ನ್ಯೂಸ್

ಮತ್ತೊಮ್ಮೆ ಪಕ್ಷಾಂತರ ಚಟುವಟಿಕೆ; ಸುಳಿವು ನೀಡಿದ ಡಿಕೆಶಿ

ಶ್ರೀಕಾಂತ್ ಶೇಷಾದ್ರಿ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಮುನ್ನ ಪಕ್ಷಾಂತರ ಚಟುವಟಿಕೆ ನಡೆದ ಬಳಿಕ ಲೋಕಸಭೆ ಚುನಾವಣೆಗೆ ಮುನ್ನವೂ ಅಂತದ್ದೊಂದು ಚಟುವಟಿಕೆ ಪುನರಾವರ್ತನೆ ಆಗಬಹುದೆಂಬ ಸುಳಿವನ್ನು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿದ್ದಾರೆ.

ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿ ಬಿಜೆಪಿ ಸೇರಿದವರು ಪುನಃ ಕಾಂಗ್ರೆಸ್ ಸೇರುತ್ತಾರೆಂಬ ವದಂತಿ ಹಿನ್ನೆಲೆಯಲ್ಲಿ ಡಿಕೆಶಿ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಸ್ಥಳೀಯವಾಗಿ ಒಮ್ಮೊಮ್ಮೆ ಅನುಕೂಲಸಿಂಧು ರಾಜಕಾರಣ ಮಾಡಿಕೊಳ್ಳಬೇಕಾಗುತ್ತದೆ. ಯಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎನ್ನುವುದು ಸ್ಥಳೀಯ ನಾಯಕರಿಗೆ ಬಿಟ್ಟ ವಿಚಾರ ಎಂದು ಹೇಳಿದರು.

"ನಮ್ಮ ಮುಂದಿನ ಗುರಿ ಲೋಕಸಭಾ ಚುನಾವಣೆ. ಯಾವುದೇ ಕಾರಣಕ್ಕೂ ದ್ವೇಷ ಸಾಧಿಸಬೇಡಿ, ಪಕ್ಷದ ಮತಗಳಿಕೆ ಪ್ರಮಾಣ ಹೆಚ್ಚು ಮಾಡಿ ಎಂದು ನಮ್ಮ ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇವೆ ಎಂದರು.

ದೊಡ್ಡ, ದೊಡ್ಡ ನಾಯಕರನ್ನು ಸೇರಿಸಿಕೊಳ್ಳುತ್ತಿಲ್ಲ, ಅನ್ಯಪಕ್ಷಗಳ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಕಾಂಗ್ರೆಸ್ ಸೇರ್ಪಡೆಗೆ ಒಲವು ತೋರಿದ್ದಾರೆ" ಎಂದು ತಿಳಿಸಿದರು.

ಸರ್ಕಾರದ ವಿರುದ್ಧ ಆರೋಪಗಳು ಬರುತ್ತಿರುವ ಕುರಿತು ಉತ್ತರಿಸಿ, ಯಾರ್ಯಾರು ಏನೆಲ್ಲಾ ಹೇಳಬೇಕೋ ಹೇಳಲಿ. ಅವರದ್ದು ಏನಿದೆಯೋ ಅದೆಲ್ಲವೂ ಮೊದಲು ಹೊರಗಡೆ ಬರಲಿ. ಅವರ ಮಾತುಗಳೆಲ್ಲ ಮುಗಿಯಲಿ. ಆನಂತರ ನಮ್ಮ ಬಳಿ ಇರುವುದನ್ನು ಬಯಲು ಮಾಡುತ್ತೇವೆ ಎಂದು ಹೇಳಿದರು.

ನಮ್ಮ ಬಳಿ ಇರುವ ಮಾಹಿತಿ ಬಹಿರಂಗ ಪಡಿಸಲು ಸಾಕಷ್ಟು ಸಮಯವಿದೆ. ನಮ್ಮ ಬಗ್ಗೆ ತುಂಬಾ ಚರ್ಚೆ ನಡೆಸುತ್ತಿರುವವರಿಗೆ ಉತ್ತರ ನೀಡುವ ಕಾಲ ಸಮೀಪಿಸಿದೆ, ಉತ್ತರ ನೀಡೋಣ ಎಂದರು.