ನ್ಯೂಸ್

ಮೃತದೇಹ ಭಾರತಕ್ಕೆ ತಂದರೂ ವಿಮಾನದಿಂದ ಕೆಳಗಿಳಿಸದೇ ವಾಪಸ್ ಕಳುಹಿಸಿದ್ದೇಕೆ?

ನವದೆಹಲಿ: ಕರೊನಾದಿಂದ ವಿಶ್ವವೇ ಸಂಕಷ್ಟದಲ್ಲಿರುವಾಗ ದೂರದ ದೇಶದಲ್ಲಿದ್ದರೂ ಮಗ ಸುರಕ್ಷಿತವಾಗಿದ್ದಾನೆ ಎಂದೇ ಆ ಹಿರಿಯ ಜೀವಗಳು ನೆಮ್ಮದಿಯಿಂದಿದ್ದವು. ಆದರೆ, ಏಪ್ರಿಲ್​ 17ರಂದು ಬರಸಿಡಿಲೊಂದು ಆ ಕುಟುಂಬಕ್ಕೆ ಬಡಿಯಿತು. ಅಬುದಾಬಿಯಲ್ಲಿ ಕೆಲಸ ಮಾಡುತ್ತಿದ್ದ ಮಗ ಕಮಲೇಶ್​ ಭಟ್​ ಹೃದಯಸ್ತಂಭನದಿಂದ ಇನ್ನಿಲ್ಲವಾಗಿದ್ದಾನೆ ಎಂಬ ಸುದ್ದಿ ಆತನ ಕಂಪನಿಯ ಎಚ್​ಆರ್​ ವಿಭಾಗದವರು ನೀಡಿದ್ದರು.

ಅಬುದಾಬಿಯ ಸ್ಥಳೀಯರು ಹಾಗೂ ಆತನ ಸ್ನೇಹಿತರ ನೆರವಿನಿಂದ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮೃತದೇಹವನ್ನು ಭಾರತಕ್ಕೆ ಕಳುಹಿಸಲು ಭಾರತೀಯ ದೂತಾವಾಸದಿಂದ ಅನುಮತಿಯನ್ನು ಪಡೆದಿದ್ದಾಯಿತು.

ಕಮಲೇಶ್​ ತೆಹ್ರಿ ಗಡ್ವಾಲ್​ನ ನಿವಾಸಿಯಾಗಿದ್ದ. ಮನೆಗೆ ಮೃತದೇಹವನ್ನು ತರಲು ಆತನ ಸಂಬಂಧಿಕರು ವಿಶೇಷ ಅನುಮತಿ ಪತ್ರವನ್ನು ಪಡೆದು ದೆಹಲಿಗೆ ಬಂದಿದ್ದರು. ಅಬುದಾಬಿಯಿಂದ ವಿಮಾನ ಬರುತ್ತಿದ್ದಂತೆ, ಅದರಲ್ಲಿ ಕಮಲೇಶ್​ನ ಮೃತದೇಹವಿದ್ದು, ತಮಗೆ ಹಸ್ತಾಂತರಿಸುವಂತೆ ಕುಟುಂಬಸ್ಥರು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಮೃತದೇಹವನ್ನು ಹಸ್ತಾಂತರಿಸದಂತೆ ನಮಗೆ ಗೃಹ ಸಚಿವಾಲಯದಿಂದ ಆದೇಶ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದಾಗ ಪಾಲಕರ ಹಾಗೂ ಸಂಬಂಧಿಕರ ಜಂಘಾಬಲವೇ ಉಡುಗಿ ಹೋಗಿದೆ. ಇಷ್ಟೇ ಅಲ್ಲ, ಬಂದ ವಿಮಾನದಲ್ಲೇ ಮೃತದೇಹವನ್ನು ವಾಪಸ್​ ಕಳುಹಿಸಿದ್ದು, ಮತ್ತಷ್ಟು ಕಂಗಾಲಾಗಿಸಿದೆ.

ಗೃಹ ಸಚಿವಾಲಯದ ಆದೇಶದ ಪ್ರತಿಯನ್ನು ನಮಗೆ ಒದಗಿಸಿಲ್ಲ, ಚಾಲ್ತಿಯಲ್ಲಿಲ್ಲದ ದೂರವಾಣಿ ಸಂಖ್ಯೆಯನ್ನು ನೀಡಿ ವಿಚಾರಿಸಿ ಎಂದಿದ್ದಾರೆ ಎಂದು ಕಮಲೇಶ್​ ಸಂಬಂಧಿಕರು ಆರೋಪಿಸಿದ್ದಾರೆ. ವಿವಿಧ ಇಲಾಖೆಗಳ ನಡುವಿನ ಸಮನ್ವಯ ಕೊರತೆಯಿಂದಾಗಿ ಈ ಸಮಸ್ಯೆ ಎದುರಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಮೃತದೇಹ ರವಾನೆ ಅಥವಾ ಹಸ್ತಾಂತರ ಸಂದರ್ಭದಲ್ಲಿ ಪಾಲಿಸಬೇಕಾದ ಶಿಷ್ಟಾಚಾರದ ಕ್ರಮಗಳ ಬಗ್ಗೆ ಅಬುದಾಬಿಯಲ್ಲಿರುವ ದೂತಾವಾಸ ಕಚೇರಿಯೊಂದಿಗೆ ಚರ್ಚೆ ನಡೆಸಿರುವುದಾಗಿ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.