ಮೈಸೂರು/ಮುಳಬಾಗಿಲು: "ನವ ಕರ್ನಾಟಕ ನವ ನಿರ್ಮಾಣಕ್ಕಾಗಿ' ಜೆಡಿಎಸ್ ಆಯೋಜಿಸಿರುವ ಪಂಚರತ್ನ ರಥಯಾತ್ರೆ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೋಲಾರ ಜಿಲ್ಲೆ ಮುಳಬಾಗಿಲಿನಲ್ಲಿ ಇಂದು(ಶುಕ್ರವಾರ) ಬೃಹತ್ ಸಮಾವೇಶ ನಡೆಯಲಿದ್ದು, ಇದಕ್ಕೂ ಮುನ್ನ ಬೆಳಗ್ಗೆಯೇ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿಶೇಷ ಪೂಜೆ ಸಲ್ಲಿಸಿದರು. ಶಾಸಕರಾದ ಜಿ.ಟಿ. ದೇವೇಗೌಡ, ಸಿ.ಎಸ್.ಪುಟ್ಟರಾಜು ಸೇರಿದಂತೆ ಜೆಡಿಎಸ್ ಮುಖಂಡರು ಕುಮಾರಸ್ವಾಮಿಗೆ ಸಾಥ್ ನೀಡಿದರು.
ಸಮಾವೇಶದಲ್ಲಿ ದಳಪತಿಗಳು ಚುನಾವಣೆ ರಣಕಹಳೆ ಊದಲು ಸಜ್ಜಾಗಿದ್ದು. ಮುಳಬಾಗಿಲು ನಗರವಿಡೀ ಹಸಿರುಮಯವಾಗಿದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರೂ ಆದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಧ್ಯಾಹ್ನ 12.30ಕ್ಕೆ ಬೃಹತ್ ಸಮಾವೇಶ ಉದ್ಘಾಟಿಸಲಿದ್ದು, ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಮಾಜಿ ಸಚಿವ ಎಚ್.ಡಿ.ರೇವಣ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ ಜಿ.ಕೆ. ವೆಂಕಟಶಿವಾರೆಡ್ಡಿ, ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಪಕ್ಷದ ಹಿರಿಯ ಮುಖಂಡರು, ಸಂಭವನೀಯ ಅಭ್ಯರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದ ಉಸ್ತುವಾರಿಯನ್ನು ರಾಜ್ಯ ಕೋರ್ ಕಮಿಟಿ ಸದಸ್ಯ ಸಮೃದ್ಧಿ ವಿ.ಮಂಜುನಾಥ್ ವಹಿಸಿದ್ದಾರೆ.
ಪಂಚರತ್ನ ರಥಯಾತ್ರೆಗೆ ನ.1ರಂದು ಕುರುಡುಮಲೆಯ ವಿನಾಯಕ ದೇವರಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಗಿತ್ತು. ನಿರಂತರ ಮಳೆಯಿಂದಾಗಿ ಸಾರ್ವಜನಿಕ ಬೃಹತ್ ಸಮಾವೇಶ ರದ್ದುಗೊಂಡಿತ್ತು. ಇದೀಗ 2 ಜರ್ಮನ್ ಶೆಡ್ಗಳನ್ನು ಅಳವಡಿಸಿ 1.5 ಲಕ್ಷ ಆಸನ ವ್ಯವಸ್ಥೆಗಳನ್ನು ಮಾಡಲಾಗಿದೆ.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಮಾವೇಶ ಮುಗಿದ ಬಳಿಕ ರಾತ್ರಿ ಆವನಿ ಹೋಬಳಿಯ ಊರುಕುಂಟೆ ಮಿಟ್ಟೂರಿನಲ್ಲಿ ಗ್ರಾಮವಾಸ್ತವ್ಯ ಹೂಡಿ ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಲಿದ್ದಾರೆ.
ಜೆಡಿಎಸ್ ರಾಜ್ಯದಲ್ಲಿ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆಗಳಾದ ಶಿಕ್ಷಣವೇ ಆಧುನಿಕ ಶಕ್ತಿ, ಆರೋಗ್ಯವೇ ಸಂಪತ್ತು, ರೈತ ಚೈತನ್ಯ, ವಸತಿ ಆಸರೆ, ಯುವನವ ಮಾರ್ಗ ಮತ್ತು ಮಹಿಳಾ ಸಬಲೀಕರಣ ಜಾರಿಗೊಳಿಸುವ ಉದ್ದೇಶ ಹೊಂದಿದೆ.
ಬಿಗಿ ಭದ್ರತೆ: ಎಸ್ಪಿ ದೇವರಾಜ್ ನೇತೃತ್ವದಲ್ಲಿ ಸಮಾವೇಶಕ್ಕೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಅಡಿಷನಲ್ ಎಸ್ಪಿ ಸಚಿನ್ ಘೋರ್ಪಡೆ, ಮುಳಬಾಗಿಲು ಉಪ ವಿಭಾಗದ ಡಿವೈಎಸ್ಪಿ ಟಿ.ಆರ್. ಜೈಶಂಕರ್ ಉಸ್ತುವಾರಿಯಲ್ಲಿ ಪೊಲೀಸ್ ರಕ್ಷಣೆ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. 4 ಡಿವೈಎಸ್ಪಿ, 24 ಸಿಪಿಐ, 49 ಪಿಎಸ್ಐ, 40 ಎಎಸ್ಐ, 605 ಪೇದೆಗಳು, 94 ಮಹಿಳಾ ಪೇದೆಗಳು, 100 ಹೋಂಗಾರ್ಡ್ಗಳು, 4 ಡಿಆರ್ ವ್ಯಾನ್ಗಳ ಸೇರಿದಂತೆ ಒಟ್ಟು 1000ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
8 ಕಡೆ ಪಾರ್ಕಿಂಗ್ ವ್ಯವಸ್ಥೆ: ಬೆಂಗಳೂರು ಹಾಗೂ ಕೋಲಾರ ಕಡೆಯಿಂದ ಬರುವ ವಾಹನಗಳಿಗೆ ಕಾರ್ಯಕ್ರಮದ ಸಮೀಪ ಇರುವ ಹೆದ್ದಾರಿಗೆ ಹೊಂದಿಕೊಂಡ ವಿ.ಗುಟ್ಟಹಳ್ಳಿ ಬಳಿ ಮುಳಬಾಗಿಲು ಕಡೆಯಿಂದ ವಾಹನಗಳಿಗೆ ಕೆಜಿಎಫ್ ಬೈಪಾಸ್ ಬಳಿಯ 8 ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.