ಬೆಂಗಳೂರು: ಸಂಕ್ರಾಂತಿ ಹಬ್ಬದ ನಿಮಿತ್ತ ಮೂರು ದಿನ ಸ್ಥಗಿತವಾಗಿದ್ದ ಜೆಡಿಎಸ್ ಪಂಚರತ್ನ ರಥಯಾತ್ರೆ ಇಂದಿನಿಂದ(ಮಂಗಳವಾರ) ವಿಜಯಪುರ ಜಿಲ್ಲೆಯ ಇಂಡಿ ವಿಧಾನಸಭೆ ಕ್ಷೇತ್ರದಿಂದ ಪುನಾರಂಭವಾಗಿದೆ. ಕಾರ್ಯಕರ್ತರು ಹಾಗೂ ಮುಖಂಡರು ದೊಡ್ಡ ಪ್ರಮಾಣದಲ್ಲಿ ಭಾಗಿಯಾಗಬೇಕು ಎಂದು ಎಚ್ಡಿಕೆ ಮನವಿ ಮಾಡಿದ್ದಾರೆ.
ಈ ಹಂತದಲ್ಲಿ ಒಟ್ಟು 18 ದಿನ ಪಂಚರತ್ನ ರಥಯಾತ್ರೆ ನಡೆಯಲಿದೆ. ಮಂಗಳವಾರದಿಂದ 6 ದಿನಗಳ ಕಾಲ ಪಂಚರತ್ನ ರಥಯಾತ್ರೆ ವಿಜಯಪುರ ಜಿಲ್ಲೆಯಲ್ಲಿ ನಡೆಯಲಿದೆ. ಕ್ರಮವಾಗಿ ಇಂಡಿ, ಸಿಂಧಗಿ, ದೇವರಹಿಪ್ಪರಗಿ, ನಾಗಠಾಣ, ಮುದ್ದೇಬಿಹಾಳ ಹಾಗೂ ಬಸವನ ಬಾಗೇವಾಡಿ- ಬಬಲೇಶ್ವರ (ಈ ಎರಡೂ ಕ್ಷೇತ್ರಗಳಲ್ಲಿ ಒಂದು ದಿನ) ರಥಯಾತ್ರೆ ನಡೆಯಲಿದೆ.
ಜ.23ರಂದು ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಲ್ಲಿ, 24ರಿಂದ 29ರವರೆಗೆ ರಾಯಚೂರು ಜಿಲ್ಲೆಯ ಲಿಂಗಸಗೂರು, ದೇವದುರ್ಗ, ರಾಯಚೂರು ಗ್ರಾಮಾಂತರ, ರಾಯಚೂರು, ಮಾನ್ವಿ, ಸಿಂಧನೂರು ಕ್ಷೇತ್ರಗಳಲ್ಲಿ ರಥಯಾತ್ರೆ ನಡೆಯುತ್ತದೆ.
ಜ.30ರಂದು ಕೊಪ್ಪಳ ಜಿಲ್ಲೆಯ ಕನಕಗಿರಿ, ಕುಷ್ಟಗಿಯಲ್ಲಿ ರಥಯಾತ್ರೆ ನಡೆಯಲಿದೆ. ಜ.31ರಂದು ಬಳ್ಳಾರಿ, ವಿಜಯನಗರ ಜಿಲ್ಲೆಗಳ ಸಂಡೂರು, ಹಗರಿಬೊಮ್ಮನಹಳ್ಳಿ ಕ್ಷೇತ್ರಗಳಲ್ಲಿ ರಥಯಾತ್ರೆ ಸಾಗುತ್ತದೆ. ಫೆ.1ರಂದು ದಾವಣಗೆರೆ ಕ್ಷೇತ್ರದ ಹರಿಹರ ಕ್ಷೇತ್ರದಲ್ಲಿ ಹಾಗೂ ಫೆ.2 ಮತ್ತು 3ರಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು, ಹಿರೇಕೆರೂರು ಕ್ಷೇತ್ರಗಳಲ್ಲಿ ರಥಯಾತ್ರೆ ನಡೆಯುತ್ತದೆ.