ನ್ಯೂಸ್

ಸ್ವಾತಂತ್ರ್ಯ ದಿನಾಚರಣೆಗೆ ಪರೇಡ್ ಮೈದಾನ ಸಜ್ಜು

ಬೆಂಗಳೂರು: ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಮಟ್ಟದ ಸ್ವಾತಂತ್ರ್ಯ ದಿನಾಚರಣೆಗೆ ಸಕಲ ಸಿದ್ದತೆ ನಡೆಸಲಾಗಿದೆ.

ಬಿಬಿಎಂಪಿ, ನಗರ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಕಲ ಸಿದ್ದತೆ ನಡೆಸಿದೆ. ಕಳೆದ 15 ದಿನಗಳಿಂದ ತಯಾರಿ ನಡೆಸಲಾಗಿದೆ. ಗುರುವಾರ ಬೆಳಗ್ಗೆ 8.58ಕ್ಕೆ ಮೈದಾನಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಇದೇ ವೇಳೆ ಭಾರತೀಯ ರಕ್ಷಣಾ ಸೇವೆಯ ಮೂವರು ಹಿರಿಯ ಅಧಿಕಾರಿಗಳನ್ನು ಮುಖ್ಯಮಂತ್ರಿಗೆ ಪರಿಚಯಿಸಲಾಗುತ್ತದೆ. ಬೆಳಗ್ಗೆ 9 ಗಂಟೆಗೆ ಸಿಎಂ ಧ್ವಜಾರೋಹಣ ನೆರವೇರಿಸುತ್ತಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಿಎಂ ತೆರೆದ ಜೀಪಿನಲ್ಲಿ ಪರೇಡ್ ಪರಿವೀಕ್ಷಣೆ ಮತ್ತು ಗೌರವ ರಕ್ಷೆ ಸ್ವೀಕರಿಸಿದ ಬಳಿಕ ನಾಡಿನ ಜನತೆಗೆ ಸ್ವಾತಂತ್ರೋತ್ಸವ ಸಂದೇಶ ನೀಡುತ್ತಾರೆ. ಬಳಿಕ ರಾಷ್ಟ್ರಗೀತೆ ಮತ್ತು ನಾಡಗೀತೆ ಮೊಳಗಲಿದೆ. ಕೆಎಸ್‌ಆರ್‌ಪಿ, ಸಿಆರ್‌ಪಿಎ್, ಬಿಎಸ್‌ಎ್, ಸಿಎಆರ್, ಗೋವಾ ಪೊಲೀಸ್, ಕೆಎಸ್‌ಐಎಸ್‌ಎ್, ಟ್ರಾಫಿಕ್ ಪೊಲೀಸ್, ಮಹಿಳಾ ಪೊಲೀಸ್, ಹೋಂ ಗಾರ್ಡ್ಸ್, ಟ್ರಾಫಿಕ್ ವಾರ್ಡನ್, ಅಗ್ನಿಶಾಮಕ ದಳ ಸಿಬ್ಬಂದಿ, ಶ್ವಾನ ದಳ, ಬ್ಯಾಂಡ್ ಸೇರಿ ಒಟ್ಟು 35 ತುಕಡಿಗಳಲ್ಲಿ 1,150 ಮಂದಿ ಭಾಗವಹಿಸಲಿದ್ದಾರೆ. ಈ ಬಾರಿ ವಿಶೇಷವಾಗಿ ಅಂಗಾಂಗ ದಾನ ಮಾಡಿರುವ 64 ಕುಟುಂಬದ ಸದಸ್ಯರಿಗೆ ಆರೋಗ್ಯ ಇಲಾಖೆಯಡಿ ಸಿಎಂ ಪ್ರಶಂಸನಾಪತ್ರ ಕೊಟ್ಟು ಗೌರವಿಸಲಿದ್ದಾರೆ ಎಂದು ವಿವರಿಸಿದರು.

ಬಿಗಿ ಭದ್ರತೆ:

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನ ಸೇರಿ ನಗರದ ಎಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದರು. 15 ದಿನಗಳಿಂದ ಪೊಲೀಸರು ನಿಗಾ ವಹಿಸಿದ್ದಾರೆ. ಹೋಟೆಲ್, ಲಾಡ್ಜ್‌ಗಳು, ತಂಗುದಾಣಗಳು ಇನ್ನಿತರ ಸ್ಥಳಗಳಲ್ಲಿ ಅನುಮಾನಾಸ್ಪದವಾಗಿ ವಾಸ್ತವ್ಯ ಹೂಡುವವರ ಮೇಲೆ ಸೂಕ್ತ ಕ್ರಮ ವಹಿಸಲಾಗಿದೆ. 10 ಡಿಸಿಪಿ, 17 ಎಸಿಪಿ, 42 ಪಿಐ, 112 ಪಿಎಸ್‌ಐ. 62 ಎಎಸ್‌ಐ, 511 ಎಚ್‌ಸಿ/ಪಿಸಿ, 72 ಮಹಿಳಾ ಸಿಬ್ಬಂದಿ, 129 ಸಾದಾ ಉಡುಪಿನ ಅಧಿಕಾರಿ, ಸಿಬ್ಬಂದಿ ಮತ್ತು 27 ಜನ ಕ್ಯಾಮರಾ ಸಿಬ್ಬಂದಿ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ.

ಸಂಚಾರ ನಿರ್ವಹಣೆಗಾಗಿ 3 ಡಿಸಿಪಿ, 6 ಎಸಿಪಿ, 19 ಪಿಐ, 32 ಪಿಎಸ್‌ಐ, 111 ಎಎಸ್‌ಐ, 420 ಎಚ್‌ಸಿ,ಪಿಸಿಗಳು ಸೇರಿ ಒಟ್ಟಾರೆಯಾಗಿ 1,583 ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಮೈದಾನದ ಬಂದೋಬಸ್ತ್ ಕರ್ತವ್ಯಕ್ಕೆ 10 ಕೆಎಸ್‌ಆರ್‌ಪಿ/ಸಿಎಆರ್ ತುಕಡಿ, ಎರಡು ಅಗ್ನಿ ಶಾಮಕ ವಾಹನ, ಎರಡು ಆಂಬುಲೆನ್ಸ್, ಕ್ಷಿಪ್ರ ಕಾರ್ಯಾಚರಣೆ ಪಡೆ, ಡಿ-ಸ್ವಾಡ್, ಆರ್‌ಐವಿಗಳು ಕರ್ತವ್ಯಕ್ಕೆ ಮೊಕ್ಕಾಂ ಹೂಡಲಿವೆ. ಮೈದಾನದ ಸುತ್ತ 100 ಸಿಸಿ ಕ್ಯಾಮರಾ ಮತ್ತು ಬ್ಯಾಗೇಜ್ ಸ್ಕಾೃನರ್, 20 ಡಿಎ್ಎಂಡಿ ಮತ್ತು 40 ಎಚ್‌ಎಚ್‌ಎಂಡಿ ಅಳವಡಿಸಲಾಗಿದೆ ಎಂದು ಹೇಳಿದರು.

ಸಮಾರಂಭಕ್ಕೆ ಆಗಮಿಸುವರು ಬೆಳಗ್ಗೆ 8.30ರ ಒಳಗೆ ಆಗಮಿಸಿ ನಿಗದಿತ ಆಸನಗಳಲ್ಲಿ ಕೂರಬೇಕು. ಸಾರ್ವಜನಿಕರು ಮಾಣಿಪಾಲ್ ಸೆಂಟರ್ ಕಡೆಯಿಂದ ಕಬ್ಬನ್ ರಸ್ತೆ ಮೂಲಕ ಗೇಟ್ ನಂ.4ಕ್ಕೆ ಆಗಮಿಸಲು ಸೂಚಿಸಲಾಗಿದೆ. ಅನಗತ್ಯ ಲಗೇಜ್ ಮತ್ತು ವಸ್ತುಗಳನ್ನು ತರಬಾರದು. ಗೇಟ್‌ನಲ್ಲಿ ತಪಾಸಣೆ ನಡೆಸುವ ಪೊಲೀಸರೊಂದಿಗೆ ಸಹಕರಿಸುವಂತೆ ಆಯುಕ್ತರು ಮನವಿ ಮಾಡಿದರು.