ಆಂಧ್ರಪ್ರದೇಶ: ದೆಹಲಿಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಪಾನಿಪುರಿ ವ್ಯಾಪಾರಿಯೊಬ್ಬರಿಗೆ ಆಹ್ವಾನ ಬಂದಿದೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮೆಚ್ಚುಗೆ ಸೂಚಿಸುವುದರ ಜತೆ ಯಾರು ಈ ವ್ಯಾಪಾರಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಹುಡುಕಾಡುತ್ತಿದ್ದಾರೆ.
ತೆನಾಲಿಯ ಬಾಲಾಜಿರಾವ್ ಪೇಟೆ ಅಲ್ಲಿ ಮೇಘಾವತ್ ಚಿರಂಜೀವಿ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ಪಾನಿ ಪುರಿ ಮಾರುತ್ತಿದ್ದ. ಆರ್ಥಿಕ ಸಂಕಷ್ಟದಲ್ಲಿದ್ದರೂ ಸಾಲಗಾರರಿಂದ ಬಡ್ಡಿಗೆ ಹಣ ತೆಗೆದುಕೊಳ್ಳುತ್ತಿರಲಿಲ್ಲ. ಆದರೆ (ಮೆಪ್ಮಾ) The Mission for Elimination of Poverty in Municipal Areas ಆಯೋಜಿಸುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಚಿರಂಜೀವಿ, ಸಂಸ್ಥೆ ನೀಡುವ ಬ್ಯಾಂಕ್ ಸಾಲವನ್ನು ಪಡೆಯುತ್ತಿದ್ದರು. ಹೀಗಾಗಿ 2021ರಲ್ಲಿ 10 ಸಾವಿರ, 2022ರಲ್ಲಿ 20 ಸಾವಿರ, 2023ರಲ್ಲಿ 50 ಸಾವಿರ ಸಾಲ ತೆಗೆದುಕೊಂಡಿದ್ದರು. ತೆಗೆದುಕೊಂಡಿದ್ದಷ್ಟೇ ಅಲ್ಲ ಸಕಾಲದಲ್ಲಿ ಹಣ ಪಾವತಿಯನ್ನೂ ಮಾಡಿದ್ದಾರೆ. ಇದರಿಂದ ತೆನಾಲಿ ಮೆಪ್ಮಾದಲ್ಲಿ ಚಿರಂಜೀವಿಗೆ ಒಳ್ಳೆಯ ಹೆಸರು ಬಂತು.
ದೊಡ್ಡ ಉದ್ಯಮಿಗಳು ಬ್ಯಾಂಕ್ ಸಾಲ ಪಡೆದು ಬೆಳೆಯುತ್ತಿರುವ ಈ ದಿನಗಳಲ್ಲಿ ಚಿರಂಜೀವಿ ಅವರ ವ್ಯಾಪಾರ ಅಭಿವೃದ್ಧಿಗೆ ಕಾರಣೀಕರ್ತರಾಗಿರುವ ಬ್ಯಾಂಕ್‌ಗಳಿಗೆ ಸಕಾಲದಲ್ಲಿ ಸಾಲ ಪಾವತಿ ಮಾಡಿರುವುದು ಬ್ಯಾಂಕ್ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇದಲ್ಲದೆ, ಚಿರಂಜೀವಿ ತಮ್ಮ ಕಾರ್ಟ್ನಲ್ಲಿ ಡಿಜಿಟಲ್ ಪಾವತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಬ್ಯಾಂಕ್ ಅಧಿಕಾರಿಗಳು ಸಣ್ಣ ಬಂಡಿಯಲ್ಲಿ ಡಿಜಿಟಲ್ ಪಾವತಿ ಮಾಡಲು ಪ್ರೋತ್ಸಾಹಿಸಿದರು.
ಎರಡು ದಿನಗಳ ಹಿಂದೆ ತೆನಾಲಿ ಅಂಚೆ ಇಲಾಖೆಯ ಅಧಿಕಾರಿಗಳು ಚಿರಂಜೀವಿಯನ್ನು ಹುಡುಕಿಕೊಂಡು ಬಂದಿದ್ದರು. ದ್ರೌಪದಿ ಮುರ್ಮು ಅವರು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಲು ಕಳುಹಿಸಿದ ಆಹ್ವಾನವನ್ನು ಅಧಿಕಾರಿಗಳು ಚಿರಂಜೀವಿ ಅವರಿಗೆ ನೀಡಿದರು. ಏಕೆ ಆಹ್ವಾನ ಬಂದಿದೆ ಎಂದು ಕೇಳಿದರು. ಮೆಪ್ಮಾದಲ್ಲಿ ಸಾಲ ಪಡೆದು ಸಕಾಲದಲ್ಲಿ ಪಾವತಿಸುವುದಲ್ಲದೆ ಡಿಜಿಟಲ್ ಪಾವತಿಗೆ ಉತ್ತೇಜನ ನೀಡುವ ಚಿರಂಜೀವಿ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಹ್ವಾನ ಕಳುಹಿಸಿದ್ದಾರೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಇದರಿಂದ ಅವರ ಸಂತೋಷ ಇನ್ನಷ್ಟು ಹೆಚ್ಚಾಯಿತು.
ದೆಹಲಿಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳುವುದಾಗಿ ಚಿರಂಜೀವಿ ಹೇಳಿದ್ದಾರೆ. ರಾಷ್ಟ್ರಪತಿಯವರಿಂದಲೇ ಆಹ್ವಾನ ಬಂದಿರುವುದಕ್ಕೆ ಅವರ ಕುಟುಂಬ ಸಂತಸ ವ್ಯಕ್ತಪಡಿಸಿದ್ದಾರೆ.