6
ಸಾಧಾರಣ ಮಾನವ ಸದಾ ತಾನು ಸುಖ-ಸಂತೋಷ ದಿಂದಿರಬೇಕು. ಯಾವುದೇ ದುಃಖವಿಲ್ಲದೆ ಕೇವಲ ಭೋಗ-ಸುಖ ದಲ್ಲಿಯೇ ತಲ್ಲೀನನಾಗಬೇಕು ಎಂದು ಹಾತೊರೆಯುತ್ತಿರುತ್ತಾನೆ. ಮತ್ತೊಂದು ವರ್ಗದ ಮನುಜರು ಈ ಜಗತ್ತಿನಲ್ಲಿ ಒಂದು ಅದ್ಭುತ ವಸ್ತುವೊಂದಿದೆ, ಅದೇ ಭಗವದ್ ಶಕ್ತಿ, ಅದನ್ನು ಅರಿಯಲು ಪ್ರಯತ್ನಪಡುತ್ತಿರುತ್ತಾರೆ. ಜತೆಗೆ ಭಗವದ್ ಶಕ್ತಿಯ ಮೇಲೆ ಭಕ್ತಿಯನ್ನು ಹೆಚ್ಚಿಸಿಕೊಳ್ಳಲು ಶ್ರಮಿಸುತ್ತಾರೆ. ಈ ಪ್ರಾಪಂಚಿಕ ಸುಖ-ಭೋಗಗಳು ಕೇವಲ ಕ್ಷಣಿಕ ಎಂದು ಅರಿತು ಎಲ್ಲವನ್ನೂ ನಶ್ವರ ಎಂದು ಭಾವಿಸಿ ಕೇವಲ ಈಶ ತತ್ತ್ವವನ್ನು ಅರಿಯಲು ಪ್ರಯತ್ನಿಸುತ್ತಾರೆ. ಇವರು ಎರಡನೇ ವರ್ಗಕ್ಕೆ ಸೇರಿದ ಮನುಜರು. ಮೂರನೇ ವರ್ಗ ಅತ್ಯಂತ ಶ್ರೇಷ್ಠತಮವಾದ ವರ್ಗ. ಕಾರಣ, ಭಗವಂತನ, ಸರ್ವವ್ಯಾಪಿಯ, ಸರ್ವಶಕ್ತನ ಸಂಪೂರ್ಣ ಅರಿವು ಅವರಿಗೆ ಉಂಟಾಗಿ ಸಂಪೂರ್ಣ ಭಗವದಾನಂದದಲ್ಲಿಯೇ ಮುಳುಗಿ, ತೇಲಿ ಹೋಗುತ್ತಾರೆ. ಈ ವರ್ಗದವರಿಗೆ ಪ್ರಾಪಂಚಿಕತೆಯ ಸುಖ-ಭೋಗಗಳ ಅರಿವೇ ಇರುವುದಿಲ್ಲ ಮತ್ತು ಅವರಿಗೆ ಬೇಕಾಗಿಯೂ ಇಲ್ಲ. ಇನ್ನು ಎರಡನೇ ವರ್ಗದವರಂತೆ ಭಗವದ್ಭಕ್ತಿ ಯನ್ನು ಅರಿತು ಕೇವಲ ನಾಮ, ಜಪ, ಅರ್ಚನೆ, ಆರಾಧನೆಗಳಿಗೆ ಸಂತೃಪ್ತರಾಗದೆ ಸಂಪೂರ್ಣ ತಮ್ಮನ್ನೇ ತಾವು ಪರಮಾನಂದದಲ್ಲಿ, ಭಗವದಾನಂದದಲ್ಲಿ, ಸಚ್ಚಿದಾನಂದದಲ್ಲಿ ಮುಳುಗಿ ಆ ಭವ್ಯ, ಅಖಂಡ ಸಚ್ಚಿದಾನಂದ ಸಾಗರದಲ್ಲಿ ತೊಯ್ದು ಹೋಗಿಬಿಡುತ್ತಾರೆ. ಇದೇ ಅತ್ಯಂತ ಮಹತ್ತರವಾದ ಸ್ಥಿತಿ, ಅವಧೂತ ಸ್ಥಿತಿ, ಬ್ರಹ್ಮಾನಂದ ಸ್ಥಿತಿ.
ಈ ಮೂರು ಸ್ತರಗಳನ್ನು ಪರಮಹಂಸ ಶ್ರೀರಾಮಕೃಷ್ಣರು ತಮ್ಮದೇ ಆದ ಅದ್ಭುತ ಶೈಲಿಯಲ್ಲಿ ವಿವರಿಸುವುದು ಈ ರೀತಿ; ಮೂರು ತರಹದ ಗೊಂಬೆಗಳು ಇರುತ್ತವೆ. ಮೊದಲನೆಯದು ಉಪ್ಪಿನಿಂದ ತಯಾರಿಸಿದ ಗೊಂಬೆ, ಎರಡನೆಯದು ಬಟ್ಟೆಯಿಂದ ತಯಾರಿಸಿದ್ದು ಹಾಗೂ ಮೂರನೆಯದು ಕಲ್ಲಿನಿಂದ ಮಾಡಿದ ಗೊಂಬೆ. ಉಪ್ಪಿನ ಗೊಂಬೆಯನ್ನು ನೀರಿನಲ್ಲಿ ಮುಳುಗಿಸಿದರೆ ಸಂಪೂರ್ಣ ಕರಗಿ ತನ್ನ ಆಕಾರವನ್ನೇ ಕಳೆದುಕೊಳ್ಳುತ್ತದೆ. ಅಂದರೆ ನಾನು, ನನ್ನದು ಇತ್ಯಾದಿಗಳನ್ನೆಲ್ಲಾ ತೊರೆದು ಆ ಬ್ರಹ್ಮಾನಂದ ಸಾಗರದಲ್ಲಿ ಒಂದಾಗಿಬಿಡುತ್ತದೆ. ಈ ವರ್ಗವೇ ಅವಧೂತ, ಅವತಾರ, ಬ್ರಹ್ಮಜ್ಞಾನಿಯ ವರ್ಗ. ಎರಡನೇ ವರ್ಗದ ಜನರು ಬಟ್ಟೆಯಿಂದ ತಯಾರಿಸಿದ ಬೊಂಬೆ ಹಾಗೆ. ಭಗವದ್ ಭಕ್ತಿಯಿಂದ ಭಗವಂತನ ಸ್ಮರಣೆ ಮಾಡುತ್ತಾ ಭಕ್ತಿಯ ಸಿಂಚನದಿಂದ ತೊಯ್ದು ಸದಾ ಭಗವದ್ ಚಿಂತನೆಯಲ್ಲಿಯೇ ಕಳೆಯುತ್ತಾರೆ. ಹೇಗೆ ಬಟ್ಟೆಯಿಂದ ತಯಾರಿಸಿದ ಬೊಂಬೆ ನೀರಿನಲ್ಲಿ ಅದ್ದಿದಾಗ ಸಂಪೂರ್ಣವಾಗಿ ತೊಯ್ದು ಆ ನೀರನ್ನು ಹೀರಿಕೊಂಡಾಗ್ಯೂ ತನ್ನ ಆಕಾರವನ್ನು ಇಟ್ಟುಕೊಳ್ಳುವುದೋ ಹಾಗೆ. ಮೂರನೆಯದಾದ ಕಲ್ಲಿನ ಬೊಂಬೆಯು ಸದಾ ನೀರಿನಲ್ಲಿ ಇದ್ದಾಗ್ಯೂ ಒಂದು ಕಿಂಚಿತ್ ತೇವಾಂಶವನ್ನೂ ಆಂತರ್ಯದಲ್ಲಿರಿಸುವುದಿಲ್ಲ. ಅಪ್ಪಿತಪ್ಪಿಯೂ ಭಗವದ್ ಚಿಂತನೆ, ಸತ್ ಚಿಂತನೆ, ಸತ್ಸಂಗ, ಸದ್ವಿಚಾರ, ಸುಸಂಸ್ಕೃತ್ವ, ಆಚಾರ, ವಿಚಾರಗಳ ಕಡೆಗೆ ಗಮನವೇ ಹರಿಸದೆ ಕೇವಲ ಮೃಗೀಯ ಮಾನಸಿಕ ಸ್ಥಿತಿಯಲ್ಲಿ ಬದುಕಲು ಹವಣಿಸುತ್ತಿರುವವರು ಈ ವರ್ಗದವರು. ಬಹುಶಃ ಈ ಮೂರನೆಯ ವರ್ಗದವರೇ ಈಗ ಅತ್ಯಂತ ಹೆಚ್ಚು ಎನ್ನಬಹುದು.
ರಾಮಕೃಷ್ಣರು ಇನ್ನೊಂದು ರೀತಿಯಲ್ಲಿ ಇದನ್ನು ವಿವರಿಸುತ್ತಾರೆ: ಮನುಜರಲ್ಲಿ ಮೂರು ವಿಧ. ಬದ್ದರು, ಮುಮುಕ್ಷು (ಸಾಧಕರು) ಮತ್ತು ನಿತ್ಯ ಮುಕ್ತರು. ಒಬ್ಬ ಬೆಸ್ತನು ಹೊಳೆಯಲ್ಲಿ ಬಲೆಯನ್ನು ಬೀಸಿ ಮೀನುಗಳನ್ನು ಹಿಡಿಯಲು ಪ್ರಯತ್ನಿಸುವಾಗ ಕೆಲವು ಮೀನುಗಳು ಬಲೆಯಲ್ಲಿಯೇ ಸಿಲುಕಿ ಆಚೆ, ಈಚೆ ಬರಲು ಪ್ರಯತ್ನವನ್ನೂ ಮಾಡದೆ
ಬಲೆಯನ್ನೇ ಬಾಯಲ್ಲಿ ಹಿಡಿದು ತಾವು ಸುರಕ್ಷಿತ ಎಂದು ಆಳದ ಮಣ್ಣಿನಲ್ಲಿ ಸೇರಿಕೊಂಡು ಬಿಡುತ್ತವೆ. ಇವು ಬದ್ದ ಜೀವಿಗೆ ಸಮಾನ. ಪ್ರಾಪಂಚಿಕ ಬಲೆಯಲ್ಲಿ ಸಿಲುಕಿದ್ದಾಗ್ಯೂ ತಾವು ಸಂಪೂರ್ಣ ಸುರಕ್ಷಿತಎಂದು ಭಾವಿಸುವುವು. ಬೆಸ್ತನು ಬಲೆಯನ್ನು ಎಳೆದಾಕ್ಷಣ ಬೆಸ್ತನ ಬುಟ್ಟಿಗೆ ಸೇರುತ್ತವೆ. ಇನ್ನು ಎರಡನೆಯ ವರ್ಗ ಬೆಸ್ತನು ಹಾಕಿದ ಬಲೆ ಯಲ್ಲಿ ಸಿಲುಕಿದ್ದಾಗ್ಯೂ ಬಲೆಯಿಂದ ಛಂಗನೆ ಹಾರಿ ಬಿಡಿಸಿಕೊಳ್ಳಲು ಶ್ರಮಿಸುತ್ತಾ ಇರುತ್ತವೆ. ಈ ವರ್ಗದವರೇ ಮುಮುಕ್ಷುಗಳು, ಎಂದರೆ ಸಿಲುಕಿದಾಗ ಬಿಡಿಸಿಕೊಳ್ಳಲು ಪ್ರಯತ್ನಿಸಿ ಸಫಲರಾಗುತ್ತಾರೆ. ಇನ್ನು ನಿತ್ಯ ಮುಕ್ತರು. ಯಾವುದೇ ಕಾರಣವಾಗಲಿ, ಸಂದರ್ಭವಾಗಲಿ ಅಪ್ಪಿತಪ್ಪಿಯೂ ಆ ಬಲೆಯ ಸನಿಹಕ್ಕೂ ಸಾಗುವುದಿಲ್ಲ. ಮುನಿಗಳು, ಋಷಿ ಗಳು, ಸಾಧುಗಳು, ಸಂತರು. ಉದಾ: ಸದಾಶಿವ ಬ್ರಹ್ಮೇಂದ್ರ ಯತಿ, ದಾಸವರೇಣ್ಯರುಗಳು ಇತ್ಯಾದಿ, ಇವರು ಜೀವನವನ್ನು ಪಡೆದಾಗ್ಯೂ ಸಾಂಸಾರಿಕ ಬಲೆಯಲ್ಲಿ ಸಿಲುಕದೆ ನಿತ್ಯ ಮುಕ್ತರೆನಿಸಿಕೊಳ್ಳುತ್ತಾರೆ. ಹೀಗೆ ಪರಮಹಂಸರು ಮೂರು ವಿಧದ ಮನುಜರನ್ನು ಅವರ ಬಳಿ ಸಾರಿದ ಸಾಧಕ ವೃಂದದವರಿಗೆ ಭೋಧಿಸುತ್ತಾರೆ.