ನ್ಯೂಸ್

ವಿಧಾನಸೌಧ ಎದುರಿಗೆ ಗಣರಾಜ್ಯೋತ್ಸವ ಪರೇಡ್?

ಕೇಂದ್ರದ ಮಾದರಿಯಲ್ಲಿ ಗಣರಾಜ್ಯೋತ್ಸವ ಪರೇಡ್ ಅನ್ನು ಮಾಣೆಕ್​ಷಾ ಪರೇಡ್ ಮೈದಾನದ ಬದಲು ವಿಧಾನಸೌಧದ ಎದುರು ಅಯೋಜಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಈಗಾಗಲೆ ಯೋಜನೆ ಸಿದ್ಧಪಡಿಸಲಾಗಿದೆ. ದೆಹಲಿಯಲ್ಲಿ ಗಣರಾಜ್ಯೋತ್ಸವದಂದು ಭಾರತದ ಸೇನಾಪಡೆ ಮೂರು ವಿಭಾಗಗಳ ಸಿಬ್ಬಂದಿ, ಅರೆಮಿಲಿಟರಿ ಪಡೆಗಳು, ವಿವಿಧ ವಿದ್ಯಾರ್ಥಿಗಳು ಸೇರಿ ಮತ್ತಿತರ ತಂಡಗಳು ರಾಷ್ಟ್ರಪತಿ ಭವನದ ಎದುರು ನಡೆವ ಪಥಸಂಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತವೆ. ಅದೇ ಮಾದರಿಯನ್ನು ರಾಜ್ಯದಲ್ಲೂ ಅನುಸರಿಸಲು ಸರ್ಕಾರ ನಿರ್ಧರಿಸಿದೆ.

ಪಥಸಂಚಲನ ಮಾತ್ರ: ಸಿದ್ಧವಾಗಿರುವ ನೀಲಿನಕ್ಷೆಯ ಪ್ರಕಾರ ಸಂಪ್ರದಾಯದಂತೆ ಮಾಣಿಕ್ ಷಾ ಪರೇಡ್ ಮೈದಾನ ಅಥವಾ ವಿಧಾನಸೌಧದೆದುರು ಮುಖ್ಯಮಂತ್ರಿಗಳು ಧ್ವಜಾರೋಹಣ ಮತ್ತು ಭಾಷಣ ಮಾಡಲಿದ್ದಾರೆ. ನಂತರ ಪಥಸಂಚಲನ ನಡೆಯುತ್ತದೆ. ತಂಡ ಯಾವ ಮಾರ್ಗದಲ್ಲಿ ಬರಬೇಕು, ಸಿಎಂಗೆ ಗೌರವ ವಂದನೆ ಸಲ್ಲಿಸಿದ ಬಳಿಕ ಯಾವ ಮಾರ್ಗದಲ್ಲಿ ನಿರ್ಗಮಿಸಬೇಕು ಎಂಬುದನ್ನು ಪಿಪಿಟಿಯಲ್ಲಿ ವಿವರಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಮಾತ್ರ ಎಂದಿನಂತೆ ಮಾಣಿಕ್ ಷಾ ಪರೇಡ್ ಮೈದಾನದಲ್ಲೇ ನಡೆಯಲಿವೆ ಎನ್ನಲಾಗಿದೆ.

ನೀಲಿನಕ್ಷೆ ಸಿದ್ಧ

ಗಣರಾಜ್ಯೋತ್ಸವದ ಪರೇಡ್ ಅನ್ನು ಮಾಣಿಕ್​ಷಾ ಪರೇಡ್ ಮೈದಾನದಿಂದ ಸ್ಥಳಾಂತರಿಸುವ ಕುರಿತು ನಗರ ಪೊಲೀಸರು ನೀಲಿನಕ್ಷೆ ಸಿದ್ಧಪಡಿಸಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಪವರ್ ಪಾಯಿಂಟ್ ಪ್ರೆಸೆಂಟೇಷನ್ (ಪಿಪಿಟಿ) ಕೂಡ ತಯಾರಾಗಿದೆ. ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರೊ್ಯೕತ್ಸವ ಆಯೋಜಿಸುವ ಜವಾಬ್ದಾರಿ ಬಿಬಿಎಂಪಿಯದ್ದಾಗಿದೆ. ಈ ಹಿನ್ನೆಲೆಯಲ್ಲಿ ತಾವು ತಯಾರಿಸಿರುವ ಪಿಪಿಟಿಯನ್ನು ನಗರ ಪೊಲೀಸರು ಬಿಬಿಎಂಪಿಗೆ ಸಲ್ಲಿಸಿದ್ದಾರೆ. ಈ ಕುರಿತು ಬಿಬಿಎಂಪಿ ಅಧಿಕಾರಿಗಳು ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ.

ವಿಶೇಷ ಅತಿಥಿಗಳಿಗೆ ಆಹ್ವಾನ

ನರೇಂದ್ರ ಮೋದಿ ಪ್ರಧಾನಿಯಾದ ನಂತರ ಪ್ರತಿ ಗಣರಾಜ್ಯೋತ್ಸವದಂದು ವಿವಿಧ ರಾಷ್ಟ್ರಗಳ ಪ್ರಧಾನಿ ಮತ್ತು ಅಧ್ಯಕ್ಷರನ್ನು ಅತಿಥಿಗಳನ್ನಾಗಿ ಆಹ್ವಾನಿಸುವ ಪರಿಪಾಠ ಆರಂಭವಾಗಿದೆ. ಅವರೆಲ್ಲರಿಗೂ ದೇಶದ ಶಕ್ತಿ ಪರಿಚಯಿಸಿಕೊಡುವುದು ಇದರ ಉದ್ದೇಶ. ಅದೇ ಮಾದರಿಯಲ್ಲಿ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರದ ಪ್ರಮುಖ ಸಚಿವರು ಅಥವಾ ಉದ್ಯಮಿ, ಕ್ರೀಡಾ ಪಟುಗಳನ್ನು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಹ್ವಾನಿಸುವ ಕುರಿತು ಚಿಂತನೆ ನಡೆದಿದೆ.

ಸ್ವಾತಂತ್ರ್ಯ ದಿನಾಚರಣೆಗೆ ಜಾರಿ

ಈ ಬಾರಿಯ ಗಣರಾಜ್ಯೋತ್ಸವಕ್ಕೆ ಇನ್ನು 10 ದಿನ ಬಾಕಿಯಿದೆ. ಹೀಗಾಗಿ ಈ ಬಾರಿಯ ಪರೇಡ್ ಅನ್ನು ತಕ್ಷಣವೇ ವಿಧಾನಸೌಧದ ಎದುರಿಗೆ ಸ್ಥಳಾಂತರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸ್ವಾತಂತ್ರ್ಯ ದಿನಾಚರಣೆಯಿಂದ ಪರೇಡ್ ಅನ್ನು ವಿಧಾನಸೌಧ ಎದುರು ಆಯೋಜಿಸುವ ಬಗ್ಗೆ ಚರ್ಚೆಗಳು ನಡೆದಿವೆ.

| ಗಿರೀಶ್ ಗರಗ ಬೆಂಗಳೂರು