ್ ತಂಡಕ್ಕೆ ಧನ್ಯವಾದಗಳು ಪ್ರಾಮಾಣಿಕತೆಯಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವ ಮೂಲಕ, ಅವರು ಪ್ರಯಾಣಿಕರ ನಂಬಿಕೆಗೆ ತಕ್ಕಂತೆ ಬದುಕಿದ್ದಾರೆ ಎಂದು ಬಣ್ಣಿಸಿದ್ದಾರೆ.
ಆದಾಗ್ಯೂ, ದೂರುಗಳನ್ನು ದಾಖಲಿಸುವುದು ಎಷ್ಟು ಅಗತ್ಯವೋ, ಹಾಗೆಯೇ ಅತ್ಯುತ್ತಮ ಕೆಲಸವನ್ನು ಗುರುತಿಸುವುದು ಮತ್ತು ಪ್ರಶಂಸಿಸುವುದು ಅಷ್ಟೇ ಮುಖ್ಯ ಎಂದು ಮತ್ತೊಬ್ಬರು ತಿಳಿಸಿದ್ದಾರೆ (ಏಜೆನ್ಸೀಸ್​).