ನ್ಯೂಸ್

ಸಂಸದರ ಕೋಟಾಕ್ಕೆ ಬ್ರೇಕ್?; ಸೆಂಟ್ರಲ್ ಸ್ಕೂಲ್ ಪ್ರವೇಶಾತಿಯಲ್ಲಿ ತಾರತಮ್ಯ ಬೇಡ ಎಂದ ಸ್ಪೀಕರ್

Webdesk - Ravikanth

ನವದೆಹಲಿ: ಸೆಂಟ್ರಲ್ ಸ್ಕೂಲ್​ಗಳಲ್ಲಿ ಸಂಸದರ ಶಿಫಾರಸಿನ ಮೇರೆಗೆ 10 ವಿದ್ಯಾರ್ಥಿಗಳಿಗೆ ಪ್ರವೇಶ ಒದಗಿಸುವ ಸಂಸದರ ಕೋಟಾವನ್ನು ನಿಲ್ಲಿಸುವ ಬಗ್ಗೆ ಸರ್ಕಾರ ಒಲವು ತೋರಿದೆ. ಸಂಸದರ ಕೋಟಾದ ಈ ಮೀಸಲು ತಾರತಮ್ಯದ ಮೀಸಲು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ರಾಜಕೀಯ ಪಕ್ಷದ ನೇತಾರರ ಜತೆಗೆ ಸರ್ಕಾರ ಸಮಾಲೋಚನೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್​ಗೆ ಸೂಚಿಸಿದರು. ಸದನದಲ್ಲಿರುವ ರಾಜಕೀಯ ನಾಯಕರ ಜತೆಗೆ ಸಚಿವರು ಸಭೆ ನಡೆಸಲಿ. ಬಳಿಕ ಶಾಲೆಗಳಲ್ಲಿ ಇರುವ ಸಂಸದರ ಕೋಟಾದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿ ಎಂದರು.

ಕಾಂಗ್ರೆಸ್ ಸಂಸದ ಮನಿಷ್ ತಿವಾರಿ ಈ ವಿಚಾರವನ್ನು ಮೊದಲು ಪ್ರಸ್ತಾಪಿಸಿದ್ದು, ಸೆಂಟ್ರಲ್ ಸ್ಕೂಲ್ ಸೀಟುಗಳಿಗೆ ಶಿಫಾರಸು ಪತ್ರ ನೀಡುವಂತೆ ಪ್ರತಿ ವರ್ಷ ಅನೇಕ ಬೇಡಿಕೆಗಳು ಬರುತ್ತಿವೆ. 10 ಸೀಟುಗಳಷ್ಟೇ ಇರುವ ಕಾರಣ ಇವುಗಳನ್ನು ಪೂರೈಸಲಾಗುತ್ತಿಲ್ಲ. ಕೋಟಾ ಸಂಖ್ಯೆ ಹೆಚ್ಚಿಸಬೇಕು ಅಥವಾ ಕೋಟಾ ವ್ಯವಸ್ಥೆ ಕೊನೆಗೊಳಿಸಬೇಕು ಎಂದು ಆಗ್ರಹಿಸಿದರು. ಈ ವಿಚಾರದಲ್ಲಿ ಸದನ ಒಮ್ಮತದ ತೀರ್ಮಾನ ತೆಗೆದಕೊಳ್ಳುವುದಾದರೆ, ಸರ್ಕಾರ ಈ ದಿಶೆಯಲ್ಲಿ ಕೆಲಸ ಮಾಡಲಿದೆ ಎಂದು ಸಚಿವ ಪ್ರಧಾನ್ ಹೇಳಿದರು. ಭಾರತದ ಶೇಕಡ 95 ಗ್ರಾಮಗಳಲ್ಲಿ ಪ್ರತಿ 5 ಕಿ.ಮೀ. ವ್ಯಾಪ್ತಿಯಲ್ಲಿ ಸೆಕೆಂಡರಿ ಸ್ಕೂಲ್​ಗಳು ಇವೆ. 7 ಕಿ.ಮೀ. ಅಂತರದಲ್ಲಿ ಸೀನಿಯರ್ ಸೆಕೆಂಡರಿ ಸ್ಕೂಲ್​ಗಳಿವೆ ಎಂದು ಶಿಕ್ಷಣ ಖಾತೆ ರಾಜ್ಯ ಸಚಿವೆ ಅನ್ನಪೂರ್ಣಾ ದೇವಿ ಪ್ರಶ್ನೆಯೊಂದಕ್ಕೆ ಲೋಕಸಭೆಯಲ್ಲಿ ಉತ್ತರಿಸಿದರು.

ವಿನಿಯೋಗ ಮಸೂದೆ ಹಿಂದಕ್ಕೆ: ಲೋಕಸಭೆಯಲ್ಲಿ ಅಂಗೀಕಾರಗೊಂಡ ಎರಡು ಪಾವತಿ ಮತ್ತು ವಿನಿಯೋಗ ಮಸೂದೆಗಳನ್ನು ರಾಜ್ಯಸಭೆ ಸೋಮವಾರ ಹಿಂದಕ್ಕೆ ಕಳುಹಿಸಿದೆ. 2021-22ನೇ ಸಾಲು ಮತ್ತು 2018-19ನೇ ಸಾಲಿನ ವಿನಿಯೋಗ ಮಸೂದೆಗಳು ಈ ರೀತಿ ತಿರಸ್ಕೃತವಾಗಿರುವಂಥವು. ಇದಕ್ಕೆ ರಾಜ್ಯಸಭೆಯ ಅನುಮೋದನೆ ಸಿಕ್ಕರೆ ಮಾತ್ರವೇ ಸರ್ಕಾರದ ಪಾವತಿ ಮತ್ತು ವಿನಿಯೋಗಗಳು ದೃಢೀಕರಿಸಲ್ಪಡುತ್ತವೆ. ಈ ಮಸೂದೆಗಳನ್ನು ಇನ್ನು 14 ದಿನಗಳ ಒಳಗೆ ಸರ್ಕಾರ ಮತ್ತೆ ರಾಜ್ಯಸಭೆಯಲ್ಲಿ ಮಂಡಿಸಬೇಕು. ಆದಾಗ್ಯೂ, ರಾಜ್ಯಸಭೆಯ ಶಿಫಾರಸನ್ನು ಅಂಗೀಕರಿಸುವುದು ಮತ್ತು ತಿರಸ್ಕರಿಸುವುದು ಲೋಕಸಭೆಯ ವಿವೇಚನೆಗೆ ಬಿಟ್ಟ ವಿಚಾರ.

ಸಂಸತ್​ಗೆ ಸರ್ಕಾರದ ಉತ್ತರ

  • ಇಪಿಎಫ್​ಒ ಬಡ್ಡಿದರ ಶೇಕಡ 8.1 ಇತರೆ ಹಣಕಾಸು ಯೋಜನೆಗಳಿಗೆ ಹೋಲಿಸಿದರೆ ಉತ್ತಮವಾಗಿದೆ. ಇದು ಇಂದಿನ ವಾಸ್ತವದ ಪ್ರತೀಕ ಎಂದು ಹಣಕಾಸು ಸಚಿವೆ ನಿರ್ಮಲಾ ತಿಳಿಸಿದರು.
  • ನಾಲ್ಕು ಕಾರ್ವಿುಕ ನೀತಿಗಳ ಕರಡು ನಿಯಮಗಳನ್ನು ಕನಿಷ್ಠ 18 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಷ್ಟೇ ಪ್ರಕಟಿಸಿವೆ. ಇನ್ನುಳಿದಂತೆ, ವೇತನ ನೀತಿಗೆ ಸಂಬಂಧಿಸಿ 27 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಕರಡು ನೀತಿ ಪ್ರಕಟಿಸಿವೆ.
  • ಹೊಸ ಸಂಸತ್ ಭವನದ ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್ ಶೇಕಡ 44 ಭೌತಿಕ ಪ್ರಗತಿ ಸಾಧಿಸಿದೆ. ಸರ್ಕಾರ ಇದುವರೆಗೆ ಈ ಪ್ರಾಜೆಕ್ಟ್​ಗಾಗಿ 480 ಕೋಟಿ ರೂಪಾಯಿ ವ್ಯಯಿಸಿದೆ
  • ಕ್ರಿಪ್ಟೊ ಕರೆನ್ಸಿ ಅಥವಾ ಯಾವುದೆ ಡಿಜಿಟಲ್ ಕರೆನ್ಸಿಗಳ ಮೈನಿಂಗ್​ಗೆ ಉಂಟಾದ ವೆಚ್ಚವನ್ನು ತೆರಿಗೆ ವಿನಾಯಿತಿಗೆ ಪರಿಗಣಿಸಲಾಗುವುದಿಲ್ಲ. ಇದಕ್ಕೆ ಆದಾಯ ತೆರಿಗೆ ಕಾಯ್ದೆಯಲ್ಲಿ ಅವಕಾಶ ಇಲ್ಲ ವಿತ್ತ ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ತಿಳಿಸಿದರು.

ಕಚ್ಚಾ ತೈಲ ಕೊರತೆ ಇಲ್ಲ: ರಷ್ಯಾ-ಯೂಕ್ರೇನ್ ಬಿಕ್ಕಟ್ಟಿನಿಂದಾಗಿ ಕಚ್ಚಾ ತೈಲಕ್ಕೆ ಕೊರತೆ ಆಗಬಹುದೆಂಬ ಭೀತಿ ಬೇಡ. ಭಾರತಕ್ಕೆ ಆಮದು ಮಾಡಿಕೊಳ್ಳುವ ಕಚ್ಚಾ ತೈಲ ಪ್ರಮಾಣದಲ್ಲಿ ರಷ್ಯಾದ ಮಿನಿಸ್​ಕ್ಯೂಲ್​ನಿಂದ ಆಮದು ಮಾಡಿಕೊಳ್ಳುತ್ತಿರುವುದು ಶೇಕಡ 0.2 ಮಾತ್ರ. ನಮಗೆ ನಿತ್ಯ 50 ಲಕ್ಷ ಬ್ಯಾರೆಲ್ ತೈಲ ಬೇಕು ಎಂದು ಸರ್ಕಾರ ತಿಳಿಸಿದೆ.

ಗಡ್ಕರಿಗೆ ಮೆಚ್ಚುಗೆ: ಲೋಕಸಭೆಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕಾರ್ಯವೈಖರಿ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು. ಇದೇ ವೇಳೆ ಹಲವು ಸಂಸದರು ಕ್ಷಿಪ್ರಗತಿಯಲ್ಲಿ ನಿರ್ವಣವಾಗುತ್ತಿರುವ ರಸ್ತೆಗಳ ಗುಣಮಟ್ಟದ ಬಗ್ಗೆ ಕಾಳಜಿ ವ್ಯಕ್ತಪಡಿಸಿದರು.

ಏಡ್ಸ್ ಕಾರ್ಯಕ್ರಮದ ಅವಧಿ ವಿಸ್ತರಣೆ: ರಾಷ್ಟ್ರೀಯ ಏಡ್ಸ್ ಮತ್ತು ಎಸ್​ಟಿಡಿ ಕಂಟ್ರೋಲ್ ಪ್ರೋಗ್ರಾಂ ಅವಧಿಯನ್ನು ಏಪ್ರಿಲ್ 2021ರಿಂದ 2026 ಮಾರ್ಚ್ 31ರ ತನಕ ವಿಸ್ತರಿಸುವ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಸೋಮವಾರ ಅನುಮೋದಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇದಕ್ಕಾಗಿ 15,471.94 ಕೋಟಿ ರೂಪಾಯಿ ಮೀಸಲಿಡುವ ಪ್ರಸ್ತಾಪಕ್ಕೂ ಒಪ್ಪಿಗೆ ನೀಡಲಾಗಿದೆ. ಈ ಯೋಜನೆ ಐದನೇ ಹಂತ ತಲುಪಿದೆ. 1992ರಲ್ಲಿ ಮೊದಲ ಹಂತಕ್ಕೆ ಚಾಲನೆ ಸಿಕ್ಕಿತ್ತು.