ನ್ಯೂಸ್

ಪಾಕಿಸ್ತಾನ, ರಾಹುಲ್ ಗಾಂಧಿ, ಕಾಂಗ್ರೆಸ್ ಒಂದೇ ಕಡೆ: ಏಷ್ಯಾ ಕಪ್ ಗೆಲುವಿನ ನಂತರ ವಿಪಕ್ಷದ ಮೌನಕ್ಕೆ BJP ವಾಗ್ದಾಳಿ

BJP: ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಅದ್ಭುತ ಜಯ ಸಾಧಿಸಿದ ನಂತರ ಕಾಂಗ್ರೆಸ್​ ಮೌನವಾಗಿದ್ದು, ಪಾಕಿಸ್ತಾನ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಒಂದೇ ಭಾಗದಲ್ಲಿವೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಸೋಮವಾರ (ಸೆಪ್ಟೆಂಬರ್,29) ತೀವ್ರವಾಗಿ ಟೀಕಿಸಿದ್ದಾರೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಮಾಳವೀಯ, ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಅದ್ಭುತ ಗೆಲುವು ರಾಹುಲ್ ಗಾಂಧಿ ಮತ್ತು ಇಡೀ ಕಾಂಗ್ರೆಸ್ ಅನ್ನು ಕೋಮಾ ಸ್ಥಿತಿಯಲ್ಲಿಟ್ಟಂತೆ ಕಾಣುತ್ತಿದೆ. ಅಲ್ಲದೆ, ಆಪರೇಷನ್ ಸಿಂಧೂರದ ನಂತರ, ಭಾರತೀಯ ಸೇನೆಯ ಅದ್ಭುತ ದಾಳಿಗಳಿಗೆ ಅಭಿನಂದನೆ ಸಲ್ಲಿಸಲು ಕಾಂಗ್ರೆಸ್​ಗೆ ಸಾಧ್ಯವಾಗದಿದ್ದಾಗ, ಕೈ ಈಗ ಭಾರತೀಯ ಕ್ರಿಕೆಟ್ ತಂಡದ ಯಶಸ್ಸನ್ನು ಆಚರಿಸಲು ದೇಶದೊಂದಿಗೆ ಸೇರುವ ಮೊದಲು ಮೊಹ್ಸಿನ್ ನಖ್ವಿ ಮತ್ತು ಪಾಕಿಸ್ತಾನದಲ್ಲಿರುವ ಇತರ ನಿರ್ವಾಹಕರಿಂದ ಅನುಮತಿಗಾಗಿ ಕಾಯುತ್ತಿರುವಂತೆ ತೋರುತ್ತಿದೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ಮುಂದುವರೆದು ಮಾತನಾಡಿದ ಮಾಳವೀಯ, ಇದನ್ನು ಬದಿಗಿಡಿ ಸಂಪೂರ್ಣ ಟೂರ್ನಮೆಂಟ್‌ನಲ್ಲಿ ಪಾಕಿಸ್ತಾನವನ್ನು ಮೂರು ಬಾರಿ ಸೋಲಿಸಿ ಏಷ್ಯಾಕಪ್ ಗೆದ್ದ ನಮ್ಮ ರಾಷ್ಟ್ರೀಯ ತಂಡವನ್ನು ಅಭಿನಂದಿಸುವ ಕಾಂಗ್ರೆಸ್‌ನಿಂದ ಒಂದೇ ಒಂದು ಸೋಷಿಯಲ್ ಮೀಡಿಯಾದಲ್ಲಿ ಒಂದು ​​ಪೋಸ್ಟ್ ಕೂಡ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.

ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿಯಿಂದ ಏಷ್ಯಾ ಕಪ್ ಟ್ರೋಫಿಯನ್ನು ಸ್ವೀಕರಿಸಲು ಭಾರತ ನಿರಾಕರಿಸಿದ್ದನ್ನು ಉಲ್ಲೇಖಿಸಿದ ಮಾಳವಿಯಾ, ನಖ್ವಿ ಟ್ರೋಫಿಯನ್ನು ಪ್ರದಾನ ಮಾಡಲು ಒತ್ತಾಯಿಸಿದ್ದರು. ಅಲ್ಲದೆ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರು ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರು ಹಾಗೂ ಪಾಕಿಸ್ತಾನದ ಆಂತರಿಕ ಸಚಿವರೂ ಆಗಿರುವ ಮೊಹ್ಸಿನ್ ನಖ್ವಿ ಏಷ್ಯಾ ಕಪ್ ಮತ್ತು ಪದಕಗಳನ್ನು ಪ್ರದಾನ ಮಾಡಲು ಒತ್ತಾಯಿಸಿದ್ದರಿಂದ ಭಾರತವು ಅವುಗಳನ್ನು ಸ್ವೀಕರಿಸಲು ನಿರಾಕರಿಸಿತು ಎಂದು ಮಾಳವೀಯ ಹೇಳಿದ್ದಾರೆ.

ಏಷ್ಯಾಕಪ್ ಮುಡಿಗೇರಿಸಿಕೊಂಡ ಭಾರತ

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಮೊದಲು ಟಾಸ್​ ಸೋತು ಬ್ಯಾಟಿಂಗ್​ ಮಾಡಿದ ಪಾಕ್​ ತಂಡವು ಆರಂಭಿಕರಾದ ಸಾಹಿಬ್‌ಜಾದಾ ಫರ್ಹಾನ್ ಮತ್ತು ಫಖರ್ ಜಮಾನ್ ಕ್ರಮವಾಗಿ 57 ಮತ್ತು 46 ರನ್‌ಗಳನ್ನು ಗಳಿಸಿದರು. ಅದರೆ, ಭಾರತದ ಅದ್ಭುತ ಬೌಲಿಂಗ್‌ನಿಂದ ಪಾಕಿಸ್ತಾನವು ಮೊದಲ ಇನ್ನಿಂಗ್ಸ್‌ನಲ್ಲಿ 146 ರನ್‌ಗಳಿಗೆ ಅಲೌಟ್​ ಆಯಿತು.

ಭಾರತದ ಪರ ಕುಲದೀಪ್ ಯಾದವ್ 4 ವಿಕೆಟ್ ಪಡೆದು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರೆ, ಜಸ್ಪ್ರೀತ್ ಬುಮ್ರಾ , ವರುಣ್ ಚಕ್ರವರ್ತಿ ಮತ್ತು ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದರು.

ಗುರಿ ಬೆನ್ನಟ್ಟಿದ ಭಾರತ ತನ್ನ ಇನ್ನಿಂಗ್ಸ್ ಅನ್ನು ಅಭಿಷೇಕ್ ಶರ್ಮಾ ಮತ್ತು ಶುಭ್ಮನ್ ಗಿಲ್ ಕ್ರಮವಾಗಿ 5 ಮತ್ತು 12 ರನ್ ಗಳಿಸಿ ವಿಕೆಟ್​ ಒಪ್ಪಿಸಿದರು. ನಂತರ ಬಂದ ತಿಲಕ್ ವರ್ಮಾ ಅವರ ಅಜೇಯ 69 ರನ್‌ಗಳ ನೆರವಿನಿಂದ ಭಾರತವು ಗುರಿಯನ್ನು ಬೆನ್ನಟ್ಟಿ ಐದು ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. (ಏಜೆನ್ಸೀಸ್)