ನವದೆಹಲಿ: ಆರ್ಥಿಕ ಬಲಾಢ್ಯತೆ, ಭದ್ರತೆ ಮತ್ತು ಮಾನವಹಕ್ಕುಗಳ ವಿಷಯವಾಗಿ ಜಾಗತಿಕವಾಗಿ ತನ್ನ ಪ್ರಭಾವಗಳನ್ನು ಹೆಚ್ಚಿಸಿಕೊಳ್ಳುತ್ತಿರುವ ಚೀನಾ ವಿರುದ್ಧ ಅಮೆರಿಕ ಸೇರಿ 8 ರಾಷ್ಟ್ರಗಳ ಸಂಸತ್ ಸದಸ್ಯರು ಸಿಡಿದೆದ್ದಿದ್ದಾರೆ. ಚೀನಾಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಚೀನಾ ವಿರುದ್ಧದ ಅಂತರ ಸಂಸದೀಯ ಒಕ್ಕೂಟ (The Inter-Parliamentary Alliance on China) ರಚಿಸಿಕೊಂಡು ಹೋರಾಟಕ್ಕೆ ಮುಂದಾಗಿದ್ದಾರೆ.
ಅಮೆರಿಕದ ರಿಪಬ್ಲಿಕನ್ ಸಂಸತ್ ಸದಸ್ಯ ಮಾರ್ಕೋ ರೂಬಿಯೋ ಮತ್ತು ಡೆಮಾಕ್ರಾಟ್ನ ಬಾಬ್ ಮೆನೆಂಡೆಜ್, ಜಪಾನ್ನ ಮಾಜಿ ರಕ್ಷಣಾ ಸಚಿವ ಗೆನ್ ನಕಾಟಾನಿ, ಯುರೋಪಿಯನ್ ಸಂಸದೀಯ ವಿದೇಶಾಂಗ ವ್ಯವಹಾರಗಳ ಸಮಿತಿ ಸದಸ್ಯ ಮಿರಿಯಮ್ ಲೆಕ್ಸ್ಮನ್ ಮತ್ತು ಬ್ರಿಟನ್ನ ಕನ್ಸರ್ವೇಟಿವ್ ಪಕ್ಷದ ಸಂಸದ ಇಯಾನ್ ಡಂಕನ್ ಸ್ಮಿತ್ ಈ ಸಮಿತಿಯ ಉಪಾಧ್ಯಕ್ಷರಾಗಿದ್ದಾರೆ. ಆಸ್ಟ್ರೇಲಿಯಾ, ಕೆನಡಾ, ಸ್ವೀಡನ್ ಮತ್ತು ನಾರ್ವೆ ಸಂಸದರು ಇದರ ಸದಸ್ಯರಾಗಿದ್ದಾರೆ.
ಆರ್ಥಿಕವಾಗಿ ಮತ್ತು ರಾಜತಾಂತ್ರಿಕವಾಗಿ ಚೀನಾದ ಪ್ರಭಾವ ಹೆಚ್ಚಾಗುತ್ತಿದೆ. ಇದರ ವಿರುದ್ಧ ಧ್ವನಿಎತ್ತಲು ಹಾಗೂ ಹಾಂಕಾಂಗ್ನ ಸ್ವಾಯತ್ತೆಗೆ ಧಕ್ಕೆಯನ್ನುಂಟು ಮಾಡುವ ಅಪಾಯಕಾರಿ ತನ್ನದೇ ಆದ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸುವ ಚೀನಾದ ಕ್ರಮವನ್ನು ವಿರೋಧಿಸಲು ಹಲವು ಬಾರಿ ಅಮೆರಿಕ ವಿವಿಧ ರಾಷ್ಟ್ರಗಳ ಸಹಾಯವನ್ನು ಪಡೆದುಕೊಳ್ಳಬೇಕಾಗುತ್ತದೆ.
ಈ ಹಿನ್ನೆಲೆಯಲ್ಲಿ ಅಸ್ತಿತ್ವಕ್ಕೆ ಬಂದಿರುವ ಅಮೆರಿಕ ಸೇರಿ 8 ರಾಷ್ಟ್ರಗಳ ಸಂಸದರ ಈ ಒಕ್ಕೂಟ ಚೀನಾಕ್ಕೆ ಸಂಬಂಧಿಸಿದ ಹಲವು ಕ್ರಮಗಳ ವಿರುದ್ಧ ಸೂಕ್ತವಾದ ಮತ್ತು ಸಂಘಟಿತವಾಗಿ ಧ್ವನಿ ಎತ್ತಲಿದೆ. ಕಮ್ಯುನಿಸ್ಟ್ ಪಾರ್ಟಿ ನೇತೃತ್ವದ ಚೀನಾ ಸರ್ಕಾರ ಜಾಗತಿಕ ಸವಾಲಾಗಿ ಪರಿಣಮಿಸಿದೆ ಎಂದು ಚೀನಾ ವಿರುದ್ಧ ಸದಾ ಟೀಕೆ ಮಾಡುವ ಮಾರ್ಕೋ ರೂಬಿಯೋ ಟ್ವಿಟರ್ ಸಂದೇಶದಲ್ಲಿ ಹೇಳಿದ್ದಾರೆ.
ಜಾಗತಿಕವಾಗಿ ಬಲಾಢ್ಯವಾಗುತ್ತಿರುವ ಚೀನಾದ ಆರ್ಥಿಕತೆಯಿಂದಾಗಿ ನಿಯಮ ಆಧಾರಿತ ವ್ಯಾಪಾರ ಪದ್ಧತಿ ಮೇಲೆ ತೀವ್ರ ಒತ್ತಡ ಬೀಳಲಾರಂಭಿಸಿದೆ. ಆಗಾಗ್ಗೆ ಕೆಲವು ರಾಷ್ಟ್ರಗಳು ಏಕಾಂಗಿಯಾಗಿ ಚೀನಾದ ವಿರುದ್ಧ ಸಿಡಿದ್ದೆದ್ದು, ಭಾರಿ ಬೆಲೆಯನ್ನೇ ತೆತ್ತಿವೆ. ಹಾಗಾಗಿ ಅದರ ವಿರುದ್ಧ ಸಂಘಟಿತ ಹೋರಾಟ ನಡೆಸುವ ಅವಶ್ಯಕತೆ ಇದೆ ಎಂದು ಒಕ್ಕೂಟದ ಸದಸ್ಯರು ಪ್ರತಿಪಾದಿಸಿದ್ದಾರೆ.