ನ್ಯೂಸ್

ಬಾವಲಿಗಳಿಂದ ಮಾನವನಿಗೆ ಕೊರೊನಾ ವೈರಸ್​ ಹರಡಲು ಚಿಪ್ಪು ಹಂದಿಯೇ ಕಾರಣ ಎನ್ನುತ್ತಿದೆ ಸಂಶೋಧನೆ!

ವುಹಾನ್​: ಚೀನಾ ಸೇರಿದಂತೆ ವಿಶ್ವದೆಲ್ಲೆಡೆ ಸಾವಿನ ಭೀತಿ ಸೃಷ್ಟಿಸಿರುವ ಕೊರೊನಾ ವೈರಸ್​ ಹರಡಿದ್ದರ ಬಗ್ಗೆ ಪ್ರತಿದಿನ ಒಂದಲ್ಲ ಒಂದು ವಿಚಾರಗಳು ಹೊರಬರುತ್ತಿದೆ. ಪ್ರಾಣಿಗಳಿಂದ ಮಾನವನಿಗೆ ವೈರಸ್​ ತಗುಲಿದೆ ಎಂದು ಹೇಳಲಾಗುತ್ತಿದ್ದರೂ ಇನ್ನು ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಇದೀಗ ಈ ಕುರಿತು ಅಧ್ಯಯನದ ಫಲಿತಾಂಶವೊಂದು ಹೊರಬಿದ್ದಿದೆ.

ಬಾವಲಿಗಳಿಂದ ಮನುಷ್ಯರಿಗೆ ಕೊರೊನಾ ವೈರಸ್ ಹರಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದರ ಮಧ್ಯವರ್ತಿಯಾಗಿ ಪ್ಯಾಂಗೊಲಿನ್(ಚಿಪ್ಪು ಹಂದಿ) ಪಾತ್ರವಿದೆ ಎಂದು ಚೀನಾ ವಿಜ್ಞಾನಿಗಳು ವಾದಿಸಿದ್ದಾರೆ.

ದಕ್ಷಿಣಾ ಚೀನಾದ ಕೃಷಿ ವಿಶ್ವವಿದ್ಯಾಲಯದಲ್ಲಿರುವ ಸಂಶೋಧಕರು ಪ್ಯಾಂಗೊಲಿನ್​ ಮಧ್ಯವರ್ತಿ ಪಾತ್ರದ ಸಂಭವನೀಯತೆ ಬಗ್ಗೆ ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಆದರೆ, ಇದು ಪ್ರಾಥಮಿಕ ತನಿಖೆ ಮಾತ್ರ, ಅಂತಿಮ ನಿರ್ಣಯಕ್ಕೆ ಬರಲು ಮತ್ತಷ್ಟು ಸಂಶೋಧನೆ ನಡೆಯುತ್ತಿದೆ ಎಂದು ಬ್ರಿಟಿಷ್​ ಅಕಾಡೆಮಿಕ್ಸ್​ ಎಚ್ಚರಿಕೆ ನೀಡಿದ್ದಾರೆ.

ಚೀನಾದ ವುಹಾನ್​ ನಗರದಲ್ಲಿರುವ ಜೀವಂತ ಪ್ರಾಣಿ ಮಾರುಕಟ್ಟೆಯಲ್ಲಿ ಕೊರೊನಾ ವೈರಸ್​ ಕಳೆದ ವರ್ಷ ಹೊರಹೊಮ್ಮಿತ್ತು ಎನ್ನಲಾಗಿದೆ. ಬಾವಲಿಗಳಿಂದಲೇ ಇದು ಉತ್ಪತಿಯಾಗಿದೆ ಎಂದು ನಂಬಲಾಗಿದೆ. ಆದರೆ, ಕೊರೊನಾ ವೈರಸ್​ ಮಾನವರಿಗೆ ರವಾನೆಯಾಗಲು ಮಧ್ಯವರ್ತಿಯಾಗಿ ಪ್ಯಾಂಗೊಲಿನ್​ ಪಾತ್ರದ ಸಂಭವನಿಯತೆಯನ್ನು ಸಂಶೋಧಕರು ಸೂಚಿಸಿದ್ದಾರೆ.

ಕೃಷಿ ವಿಶ್ವವಿದ್ಯಾಲಯದಲ್ಲಿರುವ ಸಂಶೋಧಕರು ಸುಮಾರು 1000 ಪ್ರಾಣಿಗಳ ರಕ್ತದ ಮಾದರಿಯನ್ನು ತೆಗೆದುಕೊಂಡು ಪರೀಕ್ಷೆ ನಡೆಸಿದ್ದಾರೆ. ಅದರಲ್ಲಿ ಪ್ಯಾಂಗೊಲಿನ್​ನಲ್ಲಿರುವ ವೈರಸ್​ಗೂ ಕೊರೊನಾ ವೈರಸ್​ ತಗಲಿರುವ ರೋಗಿಗಳಿಗೂ ​ ಶೇ 99 ರಷ್ಟು ಸಾಮ್ಯತೆ ಇರುವುದಾಗಿ ಪತ್ತೆಯಾಗಿದೆ. ಸದ್ಯ ಸಂಶೋಧನೆಯ ಪೂರ್ಣ ವರದಿಯು ಬಹಿರಂಗವಾಗಿಲ್ಲ. ಪ್ರಯೋಗದ ಒಂದು ಭಾಗವನ್ನು ಮಾತ್ರ ಕೃಷಿ ವಿಶ್ವವಿದ್ಯಾಲಯವು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನು ಖಚಿತಪಡಿಸಿಕೊಳ್ಳಲು ಮತ್ತಷ್ಟು ಅಧ್ಯಯನ ನಡೆಯುತ್ತಿದೆ. (ಏಜೆನ್ಸೀಸ್​)