ನ್ಯೂಸ್

ಪರಿಷತ್ ಚುನಾವಣೆ ಫಿಕ್ಸ್; ಲಕ್ಷ್ಮಣ್​ ಸವದಿ V/S ಅನಿಲ್​ಕುಮಾರ್​

lakshmihegde

ಬೆಂಗಳೂರು: ವಿಧಾನ ಪರಿಷತ್​ಗೆ ಅವಿರೋಧ ಆಯ್ಕೆ ಕನಸು ಕಾಣುತ್ತಿದ್ದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಪಕ್ಷೇತರ ಅಭ್ಯರ್ಥಿ ಅನಿಲ್​ಕುಮಾರ್ ಅಡ್ಡಗಾಲು ಹಾಕಿದ್ದು, ಬಿಜೆಪಿ ಅಭ್ಯರ್ಥಿ ಸವದಿ ಆಯ್ಕೆಗೆ ಅಗತ್ಯ ಸಂಖ್ಯಾಬಲವಿದ್ದರೂ ಫೆ.17ರಂದು ಮತದಾನದ ಮೂಲಕವೇ ಆಯ್ಕೆ ಅಂತಿಮಗೊಳ್ಳಬೇಕಿದೆ.

ನಾಮಪತ್ರ ವಾಪಸ್​ಗೆ ಕೊನೆಯ ದಿನವಾದ ಸೋಮವಾರ ಯಾರೊಬ್ಬರೂ ಹಿಂಪಡೆದಿಲ್ಲ. ಸವದಿ ಎದುರು ಸ್ಪರ್ಧಿಸಿರುವ ಅನಿಲ್ ಅವರ ನಾಮಪತ್ರ ವಾಪಸ್ ತೆಗೆಸಲು ಇಡೀ ದಿನ ಕಸರತ್ತು ನಡೆಯಿತು. ಮೂವರು ಸಚಿವರ ಮಾತಿಗೂ ಕಿಮ್ಮತ್ತು ಸಿಗದೆ ಇದ್ದಾಗ, ಕೆಲ ಸ್ವಾಮೀಜಿಗಳ ಮೂಲಕ ಅವರನ್ನು ಸಂರ್ಪಸಲಾಯಿತು. ಆದರೂ ಫಲ ಸಿಗದಾಯಿತು. ಫೆ.18ರೊಳಗೆ ವಿಧಾನಸಭೆ ಅಥವಾ ಪರಿಷತ್​ಗೆ ಸವದಿ ಸದಸ್ಯರಾಗಲೇಬೇಕಾದ ಅನಿವಾರ್ಯತೆ ಇದ್ದು, ಆಯ್ಕೆಯಲ್ಲಿ ಹೆಚ್ಚು ಕಡಿಮೆಯಾದರೆ ಮುಜುಗರಕ್ಕೀಡಾಗುವುದಲ್ಲದೆ, ಡಿಸಿಎಂ ಸ್ಥಾನ ತೊರೆಯಬೇಕಾಗುತ್ತದೆ.

ವಿರೋಧಿಗಳ ತಂತ್ರವೇ?: ಬಿಜೆಪಿಯಲ್ಲಿ ಒಂದು ಗುಂಪಿಗೆ ಒಲ್ಲದ ಶಿಶುವಾಗಿರುವ ಸವದಿ ಅವರನ್ನು ಕಟ್ಟಿ ಹಾಕಲು ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಮೂಲಕ ರಾಜಕೀಯ ತಂತ್ರ ಹೆಣೆಯಲಾಗಿದೆಯೇ ಎಂಬ ಅನುಮಾನ ಹುಟ್ಟಿಕೊಂಡಿವೆ. ಸೂಚಕರ ಖಾಲಿ ಪತ್ರಕ್ಕೆ ಪಕ್ಷದ ಶಾಸಕರ ಸಹಿ ಹಾಕಿಸಿಕೊಂಡಿದ್ದ ರೇವಣ್ಣ, ರಿಯಲ್ ಎಸ್ಟೇಟ್ ಉದ್ಯಮ ದಲ್ಲಿರುವ ಅನಿಲ್ ಕೈಯಲ್ಲಿ ನಾಮಪತ್ರ ಹಾಕಿಸಿದ ಬಳಿಕವಷ್ಟೇ ಯಾರನ್ನು ಅಭ್ಯರ್ಥಿ ಮಾಡಿದ್ದಾರೆ ಎಂಬ ವಾಸ್ತವ ಸಹಿ ಹಾಕಿದ್ದ ಶಾಸಕರಿಗೆ ತಿಳಿದಿದೆ.