ನ್ಯೂಸ್

ಇಂದಿನಿಂದ ಸಂಸತ್ ಮಳೆಗಾಲದ ಅಧಿವೇಶನ; ಸಂಸತ್ತಲ್ಲಿ ಸಿಂಧೂರ ಚರ್ಚೆಗೆ ಸಿದ್ಧ

ನವದೆಹಲಿ: ಆಪರೇಷನ್ ಸಿಂಧೂರ ಬಗ್ಗೆ ಮಳೆಗಾಲದ ಅಧಿವೇಶನದಲ್ಲಿ ರ್ಚಚಿಸಲು ಸರ್ಕಾರ ಸಿದ್ಧವಿರುವುದಾಗಿ ಕೇಂದ್ರ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ. ಭಾನುವಾರ ನಡೆದ ಸರ್ವಪಕ್ಷಗಳ ಸಭೆ ಬಳಿಕ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಸಂಸತ್ತಿನಲ್ಲಿ ಸೋಮವಾರ ಆರಂಭವಾಗಲಿರುವ ಮಳೆಗಾಲದ ಅಧಿವೇಶನದಲ್ಲಿ ಆಪರೇಷನ್ ಸಿಂಧೂರ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ರ್ಚಚಿಸಲು ಸರ್ಕಾರ ಸಿದ್ಧವಿರುವುದಾಗಿ ಅವರು ತಿಳಿಸಿದ್ದಾರೆ.

ಅಲ್ಲದೆ ಸಂಸತ್ತಿನ ಸುಗಮ ಕಾರ್ಯನಿರ್ವಹಣೆಗಾಗಿ ಆಡಳಿತ ಹಾಗೂ ವಿಪಕ್ಷಗಳ ನಡುವೆ ಉತ್ತಮ ಸಮನ್ವಯ ಅಗತ್ಯ ಎಂಬುದಾಗಿಯೂ ಅವರು ಆಶಯ ವ್ಯಕ್ತಪಡಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ-ಪಾಕಿಸ್ತಾನ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದಾಗಿ ಹೇಳಿಕೊಳ್ಳುತ್ತ ಬಂದಿರುವ ಹಿನ್ನೆಲೆಯಲ್ಲಿ ಆ ವಿಚಾರವನ್ನು ಸಂಸತ್ತಿನಲ್ಲಿ ಪ್ರಶ್ನಿಸಿ ಗದ್ದಲವೆಬ್ಬಿಸಲು ವಿಪಕ್ಷಗಳು ಯೋಜನೆ ಹಾಕಿಕೊಂಡಿರುವ ನಡುವೆಯೇ ಸಚಿವ ರಿಜಿಜು ಅವರು ಸಂಸತ್ತಿನಲ್ಲಿ ಆಪರೇಷನ್ ಸಿಂಧೂರ ಕುರಿತು ಚರ್ಚೆ ನಡೆಸುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸಂಸದೀಯ ವ್ಯವಹಾರಗಳ ಖಾತೆಯನ್ನೂ ಹೊಂದಿರುವ ರಿಜಿಜು, ಹೈಕೋರ್ಟ್ ನ್ಯಾಯಮೂರ್ತಿ ಸ್ಥಾನದಿಂದ ಯಶವಂತ್ ವರ್ವ ಅವರನ್ನು ಪದಚ್ಯುತಗೊಳಿಸುವ ಬಗ್ಗೆ ಸಂಸದರಿಂದ ಗಮನಾರ್ಹ ಬೆಂಬಲ ದೊರೆತಿದೆ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.

ಚರ್ಚೆ ಕಾವೇರುವ ಸಾಧ್ಯತೆ

ಅಧಿವೇಶನದಲ್ಲಿ ಪ್ರಸ್ತಾಪಿಸಲಿರುವ ವಿಷಯಗಳ ಬಗ್ಗೆ ಸರ್ವಪಕ್ಷಗಳ ಸಭೆಯಲ್ಲಿ ವಿಪಕ್ಷ ನಾಯಕರು ಪ್ರಸ್ತಾಪಿಸಿದ್ದು, ಬಿಹಾರದಲ್ಲಿನ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್​ಐಆರ್), ಪಹಲ್ಗಾಮ್ ಭಯೋತ್ಪಾದಕ ದಾಳಿ, ಭಾರತ-ಪಾಕ್ ಕದನವಿರಾಮ ಕುರಿತು ಟ್ರಂಪ್ ಮಧ್ಯಸ್ಥಿಕೆ ಘೋಷಣೆ ಮುಂತಾದ ವಿಷಯಗಳ ಕುರಿತು ಚರ್ಚೆ ಆಗಲಿರುವ ಹಿನ್ನೆಲೆಯಲ್ಲಿ ಈ ಸಲದ ಮಳೆಗಾಲದ ಅಧಿವೇಶನ ಕಾವೇರುವ ಸಾಧ್ಯತೆ ಇದೆ. ಟ್ರಂಪ್ ಹೇಳಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಹೇಳಿಕೆ ನೀಡಬೇಕು ಎಂದು ಪಕ್ಷ ಬೇಡಿಕೆ ಇಟ್ಟಿದೆ ಎಂಬುದಾಗಿ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ತಿಳಿಸಿದ್ದಾರೆ. ರಾಜ್ಯಸಭಾ ನಾಯಕ ಜೆ.ಪಿ.ನಡ್ಡಾ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಸರ್ಕಾರದ ಪ್ರತಿನಿಧಿಯಾಗಿ ಸಚಿವರಾದ ಕಿರಣ್ ರಿಜಿಜು, ಅರ್ಜುನ್ ರಾಮ್ ಮೇಘ್​ವಾಲ್ ಉಪಸ್ಥಿತರಿದ್ದರು.