ನ್ಯೂಸ್

ಹೊಸ ಪದಾಧಿಕಾರಿಗಳಿಗೆ ಪಂಚಾಯಿತಿ ಹೊಣೆ: ದಿನದ 24 ತಾಸು ಕೆಲಸ ಮಾಡಲು ಸೂಚನೆ

Webdesk - Ravikanth

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಸಂಘಟನೆಯನ್ನು ಸಜ್ಜುಗೊಳಿಸುತ್ತಿರುವ ಕಾಂಗ್ರೆಸ್, ನೂತನ ಪದಾಧಿಕಾರಿಗಳಿಗೆ ಪಂಚಾಯಿತಿ ಮಟ್ಟದಲ್ಲಿ ಕೆಲಸ ಮಾಡಲು ಸ್ಪಷ್ಟ ಸೂಚನೆ ನೀಡಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸಮ್ಮುಖ ನಡೆದ ಪದಾಧಿಕಾರಿ ಸಭೆಯಲ್ಲಿ ಮುಂದಿನ ದಿನಗಳಲ್ಲಿ ಯಾವ ರೀತಿ ತೊಡಗಿಕೊಳ್ಳಬೇಕೆಂದು ಸ್ಪಷ್ಟ ನಿರ್ದೇಶನ ನೀಡಲಾಗಿದೆ. ರಾಜ್ಯ ಸರ್ಕಾರದ ವೈಫಲ್ಯಗಳು, ಕೇಂದ್ರ ಸರ್ಕಾರದ ನೀತಿ ನಿರ್ಧಾರಗಳಿಂದ ಜನ ಸಾಮಾನ್ಯರಿಗಾಗುತ್ತಿರುವ ತೊಂದರೆಯನ್ನು ಮನೆಮನೆಗೂ ಮನದಟ್ಟು ಮಾಡಿಕೊಡಲು ಬೂತ್, ತಾಲೂಕು, ಜಿಲ್ಲಾವಾರು ಜವಾಬ್ದಾರಿ ಹಂಚಿಕೆ ಮಾಡಲಾಗಿದೆ.

ಸಭೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪಕ್ಷದ ನೂತನ ಪದಾಧಿಕಾರಿಗಳ ಮೊದಲ ಸಭೆ ನಡೆಸಿದ್ದು, ಪಕ್ಷದ ವಿಚಾರಗಳನ್ನು ಚರ್ಚೆ ಮಾಡಿದ್ದೇವೆ. ರಾಜ್ಯ ಸರ್ಕಾರದ ಜನವಿರೋಧಿ ನೀತಿಯನ್ನು ಜನರ ಮುಂದೆ ತೆಗೆದುಕೊಂಡು ಹೋಗಲು ಕಾರ್ಯಕ್ರಮ ರೂಪಿಸಿದ್ದೇವೆ ಎಂದರು. ಮುಂದಿನ ಒಂದು ವರ್ಷ ದಿನದ 24 ಗಂಟೆಯನ್ನೂ ಪಕ್ಷಕ್ಕೆ ಮುಡಿಪಿಡಬೇಕೆಂದು ಪದಾಧಿಕಾರಿಗಳಿಗೆ ತಿಳಿಸಲಾಗಿದೆ. ಪ್ರತಿ ಬೂತ್​ನಿಂದ ಕಾರ್ಯಕರ್ತರಿಗೆ ಶಕ್ತಿ ತುಂಬಲು ಯೋಜನೆ ರೂಪಿಸಲಾಗಿದೆ. ಯುವಕರು, ಮಹಿಳೆಯರು, ಅಲ್ಪಸಂಖ್ಯಾತರು, ಹಿಂದುಳಿದವರು, ರೈತರು, ಕಾರ್ವಿುಕರ ಪರವಾಗಿ ಪಕ್ಷ ಹೇಗೆ ನಿಲ್ಲಬೇಕು ಎಂಬುದನ್ನು ರ್ಚಚಿಸಿದ್ದು, ಪ್ರತಿ ಪಂಚಾಯಿತಿ ಮಟ್ಟದಲ್ಲಿ ಪಕ್ಷ ಬಲವರ್ಧನೆಗೆ ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಹೇಳಿದರು. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಪದಾಧಿಕಾರಿಗಳ ಸಭೆಯಲ್ಲಿ ಪಕ್ಷದ ಪ್ರಮುಖ ನಾಯಕರು ಭಾಗವಹಿಸಿ ಅವರ ಜವಾಬ್ದಾರಿ ತಿಳಿಸಿದ್ದೇವೆ. ಚುನಾವಣೆಗೆ ಸಮಯ ವರ್ಷಕ್ಕಿಂತ ಕಡಿಮೆ ಇದ್ದು, ಎಲ್ಲ ಪದಾಧಿಕಾರಿಗಳು ಎಲ್ಲರೂ ದಿನದ 24 ಗಂಟೆಯೂ ಕೆಲಸ ಮಾಡಬೇಕು ಎಂದು ಹೇಳಿದ್ದೇವೆ ಎಂದರು. ಸರ್ಕಾರದ ವೈಫಲ್ಯ, ನಮ್ಮ ಸಾಧನೆ ಜನರ ಮುಂದಿಡುವ ಕೆಲಸ ಆಗಬೇಕು. ಇವರು ಭ್ರಷ್ಟಾಚಾರ, ಕಾನೂನು ಉಲ್ಲಂಘನೆ, ಕೋಮುಸಾಮರಸ್ಯ ಹಾಳು ಮಾಡುತ್ತಿದ್ದಾರೆ. ಈ ಎಲ್ಲ ವಿಚಾರಗಳನ್ನು ಜನರಿಗೆ ತಿಳಿಸಬೇಕಾಗಿದೆ ಎಂದು ವಿವರಿಸಿದರು.

ಸಿದ್ದರಾಮಯ್ಯ ವಾಗ್ದಾಳಿ: ಈಶ್ವರಪ್ಪರ ಕಮಿಷನ್ ಕಿರುಕುಳಕ್ಕೆ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿಂದೆ ಅಬಕಾರಿ ಸಚಿವರಾಗಿದ್ದ ನಾಗೇಶ್ ಭ್ರಷ್ಟಾಚಾರಕ್ಕೆ ಸಿಲುಕಿ ರಾಜೀನಾಮೆ ಕೊಟ್ಟಿದ್ದಾರೆ, ಮತ್ತೊಬ್ಬರು ಲೈಂಗಿಕ ಹಗರಣದಲ್ಲಿ ಸಿಲುಕಿ ರಾಜೀನಾಮೆ ನೀಡಿದ್ದು, ಇನ್ನು 5-6 ಸಚಿವರು ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘದವರು ತಿಳಿಸಿದ್ದಾರೆ. ಈ ಭ್ರಷ್ಟ ಸಚಿವರ ಮಾಹಿತಿಯನ್ನು ಬಹಿರಂಗ ಪಡಿಸಬೇಕು ಎಂದು ನಾನು ಗುತ್ತಿಗೆದಾರರ ಸಂಘಕ್ಕೆ ಒತ್ತಾಯಿಸುತ್ತೇನೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಪ್ರತಿ ಕ್ಷೇತ್ರಕ್ಕೂ ಪ್ರಣಾಳಿಕೆ: ಚುನಾವಣೆಯಲ್ಲಿ ರಾಜ್ಯಕ್ಕೊಂದು ಪ್ರಣಾಳಿಕೆ ಮಾಡುವ ಸಂಪ್ರದಾಯವಿದೆ, ಇದನ್ನು ಹೊರತುಪಡಿಸಿ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಒಂದು ಪ್ರತ್ಯೇಕ ಪ್ರಣಾಳಿಕೆ ಮಾಡಬೇಕೆಂದು ನಿರ್ಣಯಿಸಲಾಗಿದೆ. ಈ ಸಂಬಂಧ ಕ್ಷೇತ್ರದ ಜನ ಏನನ್ನು ಬಯಸುತ್ತಿದ್ದಾರೆ ಎಂಬ ಅಭಿಪ್ರಾಯ ಸಂಗ್ರಹ ಮಾಡಲು ಕಾರ್ಯಕ್ರಮ ರೂಪಿಸಿದ್ದು, ಇದರ ಜವಾಬ್ದಾರಿಯನ್ನೂ ಪದಾಧಿಕಾರಿಗಳಿಗೆ ನೀಡಲಾಗಿದೆ.

ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ತಲೆಮರೆಸಿಕೊಂಡು 15 ದಿನವಾದರೂ ಇನ್ನು ಬಂಧಿಸಲಾಗಿಲ್ಲ. ಅವರಿಗೆ ಪೊಲೀಸ್ ಹಾಗೂ ಸರ್ಕಾರವೇ ರಕ್ಷಣೆ ನೀಡುತ್ತಿದ್ದು, ಜಾಮೀನು ಸಿಗಲಿ ಎಂದು ಕಾಯುತ್ತಿದ್ದಾರೆ. | ಸಿದ್ದರಾಮಯ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದು, ಪ್ರಧಾನಿಗಳು ರಾಜ್ಯಗಳ ಬದಲು ದೇಶದ ವಿಚಾರವಾಗಿ ಮಾತನಾಡಬೇಕು. ಪ್ರಧಾನ ಮಂತ್ರಿಗಳು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಅಬಕಾರಿ ಸುಂಕ ಕಡಿತಗೊಳಿಸಿ ಮಾದರಿಯಾಗಿ ನಿಂತು ನಂತರ ಬೇರೆ ರಾಜ್ಯಗಳಿಗೆ ಹೇಳಬೇಕು. | ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

ಪೊಲೀಸರನ್ನು ಕಾರ್ಯಕರ್ತರಂತೆ ಬಳಕೆ

ಬಿಜೆಪಿ ಸರ್ಕಾರವು ಪೊಲೀಸರು ತಮ್ಮ ಅಣತಿಯಂತೆ ನಡೆಯಬೇಕೆಂದು ಬಯಸುತ್ತಿದೆ. ಪೊಲೀಸರನ್ನು ಪಕ್ಷದ ಕಾರ್ಯಕರ್ತರಂತೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಉಡುಪಿಯಲ್ಲಿ ಪೊಲೀಸರ ಸಮವಸ್ತ್ರ ಬದಲು ಕೇಸರಿ ಬಟ್ಟೆ ತೊಡಿಸಿದ್ದರು. ಮುಖ್ಯಮಂತ್ರಿಯವರು ನೈತಿಕ ಪೊಲೀಸ್​ಗಿರಿಗೆ ಬೆಂಬಲ ಸೂಚಿಸಿದ್ದಾರೆ. ಒಟ್ಟಿನಲ್ಲಿ ಪೊಲೀಸರನ್ನೂ ಅವರ ಪಕ್ಷದ ಕಾರ್ಯಕರ್ತರಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆಪಾದಿಸಿದರು. ಕ್ಲಾರೆನ್ಸ್ ಶಾಲೆಯಲ್ಲಿ ಬೈಬಲ್ ಕಲಿಸುವ ವಿಚಾರವಾಗಿ ಉದ್ಭವಿಸಿರುವ ವಿವಾದದ ಬಗ್ಗೆ ಕೇಳಿದ ಪ್ರಶ್ನೆಗೆ, ಈಗ ಶಾಲೆಗಳಲ್ಲಿ ಯಾವ ರೀತಿ ವ್ಯವಸ್ಥೆಗಳು ಜಾರಿಯಲ್ಲಿವೆಯೋ ಅವುಗಳನ್ನು ಮುಂದುವರಿಯಲು ಬಿಡಬೇಕು. ದೇಶದಲ್ಲಿ ಸಂವಿಧಾನವಿದ್ದು, ಅದರಂತೆ ನಾವು ನಡೆಯಬೇಕು ಎಂದರು. ಪ್ರತಿ ಬಂಕ್​ಗಳಲ್ಲೂ ಮೋದಿ ಅವರು ಸಿಲಿಂಡರ್ ನೀಡುವ ಫೋಟೋ ಹಾಕಿರುತ್ತಾರೆ. ಈಗ ಸಿಲಿಂಡರ್​ಗಳ ಬೆಲೆ ಏನಾಗಿದೆ? ಅವುಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿ ಏನಾಯಿತು? ಅವರು ತಮ್ಮ ಫೋಟೋ ಹಾಕಿಕೊಳ್ಳುವುದಾದರೆ ಅದರ ಪಕ್ಕದಲ್ಲೇ ಗ್ಯಾಸ್ ಬೆಲೆಯನ್ನು ಹಾಕಬೇಕಲ್ಲವೇ? ಎಂದು ಕುಟುಕಿದರು. ಕೋವಿಡ್ ವಿಚಾರದಲ್ಲಿ ನಾವು ಎಚ್ಚರಿಕೆ ವಹಿಸಬೇಕು. ಅದರಲ್ಲಿ ಎರಡನೇ ಮಾತಿಲ್ಲ. ಆದರೆ ಅದೇ ಸಮಯದಲ್ಲಿ ಎಲ್ಲ ಜನರ ಬಗ್ಗೆಯೂ ಯೋಚಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಇದು ಸರ್ಕಾರದ ಜವಾಬ್ದಾರಿ. ಕೋವಿಡ್ ಹೆಸರಲ್ಲಿ ತಮ್ಮ ವಿರುದ್ಧ ನಡೆ ಯುವ ಪ್ರತಿಭಟನೆಗಳನ್ನು ಹತ್ತಿಕ್ಕಲಾಗುತ್ತಿದೆ. ಮಾರ್ಗಸೂಚಿ ಉಲ್ಲಂಘನೆ ಹೆಸರಲ್ಲಿ ನನ್ನ ಮೇಲೆ ಹಲವಾರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಅವರ ನಾಯಕರು ನಿಯಮ ಉಲ್ಲಂಘಿಸಿದ್ದರೂ ನಮ್ಮ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿದ್ದಾರೆ ಎಂದರು.