ನ್ಯೂಸ್

ಪರಮಹಂಸ ನುಡಿದೀಪ: ನಿಜವಾದ ಸಾಧಕ ಯಾರು?

kumarvrl

ಸಾಮಾನ್ಯವಾಗಿ ಯಾರು ಅತ್ಯಂತ ಹೆಚ್ಚಿನ ರೀತಿಯಲ್ಲಿ ಶಾಸ್ತ್ರಗಳನ್ನು, ಆಗಮ, ನಿಗಮಾದಿಗಳನ್ನು ಅಧ್ಯಯನ ಮಾಡಿ ಮಹಾನ್ ಪಂಡಿತ, ಜ್ಞಾನಿ ಎನಿಸುತ್ತಾನೋ ಆತನಿಗೂ ಭಗವತ್ ಸಾಕ್ಷಾತ್ಕಾರಕ್ಕೂ ಯಾವ ಸಂಬಂಧವೇ ಇರುವುದಿಲ್ಲ. ಕೇವಲ ಪಾಂಡಿತ್ಯ ಪ್ರದರ್ಶನಕ್ಕಾಗಿ ತಮ್ಮ ಅಧ್ಯಯನಗಳನ್ನು ಬಳಸಿಕೊಳ್ಳುತ್ತಾರೆ. ನಿಜವಾದ ಸಾಧಕನು ಅಂತಹ ಒಣ ಪಾಂಡಿತ್ಯಕ್ಕೆ ಯಾವುದೇ ರೀತಿಯ ಬೆಲೆ ನೀಡುವುದಿಲ್ಲ. ಸುಮ್ಮನೆ ವೇದವೇದಾಂತಗಳನ್ನು ಅಧ್ಯಯನ ಮಾಡಿಕೊಂಡಾಕ್ಷಣ ಸಾಧಕ ಎಂದೆನಿಸಿಕೊಳ್ಳುವುದಿಲ್ಲ. ಈ ಹಿನ್ನೆಲೆಯಲ್ಲಿ ತಮ್ಮ ಬಳಿಸಾರುತ್ತಿದ್ದ ಮುಗ್ಧ ಜೀವಿಗಳಿಗೆ ಶ್ರೀ ರಾಮಕೃಷ್ಣ ಪರಮಹಂಸರು, ‘ಜೀವನದ ಉದ್ದೇಶ ಭಗವತ್ ಸಾಕ್ಷಾತ್ಕಾರವೇ ವಿನಾ ಪಾಂಡಿತ್ಯ ಪ್ರದರ್ಶನವಲ್ಲ’ ಎಂಬುದನ್ನು ಸಾರಿ ತಿಳಿಸುತ್ತಾರೆ.

ಮಾನವ ಜನ್ಮ ಅತ್ಯಂತ ಪವಿತ್ರವಾದುದು. ಈ ಮಾನವಜನ್ಮದಿಂದಲೇ ಭಗವಾನುಭವ ಪಡೆಯಲು ಸಾಧ್ಯ. ಕೇವಲ ಜ್ಞಾನ ಸಂಪಾದನೆ ವೇದವೇದಾಂತ, ಮಂತ್ರ, ತಂತ್ರಗಳ ಮೂಲ ಗುರಿಯಲ್ಲ. ಬದಲಾಗಿ ಈ ತೆರನಾದ ಶಾಸ್ತ್ರಾಧ್ಯಯನಗಳಿಂದ ಸದಸದ್ವಿವೇಕ ಪಡೆದ ಮನುಷ್ಯ ದೈವತ್ವದ ಸೋಪಾನಗಳನ್ನು ಏರಬೇಕು. ಕೇವಲ ನನ್ನ ವಿಚಾರಗಳೇ ಸತ್ಯ, ಮಿಕ್ಕಿದ್ದೆಲ್ಲ ನಿಃಷ್ಪ್ರಯೋಜಕ ಇತ್ಯಾದಿ ಕ್ಷುದ್ರ ಚಿಂತನೆಗಳನ್ನು ಬಿಡಬೇಕು. ಮಾನವಜೀವನದ ಮೂಲ ಗುರಿ ದೈವತ್ವವನ್ನು ಪಡೆಯುವುದು. ಈ ಎಲ್ಲ ಪಾಂಡಿತ್ಯ, ವಿದ್ವತ್ತುಗಳು ದೈವತ್ವ ಸೇರಲು ಪೂರಕವಾಗಿರಬೇಕೇ ವಿನಾ ಭಗವದ್ ಚಿಂತನೆಗಳಿಗೆ ಮಾರಕವಾಗಬಾರದು. ‘ಕೇವಲ ಗ್ರಂಥಗಳನ್ನು ಅಹರ್ನಿಶಿ ಅಧ್ಯಯನ ಮಾಡಿದರೆ ‘‘ಗ್ರಂಥಿ’’ಗಳಾಗುವಿರಿ’ ಎಂದು ಶ್ರೀ ರಾಮಕೃಷ್ಣರು ಎಚ್ಚರಿಸಿದ ಪ್ರಸಂಗಗಳೂ ಅನೇಕ. ಹಾಗಾಗಿ ವೇದೋಪನಿಷತ್​ಗಳ ಸಾರವನ್ನು ತಮ್ಮ ಜೀವನದಲ್ಲಿ ಅನುಷ್ಠಾನಕ್ಕೆ ತಂದಲ್ಲಿ ಮಾತ್ರ ನಿಜವಾದ ಅರ್ಥದಲ್ಲಿ ಪಂಡಿತ ಎಂದೆನಿಸಿಕೊಳ್ಳಬಹುದು.

ಸಾಮಾನ್ಯವಾಗಿ ನಾವು ಕಾಣುವ ಪಂಡಿತರ ಉಪನ್ಯಾಸಗಳಿಗೂ, ಭಾಷಣ-ಪ್ರವಚನಗಳಿಗೂ ಮತ್ತು ಆ ಪಂಡಿತೋತ್ತಮರ ಜೀವನಕ್ಕೂ ಸಂಬಂಧವೇ ಇಲ್ಲದಿರುವುದನ್ನು ಕಾಣಬಹುದು. ಶ್ರೀ ರಾಮಕೃಷ್ಣರು ನಿಜವಾದ ಸಾಧಕನ ಮನೋಧರ್ಮ ಹೇಗಿರಬೇಕು ಎಂಬುದನ್ನು ಅನೇಕಾನೇಕ ನಿದರ್ಶನಗಳಿಂದ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಬಂಗಾಳದ ಅಂದಿನ ಮಹಾ ವಿದ್ವಾಂಸ ಶಶಧರ ತರ್ಕಚೂಡಾಮಣಿ ಎಂಬ ಪಂಡಿತನಿಗೆ ನಿಜವಾದ ಅಧ್ಯಾತ್ಮ ಹಾಗೂ ಸಾಧಕಜೀವನದ ಮರ್ಮವನ್ನು ಬಹು ಸ್ಪಷ್ಟವಾಗಿ ತಿಳಿಸುತ್ತಾರೆ. ಪಂಡಿತನಿಗೋ ಒಣ ತರ್ಕದಲ್ಲಿ ಆಸಕ್ತಿ. ಇಂತಹವರಿಗೆ ಪರಮಹಂಸರು ನಿಜಾರ್ಥದಲ್ಲಿ ವೇದಾಧ್ಯಯನ, ಪಾಂಡಿತ್ಯ ಗಳಿಸುವಿಕೆಯ ಬಗ್ಗೆ ಅರಿವು ಮೂಡಿಸುತ್ತಾರೆ.

ಶ್ರೀ ರಾಮಕೃಷ್ಣ ಪರಮಹಂಸರು ಪಂಡಿತನಿಗೆ ‘ವೇದಗಳೇ ಮೊದಲಾದ ಅನೇಕ ಶಾಸ್ತ್ರಗಳೇನೋ ಇವೆ. ಆದರೆ ಸಾಧನೆ ಮಾಡದೆ, ತಪಸ್ಸುಗೈಯ್ಯದೆ, ಭಗವಂತನ ಸಾಕ್ಷಾತ್ಕಾರವನ್ನು ಪಡೆಯಲಾಗುವುದಿಲ್ಲ’ ಎನ್ನುತ್ತಾರೆ. ವೇದ-ವೇದಾಂತ, ತಂತ್ರ, ಷಡ್​ದರ್ಶನಗಳನ್ನೆಲ್ಲ ಅಧ್ಯಯನ ಮಾಡಿ ಪಂಡಿತ ತರ್ಕಚೂಡಾಮಣಿ ಎಂದು ನಾಮಾಂಕಿತವನ್ನು ಪಡೆದಿರಬಹುದು. ಆದರೆ ಅದಾವುದೂ ಭಗವದ್ದರ್ಶನಕ್ಕೆ ಕೊಂಡೊಯ್ಯುವುದಿಲ್ಲ. ಶಾಸ್ತ್ರ ಏನು ಹೇಳುತ್ತದೆ ಎಂಬುದನ್ನು ಮೊದಲು ಅರಿತುಕೊಂಡು, ಬಳಿಕ ಅವುಗಳಿಗನುಸಾರವಾಗಿ ಕೆಲಸಕಾರ್ಯಗಳನ್ನು ಮಾಡಬೇಕು.

‘ಒಬ್ಬ ಪ್ರಯಾಣಿಕ ದೂರದ ಊರಿಗೆ ಪ್ರಯಾಣ ಬೆಳೆಸಿದ. ಅಲ್ಲಿ ಒಂದು ಪತ್ರವನ್ನು ಕಳೆದುಕೊಂಡ. ಎಲ್ಲಿ ಇಟ್ಟುಬಿಟ್ಟಿದ್ದನೋ ಜ್ಞಾಪಕದಲ್ಲಿಲ್ಲ. ಹುಡುಕಿ ಹುಡುಕಿ ರಾತ್ರಿಯೇ ಕಳೆಯಿತು. ದೀಪ ಹಿಡಿದುಕೊಂಡು ಕಳೆದುಹೋಗಿರುವ ಪತ್ರವನ್ನು ಹುಡುಕಲಾರಂಭಿಸಿದ. ಇವನೊಂದಿಗೆ ಇವನ ಸಹಚರರೂ ಸೇರಿಕೊಂಡರು. ಕೊನೆಯಲ್ಲಿ ಪತ್ರ ಸಿಕ್ಕಿಯೇಬಿಟ್ಟಿತು! ಪತ್ರವನ್ನು ಓದಿದ. ಅದರಲ್ಲಿ ಒಂದು ಪಂಚೆ, ಒಂದಿಷ್ಟು ಸಿಹಿಯನ್ನು ತರಬೇಕು ಎಂದು ನಮೂದಿಸಲಾಗಿತ್ತು. ತತ್​ಕ್ಷಣ ಆತ ಆ ಪತ್ರವನ್ನು ಬಿಸಾಡಿಬಿಟ್ಟ. ಅವನಿಗೆ ಇನ್ನು ಆ ಪತ್ರದ ಆವಶ್ಯಕತೆ ಇರಲಿಲ್ಲ. ಅವನು ಮಾಡಬೇಕಾಗಿರುವುದು ಸಿಹಿ ಹಾಗೂ ಪಂಚೆಯನ್ನು ಕೊಂಡುಕೊಂಡು ರವಾನಿಸುವುದು. ಅವನು ಏನು ಮಾಡಬೇಕು ಎಂಬುದನ್ನು ಅರಿತ ನಂತರ ಆ ಪತ್ರದ ಆವಶ್ಯಕತೆ ಅವನಿಗೆ ಇಲ್ಲ. ಇನ್ನು ಆ ಪತ್ರದ ಸಾರಾಂಶವನ್ನು ಅರಿತು ಮುಂದಿನ ಕಾರ್ಯ ಕೈಗೊಳ್ಳಬೇಕು.’ ಪರಮಹಂಸರು ಈ ಅತ್ಯಂತ ಸಾಮಾನ್ಯ ಉದಾಹರಣೆಯ ಮೂಲಕ ಶ್ರುತಿ, ಪುರಾಣ, ಶಾಸ್ತ್ರಾಧ್ಯಯನ, ವೇದಾಧ್ಯಯನದ ಸಾರ ಅರಿತ ಮೇಲೆ ಅದನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸಿದಾಗಲೇ ಸಾಧನೆ ಎಂಬ ಪದಕ್ಕೆ ಅರ್ಥ ಬರುತ್ತದೆ ಎಂದು ವಿವರಿಸಿದರು ಪಂಡಿತನಿಗೆ.

‘ಕಿವಿಯಲ್ಲಿ ಕೇಳುವುದಕ್ಕಿಂತ ಕಣ್ಣಿನಿಂದ ನೋಡುವುದು ಅತ್ಯಂತ ಮೇಲು, ಕಣ್ಣಿನಿಂದ ನೋಡಿದ ನಂತರ ಸಕಲ ಸಂದೇಹಗಳೂ ದೂರವಾಗಿಬಿಡುತ್ತವೆ. ಶಾಸ್ತ್ರಗಳಿಂದಲೇನೋ ಭಗವಂತನ ಸಂಬಂಧವಾಗಿ ಅನೇಕ ವಿಷಯಗಳನ್ನು ತಿಳಿದುಕೊಳ್ಳಬಹುದು, ಆದರೆ ಆತನ ಸಾಕ್ಷಾತ್ಕಾರ ಮಾಡಿಕೊಳ್ಳದೆ ಇದ್ದರೆ, ಆತನ ಪಾದಪದ್ಮಗಳಲ್ಲಿ ಭಕ್ತಿ ಉಂಟುಮಾಡಿಕೊಳ್ಳದೆ ಇದ್ದರೆ, ಚಿತ್ತಶುದ್ಧಿ ಪಡೆಯದೆ ಇದ್ದರೆ ಎಲ್ಲವೂ ಬರೇ ವ್ಯರ್ಥ. ಪಂಚಾಂಗದಲ್ಲಿ ಒಂದು ನಿಗದಿಯಾದ ದಿನದಲ್ಲಿ ಕುಂಭದ್ರೋಣ ಮಳೆ ಸುರಿಯುತ್ತದೆ ಎಂದು ನಮೂದಿಸಲಾಗಿದೆ. ಆದರೆ ಅದೇ ಪಂಚಾಂಗವನ್ನು ಹಿಂಡಿದರೆ ಒಂದು ಹನಿಯೂ ನೀರು ಬರಲಾರದು. ಹಾಗೆಯೇ ಈ ಶಾಸ್ತ್ರ, ವೇದಾಧ್ಯಯನಗಳು’ ಎಂಬುದಾಗಿ ಭಗವದ್ ಸಾಕ್ಷಾತ್ಕಾರದ ಬಗ್ಗೆ ಶ್ರೀ ರಾಮಕೃಷ್ಣರು ಪರಿಣಾಮಕಾರಿಯಾಗಿ ವಿವರಿಸುತ್ತಿದ್ದರು. ಶಾಸ್ತ್ರ, ಪುರಾಣ, ಮಂತ್ರ, ಆಗಮ, ನಿಗಮ, ವೇದವೇದಾಂತಗಳಲ್ಲಿರುವ ಪರಬ್ರಹ್ಮವಸ್ತುವಿನ ಆ ವಿವರಗಳನ್ನು ಅರ್ಥೈಸಿಕೊಂಡು ಭಗವದ್ ಸಾಕ್ಷಾತ್ಕಾರದತ್ತ ಸಾಗುವವನೇ ಅಪ್ಪಟ ಸಾಧಕ.