ನ್ಯೂಸ್

ಪ್ಯಾನ್ ವರ್ಲ್ಡ್ ‘ಮಾರ್ಟಿನ್’: ಇದೇ ತಿಂಗಳ 5ರಂದು ಅಂತಾರಾಷ್ಟ್ರೀಯ ಪ್ರೆಸ್‌ಮೀಟ್‌ನಲ್ಲಿ ಟ್ರೇಲರ್ ಬಿಡುಗಡೆ

ಬೆಂಗಳೂರು: ಧ್ರುವ ಸರ್ಜಾ ಮತ್ತು ನಿರ್ದೇಶಕ ಎ.ಪಿ.ಅರ್ಜುನ್ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ‘ಮಾರ್ಟಿನ್’. ಭಾರತ-ಪಾಕಿಸ್ತಾನದ ಗಡಿಯಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡುವ ಯೋಧನ ಕಥೆಯಿದು. ಚಿತ್ರದಲ್ಲಿ ಧ್ರುವ ಸರ್ಜಾಗೆ ‘ರಾಜ್ ವಿಷ್ಣು’, ‘ಗಾಳಿಪಟ-2’ ಖ್ಯಾತಿಯ ವೈಭವಿ ಶಾಂಡಲ್ಯ ಜೋಡಿಯಾಗಿದ್ದಾರೆ. ಜತೆಗೆ ಸುಕೃತಾ ವಾಗ್ಲೆ, ಅಚ್ಯುತ್‌ಕುಮಾರ್, ಅನ್ವೇಷಿ ಜೈನ್ ತಾರಾಗಣದಲ್ಲಿದ್ದಾರೆ. ಪ್ಯಾನ್ ಇಂಡಿಯಾ ಚಿತ್ರವಾಗಿ ಪ್ರಾರಂಭವಾದರೂ ‘ಮಾರ್ಟಿನ್’ಅನ್ನು ಪ್ಯಾನ್ ವರ್ಲ್ಡ್ ಪ್ರೇಕ್ಷಕರಿಗೆ ತಲುಪಿಸುವ ಪ್ಲ್ಯಾನ್ ಚಿತ್ರತಂಡದ್ದು. ಹೀಗಾಗಿಯೇ ವಿನೂತನ ಪ್ರಯೋಗಕ್ಕೆ ಮುಂದಾಗಿರುವ ಚಿತ್ರತಂಡ, ಆಗಸ್ಟ್ 5ರಂದು ಮುಂಬೈನಲ್ಲಿ ಚಿತ್ರದ ಅಂತಾರಾಷ್ಟ್ರೀಯ ಸುದ್ದಿಗೋಷ್ಠಿ ಆಯೋಜಿಸಿದೆ. ಅಂದೇ ಚಿತ್ರದ ಟ್ರೇಲರ್ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ‘ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಬಂಗಾಳಿ ಸೇರಿ ಜಪಾನೀಸ್, ಚೈನೀಸ್ ಭಾಷೆಗಳಲ್ಲೂ ಸಿನಿಮಾ ರಿಲೀಸ್ ಆಗಲಿದೆ. ವಿದೇಶಗಳಿಂದಲೂ ವಿತರಕರು ಉತ್ಸಾಹ ತೋರುತ್ತಿದ್ದು 13 ಭಾಷೆಗಳಲ್ಲಿ ಏಕಕಾಲದಲ್ಲಿ ವಿಶ್ವಾದ್ಯಂತ ಸಿನಿಮಾ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ ನಿರ್ಮಾಪಕ ಉದಯ್ ಮೆಹ್ತಾ.

62 ಲಕ್ಷ ಮಂದಿ ವೋಟಿಂಗ್: ‘ಮಾರ್ಟಿನ್’ ತಂಡ ಇತ್ತೀಚೆಗಷ್ಟೆ ಸಿನಿಮಾದ ಎರಡು ಟ್ರೇಲರ್ ಮತ್ತು ಎರಡು ಹಾಡುಗಳು ಸೇರಿ ನಾಲ್ಕು ಕಂಟೆಂಟ್‌ಗಳಲ್ಲಿ ಪ್ರೇಕ್ಷಕರು ಯಾವುದನ್ನು ನೋಡಲು ಇಚ್ಛಿಸುತ್ತಾರೆ ಎಂಬುದರ ಬಗ್ಗೆ ಪೋಲಿಂಗ್ ನಡೆಸಿತ್ತು. ಈ ಕುರಿತು ನಟ ಧ್ರುವ ಸರ್ಜಾ,‘ಮೊದಲಿಗೆ ಸಿನಿಮಾದ ಚಿತ್ರದ ಟ್ರೇಲರ್, ನಾಯಕನ ಪರಿಚಯಿಸುವ ಸಾಂಗ್, ರೊಮ್ಯಾಂಟಿಕ್ ಸಾಂಗ್ ಮತ್ತು ಥಿಯೇಟ್ರಿಕಲ್ ಟ್ರೇಲರ್ ಈ ನಾಲ್ಕು ಕಂಟೆಂಟ್‌ಗಳಲ್ಲಿ ಯಾವುದು ಮೊದಲು ಬಿಡುಗಡೆ ಮಾಡಬೇಕು ಎಂದು ಪೋಲ್ ನಡೆಸಿದ್ದೆವು. ಸುಮಾರು 62 ಲಕ್ಷ ಮಂದಿ ಪೋಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ ಟ್ರೇಲರ್ ನೋಡಲು 28.60 ಲಕ್ಷ ಜನ ವೋಟಿಂಗ್ ಮಾಡಿದ್ದು, ಹೀಗಾಗಿ ಆಗಸ್ಟ್ 5ರಂದು ಟ್ರೇಲರ್-1 ಬಿಡುಗಡೆ ಮಾಡಲಿದ್ದೇವೆ’ ಎಂದು ಮಾಹಿತಿ ನೀಡಿದರು.

21 ದೇಶಗಳ ಪತ್ರಕರ್ತರು ಭಾಗಿ: ಅಂತಾರಾಷ್ಟ್ರೀಯ ಸುದ್ದಿಗೋಷ್ಠಿ ಆಯೋಜನೆ ಬಗ್ಗೆ ಧ್ರುವ ಸರ್ಜಾ, ‘ಮೊದಲಿಗೆ ಜುಲೈ 29ರಂದು ಅಂತಾರಾಷ್ಟ್ರೀಯ ಸುದ್ದಿಗೋಷ್ಠಿ ಆಯೋಜಿಸಿದ್ದೆವು. ವೀಸಾ ಸಮಸ್ಯೆಯಿಂದಾಗಿ ಆ.5ಕ್ಕೆ ಮುಂದೂಡಬೇಕಾಯಿತು. ಈ ಪ್ರೆಸ್‌ಮೀಟ್‌ನಲ್ಲಿ ಈಜಿಪ್ಟ್, ಕೆನಡಾ, ದುಬೈ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಅಮೆರಿಕ, ಒಮಾನ್, ಸಿಂಗಾಪುರ, ಬಾಂಗ್ಲಾದೇಶ, ಜಪಾನ್, ಕೊರಿಯಾ, ರಷ್ಯಾ, ಚೀನಾ, ಹಾಂಕಾಂಗ್, ಮಲೇಷ್ಯಾ, ವಿಯೆಟ್ನಾಂ ಸೇರಿ 21 ದೇಶಗಳ ಪತ್ರಕರ್ತರು ಭಾಗವಹಿಸಲಿದ್ದಾರೆ. ಜತೆಗೆ ಭಾರತದ ವಿವಿಧ ಭಾಗಗಳಿಂದ ನೂರಾರು ಪತ್ರಕರ್ತರು ಸೇರಲಿದ್ದಾರೆ’ ಎಂದರು.