ಹೊಸನಗರ ತುಂಗಾ ಅಡಕೆ ಮಾರಾಟ ಸೌಹಾರ್ದ ಸಹಕಾರ ಸಂಘದ ಸಭೆಯಲ್ಲಿ ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಮಾತನಾಡಿದರು. ಬೇಳೂರು ಗೋಪಾಲಕೃಷ್ಣ, ವಿನಯ್‌ಕುಮಾರ್, ಷಡಾಕ್ಷರಿ, ಎಚ್.ಕೆ.ಮಾಲತೇಶ್ ಇತರರಿದ್ದರು. 
ನ್ಯೂಸ್

ಸಹಕಾರ ಸಂಘದಲ್ಲಿ ಪಕ್ಷ ರಾಜಕಾರಣ ಸಲ್ಲ

ಹೊಸನಗರ: ಸಹಕಾರ ಕ್ಷೇತ್ರ ಎಂದಿಗೂ ಸ್ವತಂತ್ರ. ಇಲ್ಲಿ ಜಾತಿ, ಧರ್ಮ ಮಾತ್ರವಲ್ಲದೆ ಪಕ್ಷ ರಾಜಕಾರಣಕ್ಕೂ ಅವಕಾಶ ಇರಕೂಡದು ಎಂದು ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ತುಂಗಾ ಅಡಕೆ ಮಾರಾಟ ಸೌಹಾರ್ದ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.
ರೈತರು ಸಹಕಾರ ಸಂಸ್ಥೆಯಲ್ಲಿ ಮಾತ್ರ ವ್ಯವಹಾರ ನಡೆಸಬೇಕು. ಮನೆ ಬಾಗಿಲಿನ ವ್ಯಾಪಾರ ಮಾಡಬಾರದು. ಲಾಭದ ಆಸೆಗೆ ಕಟ್ಟುಬಿದ್ದು ಹೋದರೆ ವಂಚನೆಗೊಳಗಾಗುವ ಅಪಾಯವಿದೆ. ಸಹಕಾರ ಸಂಸ್ಥೆ ಜತೆ ಇದ್ದರೆ ರೈತರನ್ನು ಕೈಹಿಡಿದು ನಡೆಸುತ್ತದೆ ಎಂದರು.
ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ರೈತರು ಬೆಳೆಗಳನ್ನು ಎಪಿಎಂಸಿ ವ್ಯವಸ್ಥೆಯಲ್ಲಿ ಮಾತ್ರ ಮಾರಾಟ ಮಾಡಬೇಕು. ಅಡಕೆ ವ್ಯಾಪಾರ ಇಂದು ಕಷ್ಟಕರವಾಗಿದೆ. ಅನೇಕ ರೀತಿ ಮೋಸ ನಡೆಯುತ್ತಿದೆ. ಸಹಕಾರ ವ್ಯವಸ್ಥೆಯಲ್ಲಿ ಮೋಸಕ್ಕೆ ಅವಕಾಶವಿಲ್ಲ. ಸಂಸ್ಥೆಯ ಜತೆಗಿದ್ದರೆ ಅದು ನಮ್ಮನ್ನು ಕಾಪಾಡುತ್ತದೆ ಎಂದು ಹೇಳಿದರು.
ಸಂಸ್ಥೆ ಅಧ್ಯಕ್ಷ ವಿನಯ್‌ಕುಮಾರ್ ಮಾತನಾಡಿ, ತುಂಗಾ ಅಡಕೆ ಮಾರಾಟ ಸೌಹಾರ್ದ ಸಹಕಾರ ಸಂಸ್ಥೆ ಪ್ರಸ್ತುತ ವರ್ಷ 32 ಲಕ್ಷ ರೂ. ಲಾಭ ಗಳಿಸಿದೆ. ಮುಂದಿನ ದಿನಗಳಲ್ಲಿ ರೈತ ಪರ ಯೋಜನೆ ಜಾರಿಗೊಳಿಸುವ ಉದ್ದೇಶವಿದೆ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಷಡಾಕ್ಷರಿ, ಸಂಘದ ಉಪಾಧ್ಯಕ್ಷ ಎಚ್.ಕೆ.ಮಾಲತೇಶ್, ನಿರ್ದೇಶಕರಾದ ರವಿ ಗುಬ್ಬಿಗ, ನವೀನ್‌ಕುಮಾರ್ ಹೆದ್ಲಿ, ಮಹೇಶ್ ನಾಗರಕೊಡಿಗೆ, ವಿನಾಯಕ ಚಕ್ಕಾರು, ಹೇಮಾ, ನಾಗೇಶ್, ಜಯದೇವಪ್ಪ ಗೌಡ, ಲೇಖನಮೂರ್ತಿ, ಬಷೀರ್ ಅಹಮದ್, ಸುಧೀರ್‌ಕುಮಾರ್, ಕೆ.ಎಸ್.ಶಿವಪ್ಪ, ಸಿಇಒ ಕುಮಾರಸ್ವಾಮಿ ಇದ್ದರು.