ಕಾಬುಲ್/ಇಸ್ಲಾಮಾಬಾದ್: ಅಂತಾರಾಷ್ಟ್ರೀಯ ಸಮುದಾಯಕ್ಕೆ ಒಪ್ಪಿಗೆಯಾಗುವಂತೆ ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸುವ ಕಸರತ್ತಿನಲ್ಲಿ ತಾಲಿಬಾನಿಗಳಿಗೆ ಹಿನ್ನಡೆ ಆಗಿದೆ. ಕಳೆದ ಎರಡು ದಿನಗಳಿಂದ ಸರ್ಕಾರ ರಚನೆ ಘೋಷಣೆ ಮುಂದೂಡಿಕೆಯಾಗುತ್ತ ಬಂದಿದೆ. ಇದನ್ನು ಗಮನಿಸಿರುವ ಪಾಕಿಸ್ತಾನದ ಐಎಸ್ಐ (ಇಂಟರ್ ಸರ್ವೀಸ್ ಇಂಟೆಲಿಜೆನ್ಸ್) ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಶನಿವಾರ ಕಾಬುಲ್ಗೆ ದೌಡಾಯಿಸಿದ್ದಾರೆ. ಅಂತಾರಾಷ್ಟ್ರೀಯ ಸಮುದಾಯದ ನಿರೀಕ್ಷೆಗೆ ತಕ್ಕಂತೆ ಸರ್ಕಾರ ರಚಿಸುವುದು ತಾಲಿಬಾನಿಗಳಿಗೆ ಸವಾಲಾಗಿ ಪರಿಣಮಿಸಿದೆ. ಇದನ್ನು ಗಮನಿಸಿದ ಐಎಸ್ಐ ಮುಖ್ಯಸ್ಥ ಹಮೀದ್ ಮತ್ತು ಪಾಕಿಸ್ತಾನದ ಉನ್ನತ ಅಧಿಕಾರಿಗಳ ನಿಯೋಗವೂ ಕಾಬುಲ್ ತಲುಪಿದೆ. ಸರ್ಕಾರ ರಚನೆಯ ಪ್ರಕ್ರಿಯೆಯನ್ನು ಈ ನಿಯೋಗ ಗಮನಿಸಲಿದೆ. ಆಗಸ್ಟ್ 15ರಂದು ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿದ ನಂತರ ಇದೇ ಮೊದಲ ಬಾರಿಗೆ ಐಎಸ್ಐ ಮುಖ್ಯಸ್ಥ ಹಮೀದ್ ಕಾಬುಲ್ಗೆ ಹೋಗಿದ್ದಾರೆ. ತಾಲಿಬಾನ್ ಕಮಾಂಡರ್ಗಳ ಜತೆಗೆ ಪಾಕ್-ಅಫ್ಘನ್ ಸುರಕ್ಷತೆ, ಅರ್ಥಿಕತೆ, ಗಡಿ ನಿರ್ವಹಣೆ ಮತ್ತು ಇತರೆ ವಿಚಾರಗಳ ಬಗ್ಗೆ ಹಮೀದ್ ಚರ್ಚೆ ನಡೆಸಲಿದ್ದಾರೆ. ಕಾಬುಲ್ನಲ್ಲಿರುವ ಪಾಕಿಸ್ಥಾನದ ರಾಯಭಾರಿ ಕೂಡ ಇವರ ಜತೆಗೂಡಿದ್ದಾರೆ ಎಂದು ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಪಾಕ್ನಲ್ಲಿ ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ: ಬ್ರಿಟನ್ನ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಪಾಕಿಸ್ತಾನಕ್ಕೆ ಗುರುವಾರ ರಾತ್ರಿ ತಲುಪಿದ್ದಾರೆ. ಪಾಕ್ ನಾಯಕತ್ವದ ಜತೆಗೆ ಅಫ್ಘನ್ ವಿಚಾರ ಮತ್ತು ಇತರೆ ದ್ವಿಪಕ್ಷೀಯ ವಿಷಯ ಚರ್ಚೆ ನಿಗದಿಯಾಗಿತ್ತು. ರಾಬ್ ಅವರು ಸೇನಾ ಮುಖ್ಯಸ್ಥ ಜನರಲ್ ಕಾಮರ್ ಜಾವೇದ್ ಬೆಜ್ವಾ ಅವರನ್ನು ಭೇಟಿ ಮಾಡಿದ್ದು, ಮಾತುಕತೆ ನಡೆಸಿದ್ದರು. ಇದರ ಬೆನ್ನಿಗೆ, ಐಎಸ್ಐ ಮುಖ್ಯಸ್ಥರ ನಿಯೋಗ ಕಾಬುಲ್ಗೆ ಪ್ರಯಾಣಿಸಿದೆ.
ಪ್ರತಿಭಟನಾನಿರತ ಮಹಿಳೆ ಮೇಲೆ ಹಲ್ಲೆ: ಕಾಬುಲ್ನಲ್ಲಿ ತಾಲಿಬಾನ್ ರಚಿಸಲಿರುವ ಹೊಸ ಸರ್ಕಾರದಲ್ಲಿ ಮಹಿಳೆಯರಿಗೂ ಸ್ಥಾನ ನೀಡಬೇಕೆಂಬ ಹಕ್ಕು ಆಗ್ರಹಿಸಿದ ಅಫ್ಘನ್ ಮಹಿಳೆ ಮೇಲೆ ತಾಲಿಬಾನಿಗಳು ಹಲ್ಲೆ ನಡೆಸಿದ್ದಾರೆ. ಪ್ರೆಸಿಡೆನ್ಶಿಯಲ್ ಪ್ಯಾಲೇಸ್ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದ ಮಹಿಳೆಯರ ಪೈಕಿ, ರಬಿಯಾ ಸಾದತ್ ಎಂಬಾಕೆ ಮೇಲೆ ಹಲ್ಲೆ ನಡೆದಿರುವಂಥದ್ದು. ಪ್ರತಿಭಟನಾನಿರತ ಮಹಿಳೆಯರನ್ನು ಚದುರಿಸಲು ತಾಲಿಬ್ಗಳು ಅಶ್ರುವಾಯುವನ್ನು ಸಿಡಿಸಿದ್ದರು. ರಬಿಯಾ ಸಾದತ್ ಹಣೆ ಮೇಲೆ ರಕ್ತ, ಕೆನ್ನೆ ಮೇಲೆ ಏಟು ಬಿದ್ದ ಗುರುತುಗಳಿರುವ ವಿಡಿಯೋ, ಫೋಟೋ ವೈರಲ್ ಆಗಿದೆ. ಇಷ್ಟಾಗ್ಯೂ, ಶನಿವಾರವೂ ಶಿಕ್ಷಣ, ಇತರೆ ಹಕ್ಕುಗಳ ಬೇಡಿಕೆಯೊಂದಿಗೆ ಮಹಿಳೆಯರ ಪ್ರತಿಭಟನೆ ಮುಂದುವರಿದಿದೆ.
ಮುಂದುವರಿದ ಪಂಜ್ಶೀರ್ ಘರ್ಷಣೆ: ಕಾಬುಲ್ನ ಉತ್ತರಕ್ಕೆ ಇರುವ ಪಂಜ್ಶೀರ್ ಕಣಿವೆಯನ್ನು ಶುಕ್ರವಾರ ಸಂಪೂರ್ಣವಾಗಿ ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಪೂರ್ಣ ಅಫ್ಘಾನಿಸ್ತಾನ ವಶವಾದಂತಾಗಿದೆ ಎಂದು ತಾಲಿಬಾನ್ನ ಮೂರು ಮೂಲಗಳು ತಿಳಿಸಿವೆ. ತಾಲಿಬಾನ್ ಅತಿಕ್ರಮಣಕ್ಕೆ ಒಳಗಾಗಿರುವ ನಾವು ಬಹಳ ಸಂಕಷ್ಟಮಯ ಸನ್ನಿವೇಶ ಎದುರಿಸುತ್ತಿದ್ದೇವೆ ಎಂಬುದು ನಿಸ್ಸಂದೇಹ. ಆದರೆ, ಇದನ್ನು ಪಂಜ್ಶೀರ್ ಹೋರಾಟಗಾರರು ನಿರಾಕರಿಸಿದ್ದು, ತಾಲಿಬಾನ್ ಸುಳ್ಳು ಪ್ರಚಾರ ಮಾಡುತ್ತಿದೆ. ಪಂಜ್ಶೀರ್ ನಮ್ಮ ಅಧೀನದಲ್ಲೇ ಇದೆ. ತಾಲಿಬಾನಿಗಳಿಗೆ ನಾವು ಪ್ರತಿರೋಧ ತೋರುತ್ತಿದ್ದೇವೆ ಎಂದು ಟೀಕಿಸಿದ್ದಾರೆ.
ಅಫ್ಘನ್ ಸರ್ಕಾರದ ಇಮೇಲ್ ಬಂದ್: ಅಫ್ಘನ್ ಸರ್ಕಾರ ಆಡಳಿತ ವಿಚಾರಗಳಿಗೆ ಮಾಡಿಕೊಂಡಿದ್ದ ಇ ಮೇಲ್ ಖಾತೆಗಳನ್ನು ಗೂಗಲ್ ಬಂದ್ ಮಾಡಿದೆ. ಅಫ್ಘನ್ ಪರಿಸ್ಥಿತಿ ಸದ್ಯಕ್ಕೆ ಸರಿ ಇಲ್ಲ. ಹೀಗಾಗಿ, ನಿಕಟಪೂರ್ವ ಸರ್ಕಾರಕ್ಕೆ ಸಂಬಂಧಿಸಿದ ಕೆಲವು ಮುಖ್ಯ ಇ ಮೇಲ್ ಖಾತೆಗಳನ್ನು ಬಂದ್ ಮಾಡಲಾಗಿದೆ. ಇದು ತಾತ್ಕಾಲಿಕ ಕ್ರಮವಾಗಿರುತ್ತದೆ. ಪರಿಣತರ ಜತೆಗೆ ಸಮಾಲೋಚನೆ ನಡೆಸಿ, ಸ್ಥಿತಿಗತಿ ಅವಲೋಕನ ಮಾಡಿಕೊಂಡು ಮುಂದಿನ ನಿರ್ಣಯವನ್ನು ತೆಗೆದುಕೊಳ್ಳಲಾಗುವು ದೆಂದು ಗೂಗಲ್ ಸ್ಪಷ್ಟಪಡಿಸಿದೆ.
ವಿಶ್ವಸಂಸ್ಥೆಯಲ್ಲಿ ಸೆ.13ಕ್ಕೆ ಅಫ್ಘನ್ ಕುರಿತು ಸಭೆ: ಅಫ್ಘನ್ಗೆ ನೆರವಾಗುವ ದೃಷ್ಟಿಯಿಂದ ಸೆ.13ಕ್ಕೆ ಅಂತಾರಾಷ್ಟ್ರೀಯ ಏಯ್್ಡ ಕಾನ್ಪರೆನ್ಸ್ನ್ನು ಜಿನೇವಾದಲ್ಲಿ ಆಯೋಜಿಸಲು ವಿಶ್ವಸಂಸ್ಥೆ ತೀರ್ವನಿಸಿದೆ. ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಆಂಟೊನಿಯೊ ಗುಟೆರ್ರೆಸ್ ಈ ವಿಚಾರ ತಿಳಿಸಿದ್ದು, ಅಫ್ಘನ್ ಜನರಿಗೆ ಅಂತಾರಾಷ್ಟ್ರೀಯ ಸಮುದಾಯ ನೆರವು ನೀಡಬೇಕು. ಅವರ ಬೆಂಬಲಕ್ಕೆ ನಿಲ್ಲಬೇಕು. ಮಾನವೀಯ ನೆಲೆಯಲ್ಲಿ ಅವರ ಅಗತ್ಯಗಳನ್ನು ಪೂರೈಸಬೇಕು. ಈ ನಿಟ್ಟಿನಲ್ಲಿ ಇಂಥದ್ದೊಂದು ಶೃಂಗದ ಅಗತ್ಯವಿದೆ ಎಂದು ಹೇಳಿದರು.
ಒಂದು ವಾರ ಮುಂದೂಡಿಕೆ: ಅಫ್ಘನ್ನಲ್ಲಿ ಸರ್ಕಾರ ರಚನೆಯ ಪ್ರಕ್ರಿಯೆಯನ್ನು ಮುಂದಿನ ವಾರಕ್ಕೆ ಮುಂದೂಡಿರುವುದಾಗಿ ತಾಲಿಬಾನ್ ವಕ್ತಾರ ಜಬಿವುಲ್ಲಾ ಮುಜಾ ಹಿದ್ ಶನಿವಾರ ತಿಳಿಸಿದ್ದಾನೆ. ಅಂತಾರಾಷ್ಟ್ರೀಯ ಸಮುದಾಯಕ್ಕೆ ಸಮ್ಮತ ವಾಗುವಂತೆ ಎಲ್ಲರನ್ನೂ ಒಳಗೊಂಡ ವಿಸõತ ಸರ್ಕಾರ ರಚನೆಗೆ ರೂಪು ಕೊಡುವುದು ತಾಲಿಬಾನಿಗಳಿಗೆ ಸವಾಲಾಗಿದೆ. ಘೋಷಣೆಯಾದ ಪ್ರಕಾರ, ತಾಲಿ ಬಾನ್ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದಾರ್ ನೇತೃತ್ವ ದಲ್ಲಿ ಸರ್ಕಾರ ರಚನೆ ಆಗಬೇಕಾಗಿತ್ತು. ಆದರೆ, ಪ್ರಯತ್ನ ಫಲ ಕೊಡಲಿಲ್ಲ.
ಆತಂಕದಲ್ಲಿ ಅಫ್ಘನ್ ಪೈಲಟ್ಗಳು: ತಾಲಿಬಾನಿಗಳು ಕಾಬುಲ್ ವಶಪಡಿಸಿಕೊಳ್ಳುವುದು ಖಚಿತವಾಗುತ್ತಿರುವಂತೆ ಅಮೆರಿಕದಲ್ಲಿ ತರಬೇತಿ ಪಡೆದ ಅಫ್ಘನ್ ಪೈಲಟ್ಗಳು ತಮ್ಮ ಬಳಿ ಇದ್ದ ಅಮೆರಿಕನ್ ಏರ್ಕ್ರಾಫ್ಟ್ಗಳೊಂದಿಗೆ ತಜಕಿಸ್ತಾನ, ಉಜ್ಬೇಕಿಸ್ಥಾನಗಳ ಕಡೆಗೆ ಆಶ್ರಯಕೋರಿ ಹೋಗಿದ್ದರು. ಉಜ್ಬೇಕಿಸ್ತಾನದ ಕ್ಯಾಂಪ್ನಲ್ಲಿರುವ ಪೈಲಟ್ಗಳು ಈಗ ವಾಪಸ್ ಅಫ್ಘನ್ಗೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಹೀಗಾಗಿ ಎಲ್ಲರೂ ಪ್ರಾಣಭೀತಿಗೆ ಒಳಗಾಗಿದ್ದಾರೆ. ಅಫ್ಘನ್ನಲ್ಲಿ ಒಟ್ಟು 465 ಪೈಲಟ್ಗಳಿದ್ದರು. ಎಲ್ಲರೂ ಈಗ ಬೇರೆ ಬೇರೆ ದೇಶಗಳಲ್ಲಿ ಆಶ್ರಯ ಕೋರಿದ್ದಾರೆ. ಆದರೆ, ಅಲ್ಲಿಂದ ಹಿಂದಕ್ಕೆ ಹೋದರೆ ಜೈಲಿನಲ್ಲಿ ಅಥವಾ ತಾಲಿಬಾನಿಗಳ ಕೈಗೆ ಸಿಲುಕಿ ಸಾಯೋದು ಖಚಿತ ಎಂದು ಹೇಳತೊಡಗಿದ್ದಾರೆ.
ಫೈರಿಂಗ್ಗೆ 17 ಜನ ಬಲಿ: ಅಫ್ಘನ್ ರಾಜಧಾನಿ ಕಾಬುಲ್ನಲ್ಲಿ ಶುಕ್ರವಾರ ರಾತ್ರಿ ತಾಲಿಬಾನಿಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಕನಿಷ್ಠ 17 ಜನ ಬಲಿಯಾಗಿದ್ದಾರೆ. 41 ಜನ ಗಾಯಗೊಂಡಿದ್ದಾರೆ. ಪಂಜ್ಶೀರ್ ಕಣಿವೆ ತಾಲಿಬಾನ್ ವಶವಾಗಿದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ತಾಲಿಬಾನಿಗಳು ಹರ್ಷದಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಗೊತ್ತು ಗುರಿ ಇಲ್ಲದೆ ಗುಂಡು ಹಾರಿಸಿದ ಪರಿಣಾಮ ಈ ದುರಂತ ಸಂಭವಿಸಿದೆ.
ಕರ್ಜೆ, ಅಬ್ದುಲ್ಲಾಗಿಲ್ಲ ಸ್ಥಾನ: ಸರ್ಕಾರ ರಚನೆಗೆ ಸಂಬಂಧಿಸಿ ಯಾವುದೇ ಒತ್ತಡಕ್ಕೂ ತಾಲಿಬಾನ್ ಮಣಿಯುವುದಿಲ್ಲ. ಮಾಜಿ ಪ್ರೆಸಿಡೆಂಟ್ ಹಮೀದ್ ಕರ್ಜೆ, ಅಬ್ದುಲ್ಲಾ ಅಬ್ದುಲ್ಲಾ ಅವನ್ನು ಸರ್ಕಾರಕ್ಕೆ ಸೇರಿಸಿಕೊಳ್ಳಲಾಗುವುದಿಲ್ಲ. ಈ ಇಬ್ಬರು ಮತ್ತು ಫಝುಲ್ ಹಾದಿ ಮುಸ್ಲಿಮ್ಯಾರ್ಗೆ ನೀಡಿದ್ದ ಭದ್ರತೆ ಹಿಂಪಡೆಯಲಾಗುತ್ತಿದೆ ಎಂದು ತಾಲಿಬಾನ್ ಶನಿವಾರ ಹೇಳಿದೆ. ಇದರೊಂದಿಗೆ ಈ ಮೂವರು ಅಪಾಯದ ಸುಳಿಗೆ ಸಿಲುಕಿದ್ದು, ಕರ್ಜೆ ಅವರು ಅಬ್ದುಲ್ಲಾ ಅಬ್ದುಲ್ಲಾ ಮನೆಗೆ ಸ್ಥಳಾಂತರವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಿರಾಶ್ರಿತರಿಗೆ ಪ್ರತ್ಯೇಕ ಪಟ್ಟಣ: ಅಫ್ಘನ್ನಿಂದ 25,000ಕ್ಕೂ ಅಫ್ಘನ್ನರನ್ನು ಅಮೆರಿಕಕ್ಕೆ ಸ್ಥಳಾಂತರಿಸಲಾಗಿದೆ. ಅಫ್ಘನ್ನರ ಜತೆಗೆ ಸಂಭಾಷಣೆ ನಡೆಸುವುದಕ್ಕೆ ಹೆಚ್ಚುವರಿ ದುಭಾಷಿಗಳನ್ನು ನೇಮಕ ಮಾಡಲಾಗುತ್ತಿದೆ. ಇವರಿಗೆ ನೆಲೆಸಲು 8 ಪ್ರತ್ಯೇಕ ಸ್ಥಳಗಳಲ್ಲಿ ‘ಸಣ್ಣ ಸಣ್ಣ ಪಟ್ಟಣ’ಗಳನ್ನು ನಿರ್ವಿುಸಲಾಗುತ್ತಿದೆ. ಈ ಪಟ್ಟಣಗಳಲ್ಲಿ ಒಟ್ಟು 50,000 ಅಫ್ಘನ್ನರು ನೆಲೆಸಬಹುದಾಗಿದೆ. ಅಮೆರಿಕಕ್ಕೆ ಬಂದವರಲ್ಲಿ ಯಾರಿಗೂ ಕೋವಿಡ್ ಸೋಂಕು ತಗುಲಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಅಮೆರಿಕದ ನಾರ್ದರ್ನ್ ಕಮಾಂಡ್ನ ಮುಖ್ಯಸ್ಥ ಏರ್ಫೋರ್ಸ್ ಜನರಲ್ ಗ್ಲೆನ್ ವ್ಯಾನ್ಹೆರ್ಕ್ ಶುಕ್ರವಾರ ತಿಳಿಸಿದ್ದಾರೆ.