ನನ್ನನ್ನು ಸಂರ್ಪಕಿಸಿ.’
-ಇದನ್ನು ಓದಿದ ಜನ ತರತರವಾಗಿ ಮಾತನಾಡಿಕೊಂಡರು. ಕೆಲವರು ಇವನೆಂತಹ ಕಟು ಹೃದಯಿ! ಬಾಲ್ಯದಲ್ಲಿ ತನ್ನನ್ನು ಹೊತ್ತು ಹೆತ್ತು ಸಾಕಿ ಸಲಹಿದ ಹೆತ್ತವರಿಗೆ, ಅವರ ವೃದ್ಧಾಪ್ಯದಲ್ಲಿ ಸೇವೆ ಮಾಡೋದನ್ನು ಬಿಟ್ಟು ಅವರನ್ನೇ ಮಾರಾಟ ಮಾಡಿಬಿಡೋದೇ? ಎಂಬುದಾಗಿ ಮಾತನಾಡಿಕೊಂಡರೆ, ಇನ್ನು ಕೆಲವರು ಬಡತನದ ಬೇಗೆಯನ್ನು ತಾಳಲಾರದೆ, ಕೆಲ ಕಡುಬಡವರು ತಮ್ಮ ಮಕ್ಕಳನ್ನೇ ಮಾರಾಟ ಮಾಡಿದ ಪ್ರಸಂಗಗಳಿವೆ. ಬಹುಶಃ ಈ ವ್ಯಕ್ತಿಗೂ ಕಡು ಬಡತನವಿರಬೇಕು ಎಂದುಕೊಂಡರು,
‘ಅಲ್ಲಾ ಈ ಮುದುಕರನ್ನು ಖರೀದಿಸಿದರೆ, ಸಮಸ್ಯೆಗಳನ್ನು ಖರೀದಿಸಿದಂತಲ್ಲವೇ? ಇಂತಹವರನ್ನು ಕೊಂಡುಕೊಂಡು ಆಗುವ ಪ್ರಯೋಜನವಾದರೂ ಏನು?’ ಎಂಬುದು ಇನ್ನು ಹಲವರ ಮಾತು. ಇಷ್ಟರಲ್ಲಿ ಮಧ್ಯ ವಯಸ್ಸಿನ ಒಂದು ದಂಪತಿಗಳು, ಈ ವೃದ್ಧ ದಂಪತಿಗಳನ್ನು ಕೊಂಡುಕೊಳ್ಳಲು ಮುಂದಾದರು. ಅಂತೆಯೇ, ಜಾಹೀರಾತು ನೀಡಿದವನ ಮನೆಗೆ ಹೋದರು. ಅದು ಬರೇ ಮನೆಯಲ್ಲ, ಒಂದು ಪುಟ್ಟ ಸುಂದರ ಅರಮನೆಯೇ ಆಗಿತ್ತು. ಘನತೆವೆತ್ತ ನಗುಮುಖದ ಹಿರಿಯ ದಂಪತಿಗಳು, ಬಾಗಿಲನ್ನು ತೆರೆದು ಈ ಯುವ ದಂಪತಿಗಳನ್ನು ಸ್ವಾಗತಿಸಿ ಕುಳ್ಳಿರಿಸಿ, ಬಂದ ಕಾರಣವನ್ನು ಕೇಳಲಾಗಿ, ಅವರು ಮಾರಾಟಕ್ಕಿರುವ ಮುದುಕ ಮುದುಕಿಯರನ್ನು ತೋರಿಸಿದರು.
‘ಎಷ್ಟು ಬೆಲೆಯಾದರೂ ಸರಿ ಅವರನ್ನು ಕೊಂಡುಕೊಳ್ಳಲು ಬಂದಿದ್ದೇವೆ’ ಎಂದು ಇವರೆಂದಾಗ ಆಶ್ಚರ್ಯ ಚಕಿತರಾದ ಹಿರಿಯ ದಂಪತಿಗಳು ಮತ್ತೆ ಆ ಯುವದಂಪತಿಗಳಿಗೆ, ‘ಈ ವೃದ್ಧರನ್ನು ಕೊಂಡುಕೊಂಡು ಏನು ಮಾಡುವಿರಿ? ಅವರಿಂದ ನಿಮಗೆ ಯಾವ ಪ್ರಯೋಜನವಿದೆ?’ಎಂಬ ಪ್ರಶ್ನೆಯನ್ನು ಕೇಳಿದರು. ಅದಕ್ಕುತ್ತರವಾಗಿ ಅವರು ಹೇಳಿದರು. ನೋಡಿ, ನಾವಿಬ್ಬರೂ ಬಾಲ್ಯದಲ್ಲೇ ನಮ್ಮ ಹೆತ್ತವರನ್ನು ಕಳಕೊಂಡ ನತದೃಷ್ಟರು. ಅಮ್ಮನ ಮಮತೆ, ಅಪ್ಪನ ಪ್ರೀತಿ ಏನೆಂಬುದನ್ನು ಅರಿಯಲು ಸಾಧ್ಯವಾಗದ ನಿರ್ಭಾಗ್ಯಶಾಲಿಗಳು, ಈಗ ನಮ್ಮ ಮಕ್ಕಳು ಅಜ್ಜ-ಅಜ್ಜಿ ಇಲ್ಲದೆ ಅನಾಥರಾಗಿದ್ದಾರೆ. ಅವರಿಗೋ ಅಜ್ಜನ ಜೊತೆ ಆಟವಾಡುವ ಆಸೆ, ಶಾಲೆಗೆ ಹೋಗುವ ಆಸೆ. ಅಜ್ಜಿಯಿಂದ ಹೊಸ ಹೊಸ ಕತೆಗಳನ್ನು ಕೇಳುವ ಆಸೆ.
ಹೀಗೆ ಏನೇನೋ ಆಸೆಗಳು ಇಂತಹ ಹಳೇ ಜೀವಗಳು ಮನೆಯಲ್ಲಿ ಇದ್ದರೆ, ಅವರ ಪ್ರೀತಿ-ನೀತಿಗಳನ್ನು ಪಡೆಯುವ ಸದವಕಾಶ ನನ್ನ ಮಕ್ಕಳಿಗೆ ಲಭ್ಯವಾಗಿ, ಹೆತ್ತವರ ರೂಪದಲ್ಲಿ ಬಂದಿರುವ ಈ ವೃದ್ಧ ಜೀವಿಗಳ ಸೇವೆಯನ್ನು ಮಾಡುವ ಸೌಭಾಗ್ಯ ನಮ್ಮದಾಗಬಹುದಲ್ಲವೇ?. ಮನೆ ತುಂಬಲು ಇದಕ್ಕಿಂತ ಮಿಗಿಲಾದ ಸಂತೋಷ ಬೇರೇನಿದೆ? ಎಲ್ಲಿದ್ದಾರೆ ಆ ಹಿರಿಯ ಜೀವಗಳು ತೋರಿಸಿ’. ಇವರ ಮಾತನ್ನು ಕೇಳಿ ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ‘ಮಾರಾಟಕ್ಕಿರುವವರೆಂದು ತಿಳಿಸಿದ ವೃದ್ಧ ದಂಪತಿಗಳು ಬೇರೆ ಯಾರೂ ಅಲ್ಲ ನಾವೇ’ ಎಂದರು. ಇದನ್ನು ಕೇಳಿ ದಿಗ್ಭಾ›ಂತರಾದ ಆ ಯುವ ದಂಪತಿಗಳು, ಈ ಭವ್ಯ ಬಂಗಲೆಯಲ್ಲಿ ವಾಸಿಸುತ್ತಿರುವ ನಿಮಗೆ ಎಲ್ಲವೂ ಇದೆಯಲ್ಲ! ನೀವ್ಯಾಕೆ ಇಂತಹ ನಿರ್ಧಾರವನ್ನು ಕೈಕೊಂಡಿರಿ? ಎಂದಾಗ ಉತ್ತರವಾಗಿ ಅವರು ಹೇಳಿದರು.
‘ಭಗವಂತ ನಮಗೆ ಎಲ್ಲವನ್ನೂ ಕೊಟ್ಟ. ಮನೆ, ಐಶ್ವರ್ಯ, ಕೆಲಸದಾಳುಗಳು ಇಲ್ಲಿ ಯಾವುದಕ್ಕೂ ಕೊರತೆ ಇಲ್ಲ. ಆದರೆ ಮಕ್ಕಳನ್ನು ಹಡೆಯುವ ಭಾಗ್ಯವನ್ನು ಮಾತ್ರ ನಮಗೆ ಕರುಣಿಸಲಿಲ್ಲ. ಮಕ್ಕಳು ಹೆತ್ತವರಿಗೆ ನೀಡುವ ಪ್ರೀತಿ-ಗೌರವ ಕಾಳಜಿ, ಸ್ನೇಹ ಏನೆಂಬುದೇ ನಮಗೆ ಗೊತ್ತಿಲ್ಲ. ಮೊಮ್ಮಕ್ಕಳ ಆಟ ಕೂಟ ಸ್ನೇಹ ಸಲುಗೆಗಳಿಂದಲೂ, ನಾವು ವಂಚಿತರಾಗಿದ್ದೇವೆ. ಈ ರೀತಿಯಲ್ಲಾದರೂ ಅವನ್ನು ಪಡೆಯುವ ಯೋಚನೆ ಮಾಡಿ, ಈ ನಿರ್ಧಾರಕ್ಕೆ ಬಂದೆವು. ನಿಮ್ಮಂತವರು ನಮ್ಮಂತವರನ್ನು ಕೊಂಡುಕೊಳ್ಳಲು ಮುಂದೆ ಬಂದು, ನಮಗೆ ಮಹದುಪಕಾರವನ್ನು ಮಾಡಿದಿರಿ. ಎಲ್ಲವೂ ಋಣಾನುಬಂಧವೆಂದು ತೋರುತ್ತದೆ. ಯಾರನ್ನಾದರೂ ನಮ್ಮ ಮಕ್ಕಳಂತೆ ಮೊಮ್ಮಕ್ಕಳಂತೆ ಕಾಣುವ, ಕಂಡು ಅವರ ಬಾಂಧವ್ಯವನ್ನು ಅನುಭವಿಸುವ ಅವಕಾಶವನ್ನು ಭಗವಂತ ಎಲ್ಲರಿಗೂ ಮುಕ್ತವಾಗಿ ಕರುಣಿಸಿದ್ದಾನೆ.
ಮುಂದೆ ಉಳಿದಿರುವ ವರುಷಗಳಿಗೆ ನೀವೇ ನನ್ನ ಮಕ್ಕಳು-ನಿಮ್ಮ ಮಕ್ಕಳೇ ನಮ್ಮ ಮೊಮ್ಮಕ್ಕಳು. ನಮ್ಮನ್ನು ನಿಮ್ಮವರೆಂದೇ ಭಾವಿಸಿ, ಸ್ವೀಕರಿಸಿ’ ಎನ್ನುತ್ತಾ ಆ ಯುವ ದಂಪತಿಗಳನ್ನು ಬಿಗಿದಪ್ಪಿ ಗಳಗಳನೆ ಅತ್ತರು. ಕೊನೆಗೆ ಇನ್ನೊಂದು ಮಾತನ್ನೂ ಹೇಳಿದರು. ನಮಗೆ ಯಾವ ಹಣದ ಅವಶ್ಯಕತೆಯೂ ಇಲ್ಲ. ಬದಲಾಗಿ ನಮ್ಮ ಈ ಎಲ್ಲಾ ಆಸ್ತಿ ಹಣವನ್ನೂ ನಿಮ್ಮ ಹೆಸರಿಗೇ ಬರೆದು ಬಿಡುತ್ತೇವೆ ಎಂದರು. ಎಲ್ಲವನ್ನೂ ಕೇಳಿದ ಯುವ ದಂಪತಿಗಳು ಕಣ್ಣೀರ ಧಾರೆಯೊಂದಿಗೆ ಹೇಳಿದರು, ಅಪ್ಪಾ, ಅಮ್ಮಾ, ಎಲ್ಲಾ ಆಸ್ತಿ ಹಣ ನಿಮ್ಮ ಹೆಸರಿನಲ್ಲೇ ಇರಲಿ, ನಿಮ್ಮ ಆಶೀರ್ವಾದ ಮಾತ್ರ ನಮ್ಮ ತಲೆಯ ಮೇಲಿರಲಿ, ನಿಮ್ಮ ಅನುಭವ ನಮ್ಮ ಮಕ್ಕಳಿಗಿರಲಿ. ನಮ್ಮ ಮನೆ ನಿಮ್ಮ ಮನೆಯೂ ಹೌದು, ತಡಬೇಡ. ಬನ್ನಿ ಹೊರಡೋಣ. ಹೀಗೂ ಉಂಟೇ? ಎಂಬ ಪ್ರಶ್ನೆಯಲ್ಲಿ, ಹೀಗೂ ಉಂಟು! ಎಂಬುದಕ್ಕೆ ಮನಕರಗಿಸುವ ಈ ಕತೆಯೇ ಸಾಕ್ಷಿ.