ಭಾರತ ಸೇರಿ ಇಡೀ ಜಗತ್ತು ಕರೊನಾ ಸೋಂಕಿನ ಸಂಕಷ್ಟದಿಂದ ನಲುಗುತ್ತಿದೆ. ಪಾಕಿಸ್ತಾನವೂ ಇದರಿಂದ ಹೊರತಾಗಿಲ್ಲ. ಆ ದೇಶದಲ್ಲೂ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ, ದೇಶದೊಳಗಿನ ಸಮಸ್ಯೆಗಳನ್ನು ಸದಾ ನಿರ್ಲಕ್ಷಿಸಿ, ಗಡಿಯಲ್ಲಿ ಉದ್ವಿಗ್ನತೆ ಸೃಷ್ಟಿಸುವ ಸಣ್ಣತನದಲ್ಲೇ ನಿರತವಾಗುವ ಪಾಕಿಸ್ತಾನ ಕಾಶ್ಮೀರದಲ್ಲಿ ಮತ್ತೆ ಶಾಂತಿ ಕದಡಲು ಯತ್ನಿಸುತ್ತಿದೆ. ಹಿಮ ಬೀಳುತ್ತಿರುವ ಪ್ರಸಂಗವನ್ನೇ ದುರುಪಯೋಗ ಪಡಿಸಿಕೊಳ್ಳಲು ಯತ್ನಿಸಿದೆ. ಈ ಮೂಲಕ ತನ್ನ ಹಳೆಯ ಚಾಳಿಯನ್ನು ಮುಂದುವರಿಸಿದೆ. ಗಡಿರಕ್ಷಣೆಗೆ ಸದಾ ಸನ್ನದ್ಧವಾಗಿರುವ ಭಾರತೀಯ ಸೇನೆ ಈ ಬಾರಿ ಮತ್ತಷ್ಟು ಕ್ಲಿಷ್ಟಕರವಾದ ಕಾರ್ಯಾಚರಣೆಯಲ್ಲಿ ಉಗ್ರರನ್ನು ಹೊಡೆದುರಳಿಸುವ ಮೂಲಕ ಶೌರ್ಯಸಾಹಸ ಪ್ರದರ್ಶಿಸಿದೆ. ಪ್ರತಿಕೂಲ ಪರಿಸ್ಥಿತಿಯಲ್ಲೂ ನಡೆಸಿದ ಈ ಕಾರ್ಯಾಚರಣೆ ಭಾರಿ ಸವಾಲಿನಿಂದ ಕೂಡಿತ್ತು.
ಜಮ್ಮು-ಕಾಶ್ಮೀರದ ಕರಣ್ ಸೆಕ್ಟರ್ನಲ್ಲಿ ಭಾನುವಾರ ಐವರು ಉಗ್ರರನ್ನು ಭದ್ರತಾ ಪಡೆ ಕಮಾಂಡೊಗಳು ಎನ್ಕೌಂಟರ್ ಮಾಡಿ ಕೊಂದಿದ್ದಾರೆ. ಈ ಕಾರ್ಯಾಚರಣೆ ನಡೆದಿದ್ದು 10 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ! ನೋವಿನ ಸಂಗತಿ ಎಂದರೆ, ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲ ಐವರು ಯೋಧರೂ ವೀರಮರಣ ಹೊಂದಿದ್ದಾರೆ. ಏಪ್ರಿಲ್ 1ರಂದು ಗಡಿ ನಿಯಂತ್ರಣ ರೇಖೆಯಿಂದ ಉಗ್ರರು ಭಾರತದೊಳಕ್ಕೆ ನುಸುಳಿದ್ದರು. ಹಿಮಪಾತದಿಂದ ಗಡಿಬೇಲಿ ಮುಚ್ಚಿಹೋಗಿದ್ದರ ಪರಿಣಾಮ ಅದರ ದುರ್ಲಾಭ ಪಡೆದು, ಒಳಪ್ರವೇಶಿಸಿದ್ದರು. ಉಗ್ರರ ಪತ್ತೆಗಾಗಿ ಸೈನಿಕರನ್ನು ನಿಯೋಜಿಸಲಾಯಿತು. ಅಲ್ಲದೆ, ಉಗ್ರರ ಜಾಡು ಪತ್ತೆಯಾದ ಮೇಲೆ ಯೋಧರನ್ನು ಹೆಲಿಕಾಪ್ಟರ್ ಮೂಲಕ ಆ ಜಾಗಕ್ಕೆ ಇಳಿಸಲಾಯಿತು. 10 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ಹಿಮಬಂಡೆ ಮುರಿದುಬಿದ್ದು, ಯೋಧರು ಕುಸಿದುಬಿದ್ದರು. ಅದೇ ಕಣಿವೆಯಲ್ಲಿ ಅಡಗಿಕೊಂಡ ಉಗ್ರರೊಡನೆ ಪರಸ್ಪರ ಘರ್ಷಣೆ ನಡೆದು, ಉಗ್ರರು ಹತರಾದರು. ಮೂವರು ಯೋಧರು ಸ್ಥಳದಲ್ಲೇ ಹುತಾತ್ಮರಾದರೆ, ಇಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದರು. ಹವಾಮಾನ ವೈಪರೀತ್ಯ ಮತ್ತು ಕಡಿದಾದ ಪ್ರದೇಶದಲ್ಲೂ ಶತ್ರುಗಳೊಂದಿಗೆ ಕೆಚ್ಚೆದೆಯಿಂದ ಹೋರಾಡಿದ ಶೌರ್ಯಕ್ಕೆ ಎಷ್ಟು ಪ್ರಶಂಸೆ ಮಾಡಿದರೂ ಕಡಿಮೆಯೇ. ಆದರೆ, ಇಲ್ಲಿ ಮತ್ತೆ ಬಯಲಾಗಿರುವುದು ಪಾಕಿಸ್ತಾನದ ಚಿತ್ತಸ್ಥಿತಿ. ಸದಾ ಕಾಲುಕೆದರಿ ಜಗಳಕ್ಕೆ ನಿಲ್ಲುವ, ಗಡಿಯಲ್ಲಿ ಉಪಟಳ ಸೃಷ್ಟಿಸುವ ಚಾಳಿ ಮುಂಚೆಯಿಂದಲೂ ಇದ್ದದ್ದೇ. 1999ರಲ್ಲಿ ಒಂದೆಡೆ ಭಾರತದೊಂದಿಗೆ ಸ್ನೇಹಹಸ್ತ ಚಾಚುವ
ನಾಟಕವಾಡಿದ ಪಾಕ್ ಮತ್ತೊಂದೆಡೆ, ಹಿಮಪಾತ ಶುರುವಾಗುತ್ತಿದ್ದಂತೆ ಕಾರ್ಗಿಲ್ ಪ್ರದೇಶದಲ್ಲಿ ತನ್ನ ಸೈನಿಕರನ್ನು ನುಸುಳಿಸಿತು. ಆರಂಭದಲ್ಲಿ ಇದನ್ನು ಪತ್ತೆ ಮಾಡಿದ
ಕೆಲ ಭಾರತೀಯ ಸೈನಿಕರನ್ನು ಸೆರೆಹಿಡಿದು, ಕೊಂದು ಪೈಶಾಚಿಕವಾಗಿ ವರ್ತಿಸಿತು. ಅದುವೇ ಕಾರ್ಗಿಲ್ ಸಮರಕ್ಕೆ ಕಾರಣ ವಾಯಿತು. ಆಗಲೂ ಪಾಕಿಸ್ತಾನ ಭಾರಿ ಮುಖಭಂಗ ಅನುಭವಿಸಬೇಕಾಯಿತು. ಇತ್ತೀಚೆಗಂತೂ ಕಾಶ್ಮೀರದ ಸ್ಥಿತಿ ಬದಲಾಗಿದೆ. 370ನೇ ವಿಧಿ ಪ್ರಕಾರ ಇದ್ದ ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ ಅಲ್ಲಿ ಶಾಂತಿ ಮರುಕಳಿಸಿದೆ. ಜನರು ಅಭಿವೃದ್ಧಿಯ ಹೊಸಗನಸು ಕಾಣುತ್ತಿದ್ದಾರೆ. ಆದರೆ, ಪಾಕಿಸ್ತಾನಕ್ಕೆ ಇದನ್ನು ಸಹಿಸಲು ಆಗುತ್ತಿಲ್ಲ. ಶಾಂತಿ, ನೆಮ್ಮದಿ ಕದಡಲು ಅದು ಮಾಡುವ ಪ್ರಯತ್ನಗಳನ್ನು ವಿಫಲಗೊಳಿಸಲು ಭಾರತ ಸಮರ್ಥವಾಗಿದೆ ಎಂಬುದನ್ನು ಆ ದುರುಳ ರಾಷ್ಟ್ರ ಅರ್ಥ ಮಾಡಿಕೊಳ್ಳಬೇಕು.