ನ್ಯೂಸ್

ರಸ್ತೆ ಮೇಲಿನ ಗುಜರಿ ತೆರವಿಗೆ ವಾರದ ಡೆಡ್‌ಲೈನ್

ಶಿವಮೊಗ್ಗ: ಹಲವು ವರ್ಷಗಳಿಂದ ಆಜಾದ್‌ನಗರ ವಾರ್ಡ್‌ನ ಪಂಚವಟಿ ಕಾಲನಿಯಲ್ಲಿ ಗುಜರಿಗಳ ಸದ್ದು ಜನರಿಗೆ ಕಿರಿಕಿರಿ ಉಂಟು ಮಾಡುತ್ತಿವೆ. ಈ ಮಾರ್ಗದಲ್ಲಿ ವಾಹನಗಳಿರಲಿ, ಪಾದಾಚಾರಿಗಳು ಓಡಾಡುವುದೇ ಕಷ್ಟ. ರಸ್ತೆ ಮತ್ತು ಫುಟ್‌ಪಾತ್‌ಗಳ ಮೇಲೆ ಹಾಕಿರುವ ಗುಜರಿ ವಸ್ತುಗಳನ್ನು ಒಂದು ವಾರದೊಳಗೆ ತೆರವು ಮಾಡಿಕೊಳ್ಳಬೇಕು. ಇಲ್ಲವಾದರೆ ಪಾಲಿಕೆಯಿಂದಲೇ ತೆರವುಗೊಳಿಸಲಾಗುವುದು.

ಇದು ಮೇಯರ್ ಸುನೀತಾ ಅಣ್ಣಪ್ಪ ಅವರು ತಮ್ಮದೇ ವಾರ್ಡ್‌ನ ಗುಜರಿ ವ್ಯಾಪಾರಿಗಳಿಗೆ ನೀಡಿದ ಖಡಕ್ ಎಚ್ಚರಿಕೆ.

ಸಾರ್ವಜನಿಕ ವಲಯದಲ್ಲಿ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಆಜಾದ್ ನಗರ ವಾರ್ಡ್‌ನಿಂದ ಸತತ 3 ಬಾರಿ ಗೆದ್ದಿರುವ ಸುನೀತಾ ಅಣ್ಣಪ್ಪ ಮೇಯರ್ ಪಟ್ಟ ಅಲಂಕರಿಸುತ್ತಿದ್ದಂತೆ ಗುರುವಾರ ಪಂಚವಟಿ ಕಾಲನಿಗೆ ಭೇಟಿ ನೀಡಿ ರಸ್ತೆ, ಫುಟ್‌ಪಾತ್ ಮೇಲೆ ಅನಗತ್ಯವಾಗಿ ಹಾಕಿರುವ ಹಳೇ ವಸ್ತುಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದರು.

ಪಾಲಿಕೆ ಜಾಗದಲ್ಲಿ ಗುಜರಿ ವಸ್ತುಗಳು ಹಳೇ ವಾಹನ ಬಿಡಿ ಭಾಗಗಳನ್ನು ಮಾರಾಟ ಮಾಡಲಾಗುತ್ತಿದ್ದು ಅನೇಕ ವ್ಯಾಪಾರಸ್ಥರು ಪರವಾನಗಿ ಪಡೆದುಕೊಂಡಿಲ್ಲ. ಈ ಬಗ್ಗೆ ಪರಿಶೀಲಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಉಪಮೇಯರ್ ಶಂಕರ ಗನ್ನಿ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಧೀರರಾಜ್ ಹೊನ್ನವಿಲೆ, ಮುಖಂಡ ಕೆ.ವಿ.ಅಣ್ಣಪ್ಪ, ಆರೋಗ್ಯಾಧಿಕಾರಿ ಅಮೋಘ್ ಪಾಲ್ಗೊಂಡಿದ್ದರು.