ಇಸ್ಲಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ವಿರುದ್ಧ ಹೊಸ ಭ್ರಷ್ಟಾಚಾರ ಪ್ರಕರಣ ದಾಖಲಾಗಿದೆ. ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ (ಎನ್ಎಬಿ) ಈ ಪ್ರಕರಣ ದಾಖಲಿಸಿದ್ದು, ಸರ್ಕಾರಿ ವಾಹನಗಳನ್ನು ಅಕ್ರಮವಾಗಿ ಬಳಸಿಕೊಂಡು ಬೊಕ್ಕಸಕ್ಕೆ 195.2 ಕೋಟಿ ರೂಪಾಯಿ ನಷ್ಟ ಉಂಟುಮಾಡಿರುವುದಾಗಿ ಆರೋಪಿಸಲಾಗಿದೆ.
ಎನ್ಎಬಿಯ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಜಾವೇದ್ ಇಕ್ಬಾಲ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಒಟ್ಟು 11 ಪ್ರಕರಣಗಳ ವಿಚಾರಣೆಗೆ ಅನುಮತಿ ಸಿಕ್ಕಿದೆ. ಇದರಂತೆ, ಷರೀಫ್ ಅವರೊಂದಿಗೆ ಚೌಧರಿ, ಸುಲ್ತಾನ್ ಮತ್ತು ಫವಾದ್ ವಿರುದ್ಧ 73 ಹೈ ಸೆಕ್ಯುರಿಟಿ ವಾಹನ ಖರೀದಿಸಿದ್ದಕ್ಕಾಗಿ ಪ್ರಕರಣ ದಾಖಲಾಗಿದೆ. ವಿದೇಶಿ ಗಣ್ಯರ ಆತಿಥ್ಯದ ಕೆಟಗರಿಯಲ್ಲಿ ಈ ವಾಹನಗಳನ್ನು ಖರೀದಿಸಲಾಗಿತ್ತು.
ಪಕ್ಷಪಾತ ಮತ್ತು ಅಕ್ರಮವಾಗಿ ವಾಹನ ಖರೀದಿಸುವ ಮೂಲಕ ಬೊಕ್ಕಸಕ್ಕೆ 195.2 ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಈ ಪ್ರಕರಣದಲ್ಲಿ ಷರೀಫ್ ಪ್ರಮುಖ ಆರೋಪಿಯಾಗಿದ್ದು, ಉಳಿದವರು ಅವರ ಸಹ ಆರೋಪಿಗಳು ಎಂದು ಎನ್ಎಬಿ ಮೂಲಗಳು ತಿಳಿಸಿವೆ. (ಏಜೆನ್ಸೀಸ್)