ತಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮದಲ್ಲಿ ಭಗವಾನ್ ಪಾರ್ಶ್ವನಾಥ ಸ್ವಾಮಿ ಬಸದಿ ಜೀರ್ಣೋದ್ಧಾರ ಕಾಮಗಾರಿಗೆ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಭೂಮಿಪೂಜೆ ನೆರವೇರಿಸಿದರು. 
ನ್ಯೂಸ್

ಪಾರ್ಶ್ವನಾಥ ಬಸದಿ ಜೀರ್ಣೋದ್ಧಾರಕ್ಕೆ ಚಾಲನೆ

ಅಭಿನಯ್ ಎಚ್.ಎಂ

ತಿ.ನರಸೀಪುರ: ಶ್ರೀ ಪಾರ್ಶ್ವನಾಥ ಬಸದಿ ಜೀರ್ಣೋದ್ಧಾರಗೊಳಿಸಲಾಗುವ ಕಾಮಗಾರಿಗೆ ಶ್ರೀ ಕ್ಷೇತ್ರ ಕನಕಗಿರಿಯ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಸ್ವಾಮೀಜಿ ಭೂಮಿಪೂಜೆ ನೆರವೇರಿಸಿದರು.

ತಾಲೂಕಿನ ಮೂಗೂರು ಗ್ರಾಮದಲ್ಲಿರುವ ಬಸ್ತಿ ದೇವರ ಗುಡಿ ಸಂಪೂರ್ಣ ಶಿಥಲಾವಸ್ಥೆ ತಲುಪಿದ್ದ ಹಿನ್ನೆಲೆಯಲ್ಲಿ ಮೂಗೂರು ಬಸ್ತಿ ದೇವರಗುಡಿ ದಿಗಂಬರ ಜೈನ ಸೇವಾ ಟ್ರಸ್ಟ್, ಶ್ರೀ ಧರ್ಮಸ್ಥಳ ಮಂಜುನಾಥ ಧರ್ಮೋತ್ಥಾನ ಟ್ರಸ್ಟ್, ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರ ಇಲಾಖೆ ವತಿಯಿಂದ ಜೀರ್ಣೋದ್ಧಾರ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, 18 ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ಯೋಜನೆ ರೂಪಿಸಲಾಗಿದೆ.

ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ಕುರಿತು ವಿವರ ನೀಡಿದ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ನ ಸೂಪರ್‌ವೈಸರ್ ಜಯಕೀರ್ತಿ, ದೇವಾಲಯ ಶಿಥಿಲವಾಗಿರುವುದರಿಂದ ಸಂಪೂರ್ಣ ನೆಲಸಮಗೊಳಿಸಿ ಮೂಲ ಸ್ವರೂಪಕ್ಕೆ ಯಾವುದೇ ಧಕ್ಕೆಯಾಗದಂತೆ ಕಾಮಗಾರಿ ಕೈಗೊಳ್ಳಲಾಗುತ್ತದೆ. ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಬಸದಿಗೆ ಐತಿಹಾಸಿಕ ಹಿನ್ನೆಲೆ ಇದೆ. ಜೀರ್ಣೋದ್ಧಾರ ಸಮಯದಲ್ಲಿ ತಳಪಾಯದಿಂದ ಭದ್ರತೆ ಒದಗಿಸಿ ಶಿಥಿಲವಾಗಿರುವ ಕಲ್ಲುಗಳನ್ನು ಬದಲಿಸಿ ಗುಣಮಟ್ಟದ ಕಲ್ಲುಗಳನ್ನು ಉಪಯೋಗಿಸಲಾಗುವುದು. ಬಸದಿ ಕಾಮಗಾರಿಯನ್ನು ಒಂದೂವರೆ ವರ್ಷದೊಳಗೆ ಸಂಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದರು.

ನವೀಕರಣವಲ್ಲ, ಜೀರ್ಣೋದ್ಧಾರ!: ಐತಿಹಾಸಿಕ ಹಿನ್ನೆಲೆ ಹೊಂದಿರುವ ದೇವಸ್ಥಾನಗಳ ಶಿಲ್ಪಕಲೆಯನ್ನು ಸಂರಕ್ಷಣೆ ಮಾಡುವ ಉದ್ದೇಶದಿಂದ ನವೀಕರಣ ಮಾಡುವುದಿಲ್ಲ. ಮೂಲ ಸ್ವರೂಪಕ್ಕೆ ಯಾವುದೇ ಧಕ್ಕೆಯಾಗದಂತೆ ಜೀರ್ಣೋದ್ಧಾರ ಮಾಡಲಾಗುವುದು. ವಿಮಾನಗೋಪುರ, ನೆಲಹಾಸು, ವಿದ್ಯುತ್ ಹಾಗೂ ಮರದ ಬಾಗಿಲುಗಳನ್ನು ನೂತನವಾಗಿ ಅಳವಡಿಸಿ ಬಸದಿಯನ್ನು ಸ್ಥಳೀಯ ಟ್ರಸ್ಟ್‌ನ ಸುಪರ್ದಿಗೆ ನೀಡಲಾಗುತ್ತದೆ. ಮುಂದೆ ಅವರೇ ನಿರ್ವಹಣೆ ಮಾಡಲಿದ್ದಾರೆ ಎಂದು ತಿಳಿಸಿದರು.

ನಗರಸಭೆ ಮಾಜಿ ಸದಸ್ಯ ನಾಗಭೂಷಣ್, ಡಾ.ಎಚ್.ಎಸ್.ಎಲ್.ಕುಮಾರ್,ಪ್ರಸನ್ನ ಕುಮಾರ್,ಮೂಗೂರು ಬಸ್ತಿ ದೇವರ ಗುಡಿ ದಿಗಂಬರ ಜೈನ ಸೇವಾ ಟ್ರಸ್ಟ್ ಅಧ್ಯಕ್ಷೆ ಶೀಲಾ ಅನಂತರಾಜು, ಉಪಾಧ್ಯಕ್ಷ ಎಂ.ಪಿ.ನಿರ್ಮಲ್‌ಕುಮಾರ್,ಕಾರ್ಯದರ್ಶಿ ಮಹಾವೀರ ಬಿ.ಜೈನ್, ಸಹ ಕಾರ್ಯದರ್ಶಿ ಸಿ.ಬಿ.ಸತೀಶ್, ಸಿ.ಬಿ.ನಾಗೇಂದ್ರಯ್ಯ, ಎನ್.ಜಿನೇಂದ್ರ ಪ್ರಕಾಶ್, ಕೋಶಾಧಿಕಾರಿ ಎಸ್.ಎ.ಪ್ರಶಾಂತ್ ಗ್ರಾ.ಪಂ.ಅಧ್ಯಕ್ಷ ಶಿವಣ್ಣ ಇತರರಿದ್ದರು.