Parliament Monsoon Session : ಇಂದಿನಿಂದ ಮುಂಗಾರು ಅಧಿವೇಶನ ಆರಂಭವಾಗಿದೆ. ಕಲಾಪ ಆರಂಭವಾದ ಕೆಲವೇ ಸಮಯಗಳಲ್ಲಿ ವಿಪಕ್ಷಗಳು ಗದ್ದಲ ಸೃಷ್ಟಿಸಿದ್ದರಿಂದ ಕಲಾಪನ್ನು ಮಧ್ಯಾಹ್ನ 12 ಗಂಟೆಯ ಅಲ್ಪ ಸಮಯದವರೆಗೆ ಮುಂದೂಡಲಾಯಿತು. ಇದೀಗ ಮತ್ತೆ ಕಲಾಪ ಆರಂಭವಾಗಿದ್ದು, ಮತ್ತೆ ವಿಪಕ್ಷಗಳು ಪಹಲ್ಗಾಮ್ ದಾಳಿ ವಿಚಾರವಾಗಿ ಮಾತನಾಡಲು ಒತ್ತಾಯಿಸಿವೆ.
ಪಹಲ್ಗಾಮ್ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉಂಟಾದ ಉದ್ವಿಗ್ನತೆಯನ್ನು ತಗ್ಗಿಸಿದ್ದು ನಾನೇ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಹೇಳುತ್ತಿರುವ ಬಗ್ಗೆ ಚರ್ಚೆ ಮಾಡುವಂತೆ ಪ್ರತಿಪಕ್ಷಗಳು ಒತ್ತಾಯಿಸಿದವು. ಹೀಗಾಗಿ ಸ್ವಲ್ಪ ಸಮಯದವರೆಗೆ ಕಲಾಪವನ್ನು ಮುಂದೂಡಲಾಯಿತು.
ಕೆಳಮನೆಯಲ್ಲಿ, ವಿಪಕ್ಷದ ಸಂಸದರು ಪ್ರಶ್ನೋತ್ತರ ಅವಧಿಯಲ್ಲಿ ಘೋಷಣೆಗಳನ್ನು ಕೂಗುತ್ತಾ, ಪಹಲ್ಗಾಮ್ ದಾಳಿಯ ಕುರಿತು ಚರ್ಚೆಗೆ ಒತ್ತಾಯಿಸಿದರು. ಇದು ಚರ್ಚೆಗೆ ಅಡ್ಡಿಪಡಿಸಿತು, ಅಧಿವೇಶನ ಪ್ರಾರಂಭವಾದ ಕೇವಲ 20 ನಿಮಿಷಗಳ ನಂತರ ಸ್ಪೀಕರ್ ಓಂ ಬಿರ್ಲಾ ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಿಕೆ ಘೋಷಿಸಿದರು. ಇತ್ತ ಮೇಲ್ಮನೆಯಲ್ಲಿ, ವಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಟ್ರಂಪ್ ಅವರ ಕದನ ವಿರಾಮ ಹೇಳಿಕೆಗಳು ದೇಶಕ್ಕೆ ಮಾಡಿದ ಅವಮಾನ ಎಂದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಮುಖ್ಯಸ್ಥ ಜೆ.ಪಿ. ನಡ್ಡಾ ಅವರು, ಕಾಂಗ್ರೆಸ್ ಪ್ರಮುಖ ವಿಷಯಗಳಿಂದ ದೂರ ಸರಿಯುತ್ತಿದೆ ಎಂದು ಆರೋಪಿಸಿದರು.
ಇದೀಗ ಮತ್ತೆ ಕಲಾಪ ಆರಂಭವಾಗಿದ್ದು, ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು 260 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಏರ್ ಇಂಡಿಯಾ ಅಪಘಾತದ ಕುರಿತು ಲೋಕಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿಯೂ ಸಹ ಅಡಚಣೆಗಳು ಕಂಡುಬಂದವು ಎಂದು ವರದಿಯಾಗಿದೆ.
ರಾಜ್ಯಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಜೆ.ಪಿ. ನಡ್ಡಾ, ಆಪರೇಷನ್ ಸಿಂಧೂರ ಬಗ್ಗೆ ವಿವರವಾಗಿ ಚರ್ಚಿಸಲು ಸರ್ಕಾರ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಪ್ರತಿಪಾದಿಸಿದರು. ನಾವು ಆಪರೇಷನ್ ಸಿಂಧೂರ ಬಗ್ಗೆ ಮಾತನಾಡುತ್ತೇವೆ ಮತ್ತು ಮಾತನಾಡಲು ಬಯಸುತ್ತೇವೆ. ನಾವು ಯಾವುದೇ ವಿವರಗಳನ್ನು ಮರೆಮಾಡಲು ಬಯಸುತ್ತೇವೆ ಎಂಬ ಭಾವನೆ ನಿಮ್ಮಲ್ಲಿ ಇರಬಾರದು. ಹಿಂದಿನ ಯಾವುದೇ ಸರ್ಕಾರದ ಅಡಿಯಲ್ಲಿ ಈ ರೀತಿಯ ಕಾರ್ಯಾಚರಣೆ ನಡೆದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ನಾವು ಸಾಧಿಸಿದ್ದು ಅಭೂತಪೂರ್ವ. ಭಾರತ ಸರ್ಕಾರವು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಎಲ್ಲಾ ವಿವರಗಳನ್ನು ಹಂಚಿಕೊಳ್ಳಲು ಸಿದ್ಧವಾಗಿದೆ ಎಂದು ನಡ್ಡಾ ಹೇಳಿದರು.