ನ್ಯೂಸ್

ಗ್ರೀಕ್​ ಪ್ರಜೆಯೊಬ್ಬನ ಮೊಬೈಲ್​ ಕಳ್ಳತನ: 30 ನಿಮಿಷಗಳಲ್ಲಿ ಪತ್ತೆ ಮಾಡಿದ ಮುಂಬೈ ಪೊಲೀಸರು!| Greek Tourist

Greek Tourist: ಗ್ರೀಕ್​ ಪ್ರಜೆಯೊಬ್ಬ ವ್ಯಾಪಾರ ಉದ್ದೇಶದಿಂದ ಮುಂಬೈಗೆ ಆಗಮಿಸಿದ್ದು, ಈ ವೇಳೆ ತನ್ನ ದುಬಾರಿ ಐಪೋನ್​ನನ್ನು ಕಳೆದುಕೊಂಡಿದ್ದಾನೆ. ಈ ಬಗ್ಗೆ ಮುಂಬೈನ ಅಜಾದ್​ ಪೊಲೀಸರಲ್ಲಿ ಸಹಾಯ ಕೇಳಿದ್ದು, ಘಟನೆ ನಡೆದ ಕೇವಲ 30 ನಿಮಿಷಗಳಲ್ಲಿ ಪೊಲೀಸರು ಮೊಬೈಲ್​ನ್ನು ಹುಡುಕಿಕೊಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಮುಂಬೈ ವ್ಯಾಪಾರ ಪ್ರವಾಸದ ಸಮಯದಲ್ಲಿ ನಡೆದ ಘಟನೆ

ನಿನ್ನೆ (ಸೆಪ್ಟೆಂಬರ್​ 9, 2025) ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಗ್ರೀಕ್​ ಪ್ರಜೆಯೊಬ್ಬ ಮೊದಲ ಬಾರಿಗೆ ವ್ಯಾಪಾರಕ್ಕೆಂದು ಮುಂಬೈಗೆ ಆಗಮಿಸಿದ್ದು, ಈ ವೇಳೆ ತಾವು ಉಳಿದುಕೊಂಡಿದ್ದ ಕೊಲಾಬಾದಲ್ಲಿರುವ ಹೊಟೇಲ್​ನಿಂದ ಊಬರ್​ ಬುಕ್​ ಮಾಡಿಕೊಂಡು ಕೆಲವೆಡೆ ಓಡಾಟ ನಡೆಸಿದ್ದರು. ಇನ್ನು ಟ್ಯಾಕ್ಸಿಯಿಂದ ಇಳಿದ ನಂತರ ಅವರ ಮೊಬೈಲ್​ಫೋನನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ.

ಪೊಲೀಸರ ಸಹಾಯ ಕೇಳಿದ ಗ್ರೀಕ್​ ಪ್ರವಾಸಿಗ

ಪ್ರವಾಸಿಗ ಐಫೋನ್​​ ಕಳೆದುಕೊಂಡಿದ್ದು, ಈ ಬಗ್ಗೆ ಮುಂಬೈನ ಅಜಾದ್​ ಮೈದಾನದಲ್ಲಿರುವ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ತಕ್ಷಣವೇ ಊಬರ್​ ನೋಡಲ್​ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಕ್ಯಾಬ್​ ಚಾಲಕನನ್ನು ಪತ್ತೆ ಹಚ್ಚಿದ್ದಾರೆ. ನಂತರ ಆತನನ್ನು ವಿಚಾರಿಸಿದಾಗ ಐಫೋನ್​ ಅವನ ಬಳಿ ಇರುವುದನ್ನು ದೃಢೀಕರಿಸಿದ್ದು, ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀಕಾಂತ್ ಅಡಾಟೆ ಅವರ ಸಮ್ಮುಖದಲ್ಲಿ ಪ್ರವಾಸಿಗನಿಗೆ ಐಫೋನ್​ ಹಸ್ತಾಂತರಿಸಲಾಯಿತು.

ಸೈಬರ್ ತಂಡದ ತ್ವರಿತ ಕ್ರಮ

ಈ ವಿಚಾರವಾಗಿ ಸೈಬರ್​ ತಂಡವು ತ್ವರಿತ ಕ್ರಮವನ್ನು ತೆಗೆದುಕೊಂಡಿದ್ದು, 30 ನಿಮಿಷಗಳೊಳಗಾಗಿ ಕಳೆದು ಹೋಗಿರುವ ಮೊಬೈಲ್​ನ್ನು ಪತ್ತೆ ಹಚ್ಚಿ ಗ್ರೀಕ್​ ಪ್ರವಾಸಿಗನಿಗೆ ಹಿಂತಿರುಗಿಸುವಂತಹ ಕಾರ್ಯವನ್ನು ಮಾಡಿದ್ದಾರೆ. ಇದು ಪೊಲೀಸರ ನಿಷ್ಠೆ ಹಾಗೂ ಅವರ ಕಾರ್ಯದ ಬಗ್ಗೆ ಮಾಹಿತಿ ನೀಡುತ್ತದೆ. (ಏಜೆನ್ಸೀಸ್​)