ನ್ಯೂಸ್

ಜೀವನ ರೂಪಿಸಿದ ಕಾಯಕ ಪತ್ರಿಕಾ ವಿತರಣೆ

ಎಲ್ಲರೂ ಬೆಳಗಿನ ಜಾವದ ಸವಿನಿದ್ರೆಯಲ್ಲಿ ಇರುವಾಗ ತಾವು ಮಾತ್ರ ಚಳಿ-ಮಳೆ ಲೆಕ್ಕಿಸದೆ ಮನೆಮನೆಗೆ ದಿನಪತ್ರಿಕೆಗಳನ್ನು ತಲುಪಿಸುವ ಶ್ರಮಜೀವಿಗಳು ಪತ್ರಿಕಾ ವಿತರಕರು. ಜಗತ್ತಿಗೆಲ್ಲ ವಾರಾಂತ್ಯ, ಹಬ್ಬ, ಹರಿದಿನಗಳೆಂಬ ಹತ್ತು-ಹಲವು ರಜೆ ಸಿಕ್ಕರೂ, ಇವರದು ಮಾತ್ರ ವರ್ಷ ಪೂರ್ತಿ ಬಿಡುವೇ ಇಲ್ಲದ

ಕಾಯಕ. ವಿತರಕರಿಲ್ಲದೆ ದಿನಪತ್ರಿಕೆಗಳಿಲ್ಲ ಎಂಬಷ್ಟರ ಮಟ್ಟಿಗೆ ಪತ್ರಿಕಾ ವ್ಯವಸ್ಥೆಗೆ ಇವರು ಅನಿವಾರ್ಯ ಬೆನ್ನೆಲುಬು. ಏಕೆಂದರೆ, ಪತ್ರಿಕೆಗಳನ್ನು ಎಷ್ಟು ಒಪ್ಪ-ಓರಣವಾಗಿ ಸಿದ್ಧಪಡಿಸಿದ ಬಳಿಕವೂ ಅದನ್ನು ಓದುಗರ ಮನೆಬಾಗಿಲಿಗೆ ತಲುಪಿಸುವ ಆಪದ್ಬಾಂಧವರು ಇವರೇ. ಮನೆಯಲ್ಲಿ ಮದುವೆ ಇರಲಿ, ಸೂತಕವಿರಲಿ, ವಿತರಕರು ಯಾವತ್ತೂ ತಮ್ಮ ಕಾಯಕ ತಪ್ಪಿಸುವವರಲ್ಲ. ಕರೊನಾ ಸಂಕಷ್ಟದ ಸಂದರ್ಭ ಇಡೀ ದೇಶವೇ ಲಾಕ್​ಡೌನ್ ಆಗಿದ್ದಾಗಲೂ ಮನೆ-ಮನೆಗೆ ಪತ್ರಿಕೆ ತಲುಪಿಸಿದ ವಾರಿಯರ್ಸ್ ಇವರು. ಶುಕ್ರವಾರ (ಸೆ.4) ಪತ್ರಿಕಾ ವಿತರಕರ ದಿನ. ಈ ಹಿನ್ನೆಲೆಯಲ್ಲಿ ಪತ್ರಿಕಾ ವಿತರಣೆಗೇ ತಮ್ಮ ಜೀವನ ಸಮರ್ಪಿಸಿಕೊಂಡು, ಹತ್ತಾರು ಮಂದಿಗೆ ಉದ್ಯೋಗದಾತರಾಗಿರುವ, ಈ ವೃತ್ತಿಯಿಂದಲೇ ಉತ್ತಮ ಬದುಕು ಕಟ್ಟಿಕೊಂಡು ಮಾದರಿ ಆಗಿರುವ ವಿತರಕ ಬಂಧುಗಳ ಯಶೋಗಾಥೆಯನ್ನು ನಾಡಿಗೆ ಪರಿಚಯಿಸುವ ಕಿರು ಪ್ರಯತ್ನ ಇಲ್ಲಿದೆ. ವಿಜಯವಾಣಿಯ ಎಲ್ಲ ವಿತರಕ ಬಾಂಧವರಿಗೆ ಪತ್ರಿಕಾ ವಿತರಕರ ದಿನ ಶುಭಾಶಯಗಳು.
ಪ್ರಭಾವತಿ-ಮಹಾದೇವ ಧಾರವಾಡ

ಪತ್ರಿಕೆ ವಿತರಣೆ ಮೂಲಕವೇ ಬದುಕು ರೂಪಿಸಿಕೊಂಡವರಲ್ಲಿ ಧಾರವಾಡ ಜಿಲ್ಲೆ ಸಪ್ತಾಪುರದ ಎಂ. ಮಹಾದೇವ ರಾವ್- ಪ್ರಭಾವತಿ ರಾವ್ ಕುಟುಂಬದವರು ಪ್ರಮುಖರು. ಸುಮಾರು 40 ವರ್ಷಗಳ ಹಿಂದೆ ಒಂದು ಪತ್ರಿಕೆಯಿಂದ ವಿತರಣೆ ಪ್ರಾರಂಭಿಸಿ ಇಂದು ಸಾವಿರಾರು ಪ್ರತಿಗಳನ್ನು ವಿತರಿಸುತ್ತಿದ್ದಾರೆ. ಮಹಾದೇವ ರಾವ್ ಸಪ್ತಾಪುರ ಬಳಿ ಪಾನ್ ಶಾಪ್ ಆರಂಭಿಸಿ ನಿತ್ಯ ಒಂದೆರೆಡು ಪತ್ರಿಕೆಗಳ ಮಾರಾಟ ಶುರು ಮಾಡಿದರು. ಸಮೀಪದ ಒಂದು ಮನೆಯವರನ್ನು ಸಂರ್ಪಸಿ, ಪತ್ರಿಕೆ ಹಾಕುತ್ತೇನೆ ಎಂದು ತಿಳಿಸಿ ಒಪ್ಪಿಗೆ ಪಡೆದರು. ಕ್ರಮೇಣ ಹೆಚ್ಚು ಮನೆಯವರನ್ನು ಗ್ರಾಹಕರನ್ನಾಗಿ ಮಾಡಿಕೊಂಡರು.

ಇವರ ಕಾಯಕದಲ್ಲಿ ಪತ್ನಿ ಪ್ರಭಾವತಿ ಸಹ ಪಾಲ್ಗೊಂಡು ಹಲವು ಮನೆಗಳಿಗೆ ಸ್ವತಃ ಪತ್ರಿಕೆ ತಲುಪಿಸುತ್ತಾರೆ. ಈ ಕುಟುಂಬ ಈಗ ನಿತ್ಯ 3 ಸಾವಿರ ಪ್ರತಿಗಳನ್ನು ಮಾರುತ್ತಿದೆ. ಮಹಾದೇವ ರಾವ್ ಗೆ ವಯಸ್ಸಾಗಿದ್ದು, ಆಗಾಗ ಸಣ್ಣಪುಟ್ಟ ಅನಾರೋಗ್ಯವೂ ಕಾಡುವುದರಿಂದ ಪುತ್ರ ಎಂ. ಕೃಷ್ಣಮೂರ್ತಿ ಪತ್ರಿಕೆಗಳ ಜವಾಬ್ದಾರಿ ವಹಿಸಿಕೊಂಡಿದ್ದು, ಸೊಸೆ ಹರ್ಷಿತಾ ಕೂಡ ಸಾಥ್ ನೀಡಿದ್ದಾರೆ. ಈಗಲೂ ಮಹಾದೇವ ರಾವ್ ಅಂಗಡಿಯಲ್ಲಿ ಪತ್ರಿಕೆ ನೀಡುತ್ತಿದ್ದರೆ, ಪ್ರಭಾವತಿ ಪತ್ರಿಕೆ ವಿತರಣೆ ಮೇಲ್ವಿಚಾರಣೆ ನೋಡಿಕೊಳ್ಳುತ್ತಾರೆ. ನೂರಾರು ಮನೆಗಳಿಗೆ ಸ್ವತಃ ತೆರಳಿ ಚಂದಾ ಹಣ ಸಂಗ್ರಹಿಸುತ್ತಾರೆ. ಪತ್ರಿಕೆ ವಿತರಿಸಿ ಜೀವನ ಸಾಗಿಸಬಹುದೇ? ಎಂದು ಮೂಗು ಮುರಿಯುವವರಿಗೆ ಈ ಕುಟುಂಬ ಒಂದು ಆದರ್ಶ.