ಶಿವಮೊಗ್ಗ ಕೋಟೆ ಠಾಣೆ ಎದುರು ಇನ್‌ಸ್ಪೆಕ್ಟರ್ ಹರೀಶ್ ಪಟೇಲ್ ಅವರು ರೌಡಿಶೀಟರ್‌ಗಳ ಪರೇಡ್ ನಡೆಸಿದರು. ಪಿಎಸ್‌ಐ ಸಂತೋಷ್ ಬಾಗೋಜಿ ಇದ್ದರು. 
ನ್ಯೂಸ್

ಹಬ್ಬಗಳ ಹಿನ್ನೆಲೆಯಲ್ಲಿ ರೌಡಿಶೀಟರ್‌ಗಳ ಪರೇಡ್

ಶಿವಮೊಗ್ಗ: ಮುಂಬರುವ ದಿನಗಳಲ್ಲಿ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಸಂದರ್ಭದಲ್ಲಿ ಅಹಿತಕರ ಕೃತ್ಯಗಳಲ್ಲಿ ಭಾಗಿಯಾಗಬಾರದು. ದುರ್ನಡತೆ ಅಥವಾ ಅಶಾಂತಿಯನ್ನುಂಟು ಮಾಡಬಾರದು. ಅನಾವಶ್ಯಕವಾಗಿ ಬಾಲ ಬಿಚ್ಚಿದರೆ ಪರಿಣಾಮ ನೆಟ್ಟಗಿರುವುದಿಲ್ಲ..

ಇದು ಜಿಲ್ಲಾಧ್ಯಕ್ಷ ಪೊಲೀಸ್ ಇಲಾಖೆ ರೌಡಿಶೀಟರ್‌ಗಳಿಗೆ ಬುಧವಾರ ಸಂಜೆ ನೀಡಿದ ಖಡಕ್ ಎಚ್ಚರಿಕೆ. ಮುಂಬರುವ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ರೌಡಿಶೀಟರ್‌ಗಳ ಪರೇಡ್ ನಡೆಸಿದ ಖಾಕಿ ಪಡೆ, ವಿಶೇಷ ಕಾರ್ಯಾಚರಣೆ ನಡೆಸಿ ಎಚ್ಚರಿಕೆ ನೀಡಿತು.

ಡಿವೈಎಸ್‌ಪಿಗಳು, ಇನ್‌ಸ್ಪೆಕ್ಟರ್‌ಗಳು ಹಾಗೂ ಪಿಎಸ್‌ಐಗಳ ನೇತೃತ್ವದಲ್ಲಿ ಆಯಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಹಿಂದಿನ ವರ್ಷಗಳ ಗಣಪತಿ ಹಾಗೂ ಈದ್ ಮಿಲಾದ್ ಹಬ್ಬಗಳ ಸಂದರ್ಭದ ವಿಡಿಯೋಗಳನ್ನು ವೀಕ್ಷಿಸಿ ರೌಡಿಗಳು ಮತ್ತು ಕಮ್ಯುನಲ್ ಗೂಂಡಾಗಳನ್ನು ಠಾಣೆಗೆ ಕರೆಸಿ ಅಹಿತಕರ ಕೃತ್ಯಗಳಲ್ಲಿ ಪಾಲ್ಗೊಳ್ಳದಂತೆ ಸೂಚಿಸಿದರು.

ಮುಂಬರುವ ಹಬ್ಬಗಳ ಸಂದರ್ಭದಲ್ಲಿ ಯಾವುದೇ ರೀತಿಯ ದುರ್ನಡತೆ ತೋರಬಾರದು. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಮತ್ತು ಪ್ರಕರಣಗಳಲ್ಲಿ ಭಾಗಿಯಾಗಬಾರದು. ಎಲ್ಲರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ನಿಗಾ ವಹಿಸಿದ್ದು, ಒಂದು ವೇಳೆ ಯಾವುದೇ ರೀತಿಯಲ್ಲಿ ಕಾನೂನು ಉಲ್ಲಂಘನೆ ಮಾಡಬಾರದು ಎಂದು ಸೂಚನೆ ನೀಡಿದರು.

ಸಾರ್ವಜನಿಕರಿಗೆ ಉಪಟಳ ನೀಡುವುದು, ಹಬ್ಬಹರಿದಿನ ಹಾಗೂ ಮೆರವಣಿಗೆ ಸಂದರ್ಭದಲ್ಲಿ ದುರ್ನಡತೆ ತೋರುವುದು ಹಾಗೂ ಕಿಡಿಗೇಡಿತನ ಮಾಡುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.