ಬೆಂಗಳೂರು:
ಪತ್ರಿಕಾ ವಿತರಕರ ಸಮಸ್ಯೆಗೆ ಸ್ಪಂದಿಸಿರುವ ಸರ್ಕಾರ ಕರ್ನಾಟಕ ರಾಜ್ಯ ದಿನಪತ್ರಿಕೆ ವಿತರಣಾ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆಯನ್ನು ಜಾರಿಗೊಳಿಸಿದೆ.
ಕಾರ್ಮಿಕ ಇಲಾಖೆ ಈ ಬಗ್ಗೆ ಅಧಿಕೃತ ಆದೇಶವನ್ನು ಹೊರಡಿಸಿದ್ದು, ಅಪಘಾತದಲ್ಲಿ ಮೃತಪಟ್ಟ ವಿತರಕರಿಗೆ 2 ಲಕ್ಷ ರೂ ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ 1 ಲಕ್ಷ ರೂ ನೆರವು ದೊರಕಲಿದೆ.
ದಿನಪತ್ರಿಕೆ ವಿತರಿಸುವ ಕಾರ್ಮಿಕರು ಬಹುತೇಕ ದ್ವಿಚಕ್ರವಾಹನ ಬಳಸುತ್ತಿದ್ದು, ಅಪಘಾತಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಪಘಾತದಿಂದ ಮರಣ ಹೊಂದಿದರೆ ಅಥವಾ ಶಾಶ್ವತ ದುರ್ಬಲತೆ ಹೊಂದಿದರೆ ಅವರ ಅವಲಂಬಿತರು ತೀವ್ರ ಸಂಕಷ್ಟಕ್ಕೆ ಒಳಗಾಗುವುದನ್ನು ಗಮನಿಸಿ ಅವರುಗಳಿಗೆ(ವಿತರಕರು) ಸಾಮಾಜಿಕ ಭದ್ರತೆಯನ್ನು ಒದಗಿಸುವ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿ ಮಾಡಲಾಗಿದೆ ಆದೇಶದಲ್ಲಿ ವಿವರಿಸಲಾಗಿದೆ.
ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ಯೋಜನೆಯನ್ನು ಈ ತಕ್ಷಣವೇ ಜಾರಿಗೊಳಿಸಲು ಆದೇಶದಲ್ಲಿ ತಿಳಿಸಲಾಗಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಮತ್ತು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಮುಖ್ಯಮಂತ್ರಿ ಮತ್ತು ಕಾರ್ಮಿಕ ಸಚಿವರಿಗೆ ಸಲ್ಲಿಸಿದ ಮನವಿ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆ ಈ ಬಗ್ಗೆ ಆದೇಶ ಹೊರಡಿಸಿದೆ. ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ಪತ್ರಿಕಾ ವಿತರಕರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.
ಪತ್ರಿಕಾ ವಿತರಕರ ಬೇಡಿಕೆ ಈಡೇರಿಸಿರುವ ಸಿಎಂ ಸಿದ್ದರಾಮಯ್ಯ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮತ್ತು ಜೊತೆಯಾಗಿ ಸಹಕಾರ ನೀಡಿದ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರಿಗೆ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.