ನ್ಯೂಸ್

ಹಿಂದು ಧರ್ಮಕ್ಕೆ ಮತಾಂತರವಾದ ಪಾಕ್ ಇನ್ಫ್ಲ್ಯುಯೆನ್ಸರ್! ಶ್ರೀಕೃಷ್ಣನೇ ಕಾರಣ ಎಂದ ಶಯಾನ್​ ಅಲಿ

ನವದೆಹಲಿ: ಪಾಕಿಸ್ತಾನದ ಪ್ರಖ್ಯಾತ ಸೋಶಿಯಲ್​ ಮೀಡಿಯಾ ಇನ್ಫ್ಲ್ಯುಯೆನ್ಸರ್​ ಓರ್ವ ಇಸ್ಲಾಂ ಧರ್ಮಕ್ಕೆ ಗುಡ್​ ಬೈ ಹೇಳಿ, ಹಿಂದು ಧರ್ಮಕ್ಕೆ ಮತಾಂತರವಾಗಿದ್ದು, ಎಲ್ಲದಕ್ಕೂ ಶ್ರೀಕೃಷ್ಣನೆ ಕಾರಣ ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಈ ವಿಷಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಕೈ ಹಿಡಿದಿದ್ದು ಶ್ರೀಕೃಷ್ಣ

ಹಿಂದು ಧರ್ಮಕ್ಕೆ ಮತಾಂತರವಾದ ಪಾಕಿಸ್ತಾನಿಯನ್ನು ಶಯಾನ್​ ಅಲಿ ಎಂದು ಗುರುತಿಸಲಾಗಿದೆ. ಮತಾಂತರ ಆಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ಸಂಕಷ್ಟದ ಸಮಯದಲ್ಲಿ ಅಂದರೆ, ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಕಿರುಕುಳಕ್ಕೆ ನಲುಗಿ ಖಿನ್ನತೆಗೆ ಜಾರಿದ್ದ ಸಂದರ್ಭದಲ್ಲಿ ತನ್ನ ಕೈ ಹಿಡಿದಿದ್ದು ಶ್ರೀಕೃಷ್ಣ ಎಂದು ಶಯಾನ್​ ನೆನಪಿಸಿಕೊಂಡಿದ್ದಾರೆ. ಅಲ್ಲದೆ, ಎಂದಿಗೂ ತನ್ನನ್ನು ಬಿಟ್ಟುಕೊಡದ ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ಇಸ್ಕಾನ್​) ಗೂ ಶಯಾನ್​ ಧನ್ಯವಾದ ತಿಳಿಸಿದ್ದಾರೆ.

ತನ್ನ ಮತಾಂತರವನ್ನು ಘರ್​ ವಾಪ್ಸಿ ಎಂದು ಕರೆದಿರುವ ಶಯಾನ್​, ಎರಡು ವರ್ಷಗಳ ಕಾಲ ತನ್ನ ಪೂರ್ವಜರ ಸಂಸ್ಕೃತಿ ಮತ್ತು ಜೀವನ ಶೈಲಿಯನ್ನು ಸೂಕ್ಷ್ಮವಾಗಿ ಗಮನಿಸಿದ ಬಳಿಕ ಮತಾಂತರ ಆಗಿದ್ದಾಗಿ ಹೇಳಿದ್ದಾರೆ.

ಕೃತಜ್ಞತೆ ಸಲ್ಲಿಸುವ ಸಮಯ

ಪಾಕಿಸ್ತಾನ ಸಂಸ್ಥೆಗಳ ಕಿರುಕುಳ ಕಾರಣದಿಂದಾಗಿ 2019ರಲ್ಲೇ ಪಾಕಿಸ್ತಾನ ತೊರೆಯಬೇಕಿತ್ತು. ಆ ಸಮಯದಲ್ಲಿ ನಾನು ಖಿನ್ನತೆಗೆ ಜಾರಿದ್ದೆ ಮತ್ತು ಎಲ್ಲವನ್ನು ತ್ಯಜಿಸಲು ಮುಂದಾಗಿದ್ದೆ. ಇಂತಹ ಸಂಕಷ್ಟದ ಸಮಯದಲ್ಲಿ ನನ್ನ ಕೈಹಿಡಿದಿದ್ದು ಶ್ರೀಕೃಷ್ಣ ಪರಮಾತ್ಮ. ಇದೀಗ ಕೃತಜ್ಞತೆ ಸಲ್ಲಿಸುವ ಸಮಯವಾಗಿದೆ ಮತ್ತು ನನ್ನ ಪೂರ್ವಿಕರನ್ನು ಹೆಮ್ಮೆ ಪಡುವಂತೆ ಮಾಡಬೇಕಿದೆ ಎಂದು ಶಯಾನ್​ ಹೇಳಿದ್ದಾರೆ.

ಭಗವದ್ಗೀತೆ ಕಲಿಸಿದೆ

ಇತರೆ ಧರ್ಮದವರನ್ನು ದ್ವೇಷಿಸುವ ಯಾವುದೇ ದ್ವೇಷದ ಭಾಗವಾಗಿರಲು ನಾನು ಬಯಸುವುದಿಲ್ಲ. ಇತರರ ನಂಬಿಕೆಗಳನ್ನು ಗೌರವಿಸುತ್ತೇನೆ ಮತ್ತು ಅವನು ಅಥವಾ ಅವಳು ಯಾವ ಧರ್ಮಕ್ಕೆ ಸೇರಿದ್ದಾಳೆ ಎಂಬುದು ಇಲ್ಲಿ ವಿಷಯವೇ ಅಲ್ಲ, ಎಲ್ಲರನ್ನು ಗೌರವಿಸುವ ಎಂದು ಭಗವದ್ಗೀತೆ ಕಲಿಸಿದೆ. ತನ್ನ ಮೂಲ ಬೇರಿನ ಕಡೆ ಮರಳುತ್ತಿರುವುದಕ್ಕೆ ಹಮ್ಮೆ ಇದೆ. ನನ್ನ ಪೂರ್ವಿಕರು ಕೂಡ ಇದೇ ಭಾವನೆಯನ್ನು ಹೊಂದಿರುತ್ತಾರೆ ಎಂಬ ಭಾವನೆ ಇದೆ ಎಂದು ಶಯಾನ್​ ತಿಳಿಸಿದ್ದಾರೆ.

ರಾ ಏಜೆಂಟ್​

ಕಾಶ್ಮೀರ್​ ಹಾನ್​ ಮೇನ್​ ಹೆಸರಿನ ಐಎಸ್​ಐನ ಪಿಆರ್​ ಮ್ಯೂಸಿಕ್​ ವಿಡಿಯೋದಲ್ಲಿ ಕೆಲಸ ಮಾಡಲು ನಿರಾಕರಿಸಿದ್ದಕ್ಕೆ ಶಯಾನ್​ ಅಲಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಹುಡುಕಾಡುತ್ತಿದೆ. ಆತನನ್ನು ಜ್ಯೂವಿಶ್​ ಏಜೆಂಟ್​ ಮತ್ತು ಭಾರತೀಯ ಗುಪ್ತಚರ ಸಂಸ್ಥೆ ರಾ (RAW) ಸದಸ್ಯ ಎಂದು ಐಎಸ್​ಐ ಆರೋಪಿಸಿದೆ. ಹೀಗಾಗಿ ಶಯಾನ್​ ಅಲಿ ಪಾಕಿಸ್ತಾನವನ್ನು ಬಿಡಬೇಕಿದೆ. (ಏಜೆನ್ಸೀಸ್​)