ಬೆಂಗಳೂರು: ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಬೆಳ್ಳಿ ಬೆಡಗು ಮಹೋತ್ಸವ ಹಾಗೂ ಪ್ರಪ್ರಥಮ ಹರ ಜಾತ್ರಾ ಮಹೋತ್ಸವ ಜ.14 ಮತ್ತು 15 ರಂದು ಹರಿಹರದ ಪಂಚಮಸಾಲಿ ಜಗದ್ಗುರು ಪೀಠ ಸುಕ್ಷೇತ್ರದಲ್ಲಿ ನಡೆಯಲಿವೆ.
14ರಂದು ಹರ ಜಾತ್ರಾ ಮಹೋತ್ಸವ, ಯುವ ಸಮಾವೇಶವನ್ನು ಮಾಜಿ ಸಚಿವ ಮುರುಗೇಶ ನಿರಾಣಿ ಉದ್ಘಾಟಿಸಲಿದ್ದಾರೆ. ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಜಾತ್ರೆಗೆ ಚಾಲನೆ ನೀಡಲಿದ್ದಾರೆ. ಆರ್ಟ್ ಆಫ್ ಲಿವಿಂಗ್ನ ಶ್ರೀ ರವಿಶಂಕರ ಗುರೂಜಿ ಸಾನ್ನಿಧ್ಯ ವಹಿಸುವರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ದಿಕ್ಸೂಚಿ ಭಾಷಣ ಮಾಡುವರು ಎಂದು ಶ್ರೀ ವಚನಾನಂದ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಮಾಜಕ್ಕಾಗಿ ದುಡಿದ ಕೈಗಳಿಗೆ ಸನ್ಮಾನ ಸಮಾರಂಭ ಆಯೋಜಿಸಿದ್ದು, ಅಲಗೂರು ಶ್ರೀ ಧರಿದೇವರ ಮಠದ ಶ್ರೀ ಶಾಂತಮೂರ್ತಿ ಲಕ್ಷ್ಮಣ ಮುತ್ಯಾ, ಶ್ರೀ ಹಿರೇಮಠದ
ಶ್ರೀ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ, ಶ್ರೀ ಕಮರಿಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶ್ರೀ ಅವಧೂತ ಮಠದ ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ವಿವರಿಸಿದರು.
ಬೆಳ್ಳಿ ಬೆಡಗು ಸಮಾರಂಭದ ಸಾನ್ನಿಧ್ಯವನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ನಿಡಸೋಸಿ ಶ್ರೀ ಸಿದ್ಧಸಂಸ್ಥಾನ ಮಠದ ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ವಹಿಸಲಿದ್ದು, ಸಿಎಂ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು. 15ರಂದು ಸದ್ಭಕ್ತರಿಗೆ ರುದ್ರಾಕ್ಷಿ ಧಾರಣೆ ನಡೆಯಲಿದೆ. ಶ್ರೀ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಮಾತಾ ಯೋಗೇಶ್ವರಿತಾಯಿ ಅರು ನಡೆಸಿಕೊಡುವರು. ಇಷ್ಟಲಿಂಗ ಪೂಜಾ ಪ್ರಾತ್ಯಕ್ಷತೆಯನ್ನು ಇಳಕಲ್ ಶ್ರೀ ಚಿತ್ತರಗಿ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಶ್ರೀ ಗುರುಮಹಾಂತ ಮಹಾಶಿವಯೋಗಿಗಳು ನಡೆಸಿಕೊಡುವರು. ಅಕ್ಕಮಹಾದೇವಿ ವಚನ ವಿಜಯೋತ್ಸವ, ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ದ್ವಾದಶಮಾನೋತ್ಸವ ಹಾಗೂ ಯೋಗಸಿಂಹಾಸನಾಧೀಶ್ವರ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಸ್ವಾಮೀಜಿ ಅವರ ದ್ವಿತೀಯ ಪೀಠಾರೋಹಣ ಕೂಡ ಆಯೋಜಿಸಲಾಗಿದೆ.
ಇದೇ ವೇಳೆ ಪಂಚಮಸಾಲಿ ಸಮುದಾಯಕ್ಕೆ ಸಂಪುಟದಲ್ಲಿ 3 ಸ್ಥಾನ ನೀಡಬೇಕೆಂದು ಶ್ರೀ ವಚನಾನಂದ ಸ್ವಾಮೀಜಿ ಆಗ್ರಹಿಸಿದರು.
ಹರ ಜಾತ್ರಾಮಹೋತ್ಸವ ವನ್ನು ಇನ್ನು ಮುಂದೆ ಪ್ರತಿವರ್ಷ ಆಚರಿಸಲು ಉದ್ದೇಶಿಸ ಲಾಗಿದೆ. ಜತೆಗೆ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಹಾಗೂ ಅನ್ನ ಸಂತರ್ಪಣೆ, ಬಡ ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸವನ್ನು ಶ್ರೀ ಮಠದಿಂದ ಮಾಡಲು ಉದ್ದೇಶಿಸಲಾಗಿದೆ. |ಮುರುಗೇಶ ನಿರಾಣಿ ಮಾಜಿ ಸಚಿವ