ನ್ಯೂಸ್

ಪಾಕ್ ಹಣದುಬ್ಬರ ಗಗನಕ್ಕೆ; ಬಡವರು, ಮಧ್ಯಮ ವರ್ಗದವರು ಕಂಗಾಲು

ಇಸ್ಲಾಮಾಬಾದ್: ಮೇ ತಿಂಗಳಲ್ಲಿ ವಾರ್ಷಿಕ ಹಣದುಬ್ಬರ ದಾಖಲೆಯ ಶೇಕಡ 37.97ಕ್ಕೆ ಏರಿದೆ ಎಂದು ಅಧಿಕೃತ ಅಂಕಿಸಂಖ್ಯೆ ಗುರುವಾರ ಬಹಿರಂಗವಾಗುವುದರೊಂದಿಗೆ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನ ಇನ್ನಷ್ಟು ಪ್ರಪಾತಕ್ಕೆ ಕುಸಿಯುವ ಸೂಚನೆ ನೀಡಿದೆ. ದೇಶದ ಸಂಕಷ್ಟಗಳು ಇನ್ನಷ್ಟು ಜಾಸ್ತಿಯಾಗುವುದು ಖಚಿತವಾಗಿದ್ದು ಬಡವರು ಮತ್ತು ಮಧ್ಯಮ ವರ್ಗದ ಜನರು ಕಂಗಾಲಾಗಿದ್ದಾರೆ. ಪಾಕಿಸ್ತಾನದ ಹಣದುಬ್ಬರ ಪ್ರಮಾಣ ದಕ್ಷಿಣ ಏಷ್ಯಾದಲ್ಲೇ ಅತಿ ಹೆಚ್ಚಿನದ್ದಾಗಿದ್ದು ಶ್ರೀಲಂಕಾ ಶೇ. 25.2ರೊಂದಿಗೆ ಎರಡನೇ ಸ್ಥಾನದಲ್ಲಿದೆ.

ಆಲ್ಕೊಹಾಲಿಕ್ ಲಘುಪೇಯ ಮತ್ತು ತಂಬಾಕು ಉತ್ಪನ್ನಗಳ ಹಣದುಬ್ಬರ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 123.96 ಹಾಗೂ ಮನೋರಂಜನೆ ಮತ್ತು ಸಂಸ್ಕೃತಿ ಕ್ಷೇತ್ರದ ಹಣದುಬ್ಬರ ಶೇ. 72.17ಕ್ಕೇರಿದೆ. ಸಾರಿಗೆ ವೆಚ್ಚಗಳು ಶೇ. 52.92ರಷ್ಟು ದುಬಾರಿಯಾಗಿವೆ ಎಂದು ಸಾಂಖ್ಯಿಕ ಬ್ಯೂರೋ ಗುರುವಾರ ಬಿಡುಗಡೆ ಮಾಡಿರುವ ದತ್ತಾಂಶ ತಿಳಿಸಿದೆ. ಬೇಗನೆ ಹಾಳಾಗದ ಆಹಾರ ವಸ್ತುಗಳ ಬೆಲೆಗಳು ಕೂಡ ಶೇ. 50ರಷ್ಟು ಏರಿಕೆ ಕಂಡಿವೆ.

ಆಹಾರ ವಸ್ತು ದುಬಾರಿ

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಮೇ ಮಾಹೆಯಲ್ಲಿ ಗೋಧಿ ಹಿಟ್ಟು, ಚಹಾ, ಗೋಧಿ, ಮೊಟ್ಟೆ ಮತ್ತು ಅಕ್ಕಿ ಬೆಲೆಗಳು ಭಾರಿ ಏರಿಕೆ ಕಂಡಿವೆ. ಪ್ರಧಾನಿ ಶೆಹಬಾಜ್ ಷರೀಫ್ ವಾರ್ಷಿಕ ಬಜೆಟ್ ಮಂಡಿಸಲು ಇನ್ನೊಂದು ವಾರವಷ್ಟೇ ಇರುವಾಗ ಈ ಡೇಟಾ ಬಿಡುಗಡೆಯಾಗಿದೆ. ಅತಿಯಾದ ವಿದೇಶಿ ಸಾಲ, ದುರ್ಬಲ ಕರೆನ್ಸಿ ಮತ್ತು ಕರಗುತ್ತಿರುವ ವಿದೇಶಿ ವಿನಿಮಯ ಮೀಸಲು ಮೊದಲಾದ ಅಂಶಗಳಿಂದ ಭಾರಿ ಆರ್ಥಿಕ ಬಿಕ್ಕಟ್ಟು ಉಂಟಾಗಿದ್ದು ಅದರ ಫಲವಾಗಿ ಹಣದುಬ್ಬರ ಗಗನಮುಖಿಯಾಗಿದೆ. ಜಾಗತಿಕ ಇಂಧನ ಬಿಕ್ಕಟ್ಟು ಮತ್ತು 2022ರಲ್ಲಿ ದೇಶದ ಮೂರನೇ ಒಂದು ಭಾಗವನ್ನು ಮುಳುಗಿಸಿದ ವಿನಾಶಕಾರಿ ಪ್ರವಾಹ ಕೂಡ ಬಿಕ್ಕಟ್ಟು ಉಲ್ಬಣಕ್ಕೆ ಕೊಡುಗೆ ನೀಡಿವೆ.

ಹಲವೆಡೆ ಲೂಟಿ

ಪಾಕಿಸ್ತಾನದಲ್ಲಿ ನಿತ್ಯವೂ ಹೆಚ್ಚುತ್ತಿರುವ ಆಹಾರದ ಬೆಲೆ ಪರಿಣಾಮ ಜನಸಾಮಾನ್ಯರು ಆಹಾರಕ್ಕೆ ಪರದಾಡುತ್ತಿದ್ದಾರೆ. ಹಲವೆಡೆ ಅಂಗಡಿಗಳಿಂದ ಗೋಧಿ ಹಿಟ್ಟು ಚೀಲಗಳನ್ನು ಲೂಟಿ ಮಾಡಲಾಗುತ್ತಿದೆ. ಕಳೆದ 11 ತಿಂಗಳುಗಳಲ್ಲಿ ಹಣದುಬ್ಬರದಲ್ಲಿ ಶೇ. 29.16 ಜಿಗಿತ ಕಂಡಿದೆ. ಪಾಕಿಸ್ತಾನ ಸರ್ಕಾರವು ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಬೇಲ್​ಔಟ್ ಪ್ಯಾಕೇಜ್​ನ ಮೊದಲ ಕಂತನ್ನು ಬಿಡುಗಡೆ ಮಾಡಿದೆ. ಆದರೆ ಈ ಮೊತ್ತ ತೀರಾ ಕಡಿಮೆ.

ರಾಜಕೀಯ ಬಿಕ್ಕಟ್ಟು

ಏಪ್ರಿಲ್​ನಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್​ರ ಸಂಕ್ಷಿಪ್ತ ಬಂಧನ ಪ್ರತಿಭಟಿಸಿ ದೇಶಾದ್ಯಂತ ನಡೆದ ಬೀದಿ ಕಾಳಗದಿಂದ ಉದ್ಭವಿಸಿದ ರಾಜಕೀಯ ಬಿಕ್ಕಟ್ಟು ದೇಶದ ಸವಾಲುಗಳನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ.

ಇನ್ನೊಂದು ಐಎಂಎಫ್ ಸಾಲಕ್ಕೆ ಮುಂದಾದ ಪಾಕ್

ದೇಶದ ಆರ್ಥಿಕತೆಯ ಪುನರುಜ್ಜೀವನಕ್ಕಾಗಿ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) ಹೊಸದಾಗಿ ಇನ್ನೊಂದು ಸಾಲ ಪಡೆಯಲು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಆಸಕ್ತಿ ತೋರಿದ್ದಾರೆ. ಐಎಂಎಫ್ ಮುಖ್ಯಸ್ಥೆ ಕ್ರಿಸ್ತಾಲಿನಾ ಜಾರ್ಜಿಯೆವಾ ಜೊತೆಗಿನ ಮಾತುಕತೆ ವೇಳೆ ಷರೀಫ್ ಈ ಅಭಿಪ್ರಾಯ ವ್ಯಕ್ತಪಡಿಸಿದರಾದರೂ ಪಾಕಿಸ್ತಾನವನ್ನು ಬಿಕ್ಕಟ್ಟಿನಿಂದ ಪಾರು ಮಾಡುವ ಪ್ಯಾಕೇಜ್ ಪುನರುಜ್ಜೀವನಕ್ಕೆ ಐಎಂಎಫ್ ಸಮ್ಮತಿ ತೋರುವ ಸಾಧ್ಯತೆ ಕ್ಷೀಣವಾಗಿದೆ. ಷರೀಫ್ ಕಳೆದ ಶನಿವಾರ ಐಎಂಎಫ್ ಆಡಳಿತ ನಿರ್ದೇಶಕಿ ಜೊತೆ ದೂರವಾಣಿ ಸಂವಾದ ನಡೆಸಿ 650 ಕೋಟಿ ಡಾಲರ್ ಸಾಲದ ಒಪ್ಪಂದವನ್ನು ಪುನರುಜ್ಜೀವನಗೊಳಿಸುವಂತೆ ಆಗ್ರಹಿಸಿದ್ದರು.