ತೆಲಂಗಾಣ: ಬೇಸಿಗೆ ರಜೆ ಇದ್ದ ಕಾರಣ ಅಜ್ಜಿ ಮನೆಗೆ ಹೋಗಿದ್ದ ಇಬ್ಬರು ಸಹೋದರಿಯರು ಕಾರಿನಲ್ಲಿ ಆಟವಾಡುತ್ತಿದ್ದಾಗ ಸಾವನ್ನಪ್ಪಿರುವ ಪ್ರಕರಣ ಬೆಳಕಿಗೆ ಬಂದಿದೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾದಲ್ಲಿ ಮಕ್ಕಳು ಕಾರಿನ ಬಾಗಿಲು ತೆರೆದು ಒಳಗೆ ಆಟವಾಡುತ್ತಿದ್ದು, ನಂತರ ಅವರ ಕಾರು ಲಾಕ್ ಆಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. 5 ವರ್ಷದ ತನ್ಮಯಿ ಶ್ರೀ ಮತ್ತು 4 ವರ್ಷದ ಅಭಿನಯ ಎಂಬ ಇಬ್ಬರು ಸಹೋದರಿಯರು ಮೃತಪಟ್ಟವರು ಎಂದು ಹೇಳಲಾಗಿದೆ.
ಹುಡುಗಿಯರು ಕಾರಿನ ಬಾಗಿಲು ಮುಚ್ಚಿಕೊಂಡಿರಬಹುದು ಮತ್ತು ಮತ್ತೆ ತೆರೆಯಲು ಸಾಧ್ಯವಾಗಿಲ್ಲ. ಅವರು ಒಂದು ಗಂಟೆಗೂ ಹೆಚ್ಚು ಕಾಲ ಕಾರಿನಲ್ಲಿ ಸಿಲುಕಿದ್ದಾರೆ ಕೊನೆಗೆ ಉಸಿರುಗಟ್ಟಿ ಪ್ರಜ್ಞೆ ತಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯಲ್ಲಿ ಅವರ ಚಿಕ್ಕಪ್ಪನ ಮದುವೆಯ ಬಗ್ಗೆ ಚರ್ಚೆ ನಡೆಯುತ್ತಿತ್ತು. ಇಡೀ ಮನೆಯ ಕುಟುಂಬಸ್ಥರು ಅತಿಥಿಗಳನ್ನು ಸ್ವಾಗತಿಸಲು ಸಿದ್ಧತೆಗಳಲ್ಲಿ ನಿರತರಾಗಿದ್ದರು. ಈ ಸಮಯದಲ್ಲಿ ಇಬ್ಬರೂ ಹುಡುಗಿಯರು ಆಟವಾಡುವುದರಲ್ಲಿ ನಿರತರಾಗಿದ್ದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ನಂತರ ಅವರು ಕಾರನ್ನು ಪರಿಶೀಲಿಸಿದಾಗ, ಇಬ್ಬರು ಮಕ್ಕಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವುದು ಕಂಡುಬಂದಿದೆ. ಕುಟುಂಬದವರು ಕಾರನ್ನು ಅನ್‌ಲಾಕ್ ಮಾಡಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ಅಲ್ಲಿನ ವೈದ್ಯರು ತಿಳಿಸಿದ್ದಾರೆ.
(ಏಜೆನ್ಸೀಸ್)
ಕಳೆದ ವರ್ಷ ನವೆಂಬರ್‌ನಲ್ಲಿ ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿ ನಡೆದ ಇದೇ ರೀತಿಯ ಮತ್ತೊಂದು ಘಟನೆಯಲ್ಲಿ, ಎರಡರಿಂದ ಏಳು ವರ್ಷದವರೆಗಿನ ನಾಲ್ಕು ಮಕ್ಕಳು ಕಾರಿನಲ್ಲಿ ಸಿಲುಕಿ ಸಾವನ್ನಪ್ಪಿದರು. ಆಟವಾಡುತ್ತಿದ್ದಾಗ ಯಾರೂ ನೋಡದ ಕಾರಣ ಈ ರೀತಿಯ ಒಂದು ಘಟನೆ ಸಂಭವಿಸಿತ್ತು.