ನವದೆಹಲಿ: ಬಿಹಾರದಲ್ಲಿನ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ವಿವಾದಾತ್ಮಕವಾಗಿ ಪರಿಣಮಿಸಿರುವ ನಡುವೆಯೇ ಪಾಕಿಸ್ತಾನಿ ಪ್ರಜೆಗಳೂ ಅಲ್ಲಿನ ಮತದಾರರ ಪಟ್ಟಿಯಲ್ಲಿ ಇರುವುದು ಕಂಡುಬಂದಿದೆ. ಪಾಕಿಸ್ತಾನದಿಂದ ಬಂದು ಭಾಗಲ್ಪುರದಲ್ಲಿ ನೆಲೆಸಿರುವ ಮಹಿಳೆಯರಿಬ್ಬರು ಮತದಾರರ ಪಟ್ಟಿಯಲ್ಲಿರುವುದು ಎಸ್ಐಆರ್ನಲ್ಲಿ ಬಹಿರಂಗವಾಗಿದೆ. ವೀಸಾ ಅವಧಿ ಮುಗಿದ ಬಳಿಕವೂ ಭಾರತದಲ್ಲೇ ನೆಲೆಸಿರುವ ವಿದೇಶಿಗರ ಕುರಿತು ಕೇಂದ್ರ ಗೃಹ ಸಚಿವಾಲಯ ಪರಿಶೀಲನೆ ನಡೆಸುತ್ತಿರುವಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರೂ 1950ರ ದಶಕದಲ್ಲಿ ಭಾರತಕ್ಕೆ ಬಂದಿದ್ದು, ಬಿಹಾರದಲ್ಲಿ ಅಕ್ರಮವಾಗಿ ನೆಲೆಸಿದ್ದಲ್ಲದೆ, ಮತದಾರರ ಪಟ್ಟಿಯಲ್ಲೂ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಇಬ್ತುಲ್ ಹಸನ್ ಎಂಬಾತನ ಪತ್ನಿ ಇಮ್ರಾನಾ ಖಾನ್ ಅಲಿಯಾಸ್ ಇಮ್ರಾನಾ ಖತೂನ್ ಮತ್ತು ಮೊಹಮದ್ ತಫ್ಜೀಲ್ ಅಹ್ಮದ್ನ ಪತ್ನಿ ಫಿರ್ದೌಸಿಯಾ ಖಾನಂ ಮತದಾರರ ಪಟ್ಟಿಯಲ್ಲಿ ಕಂಡುಬಂದಿರುವ ಪಾಕ್ ಪ್ರಜೆಗಳು. ಇಬ್ಬರೂ ಟ್ಯಾಂಕ್ ಲೇನ್ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು. ಫಿರ್ದೌಸಿಯಾ ಎಂಬಾಕೆ ರಂಗ್ಪುರ್ ನಿವಾಸಿಯಾಗಿದ್ದು, 1956ರ ಜ.19ರಂದು ಮೂರು ತಿಂಗಳ ವೀಸಾದಲ್ಲಿ ಭಾರತಕ್ಕೆ ಬಂದಿದ್ದಳು, ಇಮ್ರಾನಾ 3 ವರ್ಷಗಳ ವೀಸಾದಲ್ಲಿ ಭಾರತಕ್ಕೆ ಬಂದಿದ್ದಳು. ನಿಗದಿತ ಗಡುವಿನೊಳಗೆ ಸರಿಯಾದ ದಾಖಲೆಗಳೊಂದಿಗೆ ಮಾಹಿತಿ ಸಲ್ಲಿಸಬೇಕು ಎಂದು ಭಗಲ್ಪುರ ಜಿಲ್ಲಾಡಳಿತ ಇಬ್ಬರಿಗೂ ನೋಟಿಸ್ ಜಾರಿ ಮಾಡಿದೆ. ಇಬ್ಬರೂ ಇಷಾಕ್ಚಕ್ ಪೊಲೀಸ್ ಠಾಣೆ ವ್ಯಾಪ್ತಿಯ ಟ್ಯಾಂಕ್ ಲೇನ್ 3ರ ಭಿಕಾನ್ಪುರ ಗುಮ್ಟಿಯಲ್ಲಿ ನೆಲೆಸಿದ್ದಾರೆ.
ಕ್ರಮ ಜರುಗಿಸಿದ ಬಿಎಲ್ಒ: ಬೂತ್ವುಟ್ಟದ ಅಧಿಕಾರಿ (ಬಿಎಲ್ಒ) ಫರ್ಜಾನಾ ಖಾನುಂ ದಾಖಲೆಗಳನ್ನು ಪರಿಶೀಲಿಸಿದ್ದು, ಪಾಕ್ ಮೂಲದ ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಯಿಂದ ತೆಗೆಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಗೃಹ ಸಚಿವಾಲಯದ ಆ.11ರ ಸೂಚನೆ ಮೇರೆಗೆ ಪಾಸ್ಪೋರ್ಟ್ ಆಧಾರಿತ ಅಧಿಕೃತ ಮಾಹಿತಿಯೊಂದಿಗೆ ತಾಳೆ ನಡೆಸಿ ಹೊಂದಿಕೆಯಾದ ಹಿನ್ನೆಲೆಯಲ್ಲಿ ಪಾಕ್ ಪ್ರಜೆಗಳ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯಲು ಕ್ರಮಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಿಹಾರದಲ್ಲಿ ಪ್ರಕಟಿಸಿರುವ ಮತದಾರರ ಕರಡು ಪಟ್ಟಿಯಲ್ಲಿ 7.24 ಕೋಟಿ ಮತದಾರರಿದ್ದು, ಅದಕ್ಕೆ ಸಂಬಂಧಿಸಿದಂತೆ 12 ರಾಜಕೀಯ ಪಕ್ಷಗಳ ಬ್ಲಾಕ್ ಲೆವೆಲ್ ಏಜೆಂಟರಿಂದ ಸಲ್ಲಿಕೆಯಾಗಿದ್ದು ಬರೀ ಹತ್ತು ಆಕ್ಷೇಪಣೆಗಳು ಎಂದು ಬಿಹಾರ ಚುನಾವಣಾಧಿಕಾರಿ ಮಾಹಿತಿ ನೀಡಿದ್ದಾರೆ. ಜತೆಗೆ 1,21,143 ಮತದರಾರರು ಕೋರಿಕೆ/ಆಕ್ಷೇಪಣೆ ಸಲ್ಲಿಸಿದ್ದಾರೆ. ಎಲ್ಲ ಕೋರಿಕೆ ಆಕ್ಷೇಪಣೆಗಳನ್ನು ಸೆ.25ರ ಒಳಗೆ ಇತ್ಯರ್ಥ ಪಡಿಸಲಾಗುವುದು. ಅಲ್ಲದೆ, 3,28,847 ಹೊಸ ಮತದಾರರು ಪಟ್ಟಿಗೆ ಹೆಸರು ಸೇರಿಸಿಕೊಳ್ಳಲು ನೋಂದಾಯಿಸಿಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬಿಹಾರದಲ್ಲಿನ ಎಸ್ಐಆರ್ ಅಂಗವಾಗಿ ಈಗಾಗಲೇ ಶೇ.98.2 ಮತದಾರರ ದಾಖಲೆಗಳನ್ನು ಸಂಗ್ರಹಿಸಲಾಗಿದೆ ಎಂದು ಚುನಾವಣಾ ಆಯೋಗ ಭಾನುವಾರ ತಿಳಿಸಿದೆ. ಜೂ.24ರಿಂದ ಆ.24ರ 60 ದಿನಗಳ ಅವಧಿಯಲ್ಲಿ ಈ ದಾಖಲೆಗಳು ಸಲ್ಲಿಕೆ ಆಗಿವೆ. ಅಂದರೆ ದಿನಕ್ಕೆ ಶೇ.1.64ರಂತೆ ದಾಖಲೆ ಸಲ್ಲಿಕೆಯಾಗಿದೆ. ಉಳಿದವರಿಗೆ ಕರಡು ಮತದಾರರ ಪಟ್ಟಿಗೆ ತಿದ್ದುಪಡಿ ಸೂಚಿಸಲು ಇಲ್ಲವೇ ಆಕ್ಷೇಪಣೆ ಸಲ್ಲಿಸಲು ಇನ್ನು 8 ದಿನಗಳ ಕಾಲಾವಕಾಶ ಇದೆ ಎಂದು ಬಿಹಾರದ ಚುನಾವಣಾಧಿಕಾರಿ ತಿಳಿಸಿದ್ದಾರೆ.