ನ್ಯೂಸ್

ಪಾಕಿಸ್ತಾನದಲ್ಲಿ ಕರೊನಾ ಭೀಕರತೆ ಕೈಮೀರುವ ಸಾಧ್ಯತೆ ಹೆಚ್ಚಾಗಿದೆ; ಸರ್ಕಾರಕ್ಕೆ ಎಚ್ಚರಿಕೆ ನೀಡಿದ ವೈದ್ಯರು...

ಕರಾಚಿ: ಜಗತ್ತಿನ ಎರಡನೇ ಅತಿದೊಡ್ಡ ಮುಸ್ಲಿಂ ರಾಷ್ಟ್ರವಾದ ಪಾಕಿಸ್ತಾನದಲ್ಲಿ ಕರೊನಾ ಸೋಂಕಿತರ ಸಂಖ್ಯೆ 10,000ದ ಗಡಿ ದಾಟಿದೆ. ಸಾವಿನ ಸಂಖ್ಯೆಯೂ 200 ಮೀರಿದೆ.

ಅಷ್ಟಾದರೂ ದೇಶದಲ್ಲಿ ಕಟ್ಟುನಿಟ್ಟಿನ ಕ್ರಮಗಳಿಲ್ಲ. ಆಸ್ಪತ್ರೆಗಳಲ್ಲಿ ಬೆಡ್​ಗಳಿಲ್ಲ. ಚಿಕಿತ್ಸಾವಿಧಾನವೂ ಸರಿಯಾಗಿಲ್ಲ. ವೈದ್ಯಕೀಯ ಸಿಬ್ಬಂದಿಗೆ ಪಿಪಿಇ ಕಿಟ್​ಗಳ ಪೂರೈಕೆಯೂ ಸಾಕಷ್ಟು ಆಗುತ್ತಿಲ್ಲ. ಎದುರು ಮಾತನಾಡುವ ವೈದ್ಯರನ್ನೇ ಬಂಧಿಸುತ್ತಿದ್ದಾರೆ ಅಲ್ಲಿ.

ಕರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರೂ ಸಹ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದಾರೆ. ಈಗ ರಂಜಾನ್​ ಮಾಸ ನಡೆಯುತ್ತಿದ್ದುದರಿಂದ ಪಾಕಿಸ್ತಾನದಲ್ಲಿ ಮುಸ್ಲಿಮರು ಮಸೀದಿಗಳಲ್ಲಿ ಒಟ್ಟಾಗಿ ಸೇರಿ ಪ್ರಾರ್ಥನೆ ಮಾಡುತ್ತಿದ್ದಾರೆ. ಸರ್ಕಾರವೂ ಕೂಡ ಸಾಮೂಹಿಕ ಪಾರ್ಥನೆಗೆ ಅವಕಾಶ ನೀಡಿದೆ.

ಆದರೆ ಅಲ್ಲಿನ ವೈದ್ಯರು ಇದನ್ನು ಒಪ್ಪುತ್ತಿಲ್ಲ. ದಯವಿಟ್ಟು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ನೀಡಿರುವ ಅನುಮತಿಯನ್ನು ವಾಪಸ್ ಪಡೆಯಿರಿ. ಇಲ್ಲದಿದ್ದರೆ ಕರೊನಾ ಪ್ರಸರಣ ಪ್ರಮಾಣ ಮತ್ತಷ್ಟು ಹೆಚ್ಚಾಗುತ್ತದೆ, ಭೀಕರತೆ ಸೃಷ್ಟಿಯಾಗುತ್ತದೆ. ಪರಿಸ್ಥಿತಿ ನಮ್ಮ ಕೈ ಮೀರಿ ಹೋಗುತ್ತದೆ ಎಂದು ಸರ್ಕಾರಗಳಿಗೆ ಎಚ್ಚರಿಕೆ ನೀಡಿದ್ದಾರೆ.

ರಂಜಾನ್​ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರ ಸಾಮೂಹಿಕ ಪ್ರಾರ್ಥನೆ ಮೇಲೆ ವಿಧಿಸಿದ್ದ ನಿರ್ಬಂಧಗಳನ್ನು ಶನಿವಾರವೇ ಹಿಂಪಡೆದಿದೆ. ಗುಂಪಾಗಿ ಸೇರಿ ನಮಾಜ್​ ಮಾಡುವುದಕ್ಕೆ ನಿಯಂತ್ರಣ ಹೇರಿದ್ದ ದಿನದಿಂದಲೂ ಪೊಲೀಸರು ಮತ್ತು ಜನಸಾಮಾನ್ಯರ ನಡುವೆ ಒಂದಲ್ಲ ಒಂದು ಕಡೆ ಗಲಾಟೆ ನಡೆಯುತ್ತಿತ್ತು. ಅದರಲ್ಲೂ ಈಗ ರಂಜಾನ್​​ ಆಗಿದ್ದರಿಂದ ಎಷ್ಟೇ ಕಂಟ್ರೋಲ್ ಮಾಡಿದರೂ ಜನರು ಮಸೀದಿಗಳಿಗೆ ಹೋಗುವುದನ್ನು ತಪ್ಪಿಸಲು ಆಗುತ್ತಿರಲಿಲ್ಲ. ದುರಂತವೆಂದರೆ ತಿಳಿವಳಿಕೆ ಹೇಳಬೇಕಾದ ಪ್ರಮುಖ ಧರ್ಮಗುರುಗಳೇ ನಿರ್ಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ಸರ್ಕಾರ ನಿರ್ಬಂಧ ಆದೇಶವನ್ನು ಹಿಂಪಡೆದಿತ್ತು.

ಇದರಿಂದಾಗಿ ಪಾಕಿಸ್ತಾನಿ ವೈದ್ಯರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಇದೊಂದು ದುರಂತ. ಹೀಗಾದರೆ ಯಾರನ್ನೂ ಕಾಪಾಡಲು ಸಾಧ್ಯವಿಲ್ಲ ಎಂದಿದ್ದಾರೆ. (ಏಜೆನ್ಸೀಸ್​)