ಕೇಂದ್ರ ಸರ್ಕಾರದ ರಾಷ್ಟ್ರೀಯ ಇ ವಿಧಾನ್ ಅಪ್ಲಿಕೇಷನ್ ಜೊತೆಗೆ ಒಪ್ಪಂದ ಮಾಡಿಕೊಂಡ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನ ಸಭೆ ಮತ್ತು ವಿಧಾನ ಪರಿಷತ್ ಕಲಾಪಗಳನ್ನು ಸಂಪೂರ್ಣವಾಗಿ ಕಾಗದ ರಹಿತವಾಗಿ ಡಿಜಿಟಲೀಕರಣ ಮಾಡುವ ಯೋಜನೆಯಂತೆ ಮಾಡಿಕೊಳ್ಳಲಾಗಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದರು.
ಮಂಗಳೂರು: ಕೇಂದ್ರ ಸರ್ಕಾರದ ರಾಷ್ಟ್ರೀಯ ಇ ವಿಧಾನ್ ಅಪ್ಲಿಕೇಷನ್ ಜೊತೆಗೆ ಒಪ್ಪಂದ ಮಾಡಿಕೊಂಡ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನ ಸಭೆ ಮತ್ತು ವಿಧಾನ ಪರಿಷತ್ ಕಲಾಪಗಳನ್ನು ಸಂಪೂರ್ಣವಾಗಿ ಕಾಗದ ರಹಿತವಾಗಿ ಡಿಜಿಟಲೀಕರಣ ಮಾಡುವ ಯೋಜನೆಯಂತೆ ಮಾಡಿಕೊಳ್ಳಲಾಗಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬೆಂಗಳೂರಿನ ವಿಧಾನಸೌಧ ಮತ್ತು ಬೆಳಗಾವಿಯ ಸುವರ್ಣ ಸೌಧಕ್ಕೆ ಒಟ್ಟು 78 ಕೋಟಿ ರು. ಹಾಗೂ ಬೆಂಗಳೂರಿನ ವಿಧಾನ ಪರಿಷತ್ ಮತ್ತು ಬೆಳಗಾವಿ ಸದನಗಳಿಗೆ ಒಟ್ಟು 52 ಕೋಟಿ ರು. ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದ್ದು, ಅದನ್ನು ಡಿಜಿಟಲೀಕರಣ ಅನುಷ್ಠಾನ ಆಗಲಿದೆ. ಈ ಮೂಲಕ ಕಾಗದ ಪತ್ರಗಳಿಗೆ ಖರ್ಚು ಮಾಡುತ್ತಿರುವ ವೆಚ್ಚ ಕೆಲವೇ ವರ್ಷದಲ್ಲಿ ಉಳಿತಾಯಕ್ಕೆ ಬರಲಿದೆ. ಈ ಯೋಜನೆಗೆ ಈಗಾಗಲೇ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಮುಂದಿನ ಆರು ತಿಂಗಳಲ್ಲಿ ಈ ಡಿಜಿಟಲೀಕರಣ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ವಿಧಾನ ಮಂಡಲದ ಡಿಜಿಟಲೀಕರಣ ಯೋಜನೆ ಡಿಪಿಆರ್ ಹಂತದಲ್ಲಿದ್ದು, ಅನುಷ್ಠಾನದ ಬಳಿಕ ಉಭಯ ಸದನಗಳ ಶಾಸಕರಿಗೆ ಅದರ ಬಳಕೆ ಬಗ್ಗೆ ತರಬೇತಿ ನೀಡಲಾಗುವುದು ಎಂದರು.
*ಶಾಸಕರಿಗೆ ಡಿಜಿಟಲ್ ಹಾಜರಾತಿ
ವಿಧಾನ ಮಂಡಲದ ಐಟಿ ವಿಭಾಗದ ಮೂಲಕ ಶಾಸಕರ ಹಾಜರಾತಿಯನ್ನು ಡಿಜಿಟಲ್ ಮಾಡಲು ನಿರ್ಧರಿಸಲಾಗಿದೆ. ಶಾಸಕರು ತಮ್ಮ ಕುರ್ಚಿಯಲ್ಲಿ ಕುಳಿತುಕೊಂಡು ಡಿಜಿಟಲ್ ವ್ಯವಸ್ಥೆ ಮೂಲಕ ಹಾಜರಾತಿ ದಾಖಲಿಸುವ ವ್ಯವಸ್ಥೆ ಮಾಡಲಾಗುತ್ತದೆ. ಸದನಲ್ಲಿ ಮೊಬೈಲ್ ಬಳಕೆಗೆ ಅವಕಾಶವನ್ನು ನಾನು ಸ್ಪೀಕರ್ ಆದ ಬಳಿಕ ನೀಡಲಾಗಿದೆ. ವಿಧಾನ ಸೌಧಕ್ಕೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಪ್ರತಿ ಮಹಡಿಯಲ್ಲೂ ಅತ್ಯಾಧುನಿಕ ಕಿಯಾಸ್ಕ್ (ಮಾಹಿತಿ ಪರದೆ) ಅಳವಡಿಸಲಾಗುವುದು. ಯಾವ ಕೊಠಡಿಯಲ್ಲಿ ಯಾವ ಸಚಿವರು ಲಭ್ಯವಿದ್ದಾರೆ, ಸಚಿವರ ಕಚೇರಿ ಮಾಹಿತಿ ಎಂಬಿತ್ಯಾದಿ ಮಾಹಿತಿಗಳು ಕಿಯಾಸ್ಕ್ ಮೂಲಕ ಜನರಿಗೆ ಸಿಗಲಿದೆ ಎಂದರು.