ನ್ಯೂಸ್

ಪಾಕ್​ ಸ್ವಾತಂತ್ರ್ಯ ದಿನಾಚರಣೆಯಲ್ಲೇ ಯುವತಿಗೆ ಪುಂಡರ ಕಾಟ! ಅಸಹ್ಯ ವರ್ತನೆಗೆ ನೆಟ್ಟಿಗರ ಕಿಡಿ

ಇಸ್ಲಾಮಾಬಾದ್: ಪಾಕಿಸ್ತಾನದ ಸ್ವಾತಂತ್ರ್ಯ ದಿನ(ಆ.14)ದಂದು ಇಸ್ಲಾಮಾಬಾದ್‌ನಲ್ಲಿ ಕಾರ್ಯಕ್ರಮ ಸ್ಥಳದಲ್ಲಿ ಯುವಕನೊಂದಿಗೆ ಯುವತಿ ನಡೆದು ಹೋಗುತ್ತಿದ್ದುದನ್ನು ಕಂಡು ಪುಂಡರು ಸಾರ್ವಜನಿಕರೆದುರೇ ಹಿಂಬಾಲಿಸಿ ಕಿರುಕುಳ ನೀಡಿದ್ದಾರೆ. ಇದರ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗಿದೆ.

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಶುಕ್ರವಾರ (ಆಗಸ್ಟ್ 16) ಪ್ರಸಾರವಾದ ವೈರಲ್ ವೀಡಿಯೋದಲ್ಲಿ ಯುವಕನ ಜೊತೆಯಲ್ಲಿದ್ದ ಹುಡುಗಿಯನ್ನು ಧ್ವಜ ಹಿಡಿದಿದ್ದ ಪುಂಡರ ಗುಂಪು ಚುಡಾಯಿಸುವುದರ ಜೊತೆಗೆ ಹೆದರಿಸುತ್ತ ವಿಚಿತ್ರವಾದ ಶಬ್ದಗಳನ್ನು ಮಾಡುತ್ತ ಹಿಂಬಾಲಿಸಿಕೊಂಡು ಹೋಗಿದ್ದಾರೆ. ಈ ಆಘಾತಕಾರಿ ಘಟನೆ ಸಾರ್ಯಜನಿಕರ ಮಧ್ಯದಲ್ಲೇ ನಡೆದಿದ್ದು, ಯಾರೂ ಪುಂಡರ ನಿಗ್ರಹಕ್ಕೆ ಮುಂದಾಗಿಲ್ಲ.

ಕಡೆಗೆ ಯುವತಿ ಪುಂಡರ ವಿರುದ್ಧ ತಿರುಗಿಬಿದ್ದಿದ್ದು, ಆಕೆ ಜೊತೆಗಿದ್ದ ವ್ಯಕ್ತಿ ಇಂತಹ ವರ್ತನೆ ಸರಿಯಿಲ್ಲ ಎಂದು ಪುಂಡರ ಗುಂಪಿಗೆ ತಿಳಿಹೇಳಿದ್ದಾನೆ. ಆದರೆ ನಾಚಿಕೆಯಿಲ್ಲದಂತೆ ವರ್ತಿಸಿರುವ ಗುಂಪು ಹುಡುಗಿಗೆ ಕಿರುಕುಳ ನೀಡುವುದನ್ನು ಮುಂದುವರೆಸಿದ್ದಾರೆ.

ಇದರ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ' ಹನ್ನಾ @ ಯೋಗರ್ಟ್‌ಬೀಚೆಸ್ ' ಎಂಬ ಬಳಕೆದಾರರ ಮೂಲಕ ಹಂಚಿಕೊಳ್ಳಲಾಗಿದೆ.

ಪಾಕಿಸ್ತಾನದಲ್ಲಿ ಬೆಲೆ ಏರಿಕೆಯಿಂದ ಅಗತ್ಯವಸ್ತುಗಳಿಗಾಗಿ ಪರದಾಡುವುದು ಒಂದೆಡೆಯಾದರೆ, ಅರಾಜಕತೆ ಹೆಚ್ಚಾಗಿ ಸಾರ್ವಜನಿಕವಾಗಿ ಮೃಗೀಯ ಮತ್ತು ಅನಾಗರಿಕರಂತೆ ವರ್ತನೆ ತೋರುವುದು ಹೆಚ್ಚಾಗಿದೆ. ಇದಕ್ಕೆ ಇದು ತಾಜಾ ಉದಾಹರಣೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ನೆಟಿಜನ್‌ಗಳು ಘಟನೆಯ ಬಗ್ಗೆ ಅಸಹ್ಯ ವ್ಯಕ್ತಪಡಿಸಿದ್ದಾರೆ ಮತ್ತು ಇದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಪ್ರಸ್ತುತ ಈ ವೀಡಿಯೋ ವೈರಲ್​ ಆಗಿದೆ.