ನ್ಯೂಸ್

ಪಾಕಿಗಳಿಗಿಂತ ಅನಕ್ಷರಸ್ಥರಿಲ್ಲ- ಪಾಕ್ ಸಚಿವೆಯ ಆಕ್ರೋಶ

ಇಸ್ಲಾಮಾಬಾದ್: ಜಗತ್ತಿನ ಯಾವುದೇ ದೇಶದ ಜನರನ್ನು ತೆಗೆದುಕೊಂಡರೂ ಅವರೆಲ್ಲರಿಗಿಂತಲೂ ಪಾಕಿಸ್ತಾನೀಯರೇ ಹೆಚ್ಚು ಅನಕ್ಷರಸ್ಥರು. ಹೀಗೆ ಹೇಳಿದ್ದು ಬೇರಾರೂ ಅಲ್ಲ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಆರೋಗ್ಯ ಸಚಿವೆ ಯಾಸ್ಮಿನ್ ರಷೀದ್. ಪಾಕ್ ಪ್ರಧಾನಿ ಇಮ್ರಾನ್ ಖಾನ್​ ಅವರ ಪಾಕಿಸ್ತಾನ್ ತೆಹ್ರೀಕ್​ ಏ ಇನ್ಸಾಫ್ ಪಕ್ಷವೇ ಆಡಳಿತದಲ್ಲಿದೆ. ಯಾಸ್ಮಿನ್ ಇದೇ ಪಕ್ಷ ಶಾಸಕಿ.

ಕೋವಿಡ್ 19 ಸೋಂಕು ತಡೆಯುವ ನಿಟ್ಟಿನಲ್ಲಿ ಪಾಕ್ ಸರ್ಕಾರದ ಹೊರಡಿಸಿದ್ದ ಮಾರ್ಗಸೂಚಿಯನ್ನು ಪಾಕಿಸ್ತಾನೀಯರು ಪಾಲಿಸದೇ ಇದ್ದುದರಿಂದ ಬೇಸತ್ತಿದ್ದ ಯಾಸ್ಮಿನ್​ ಜಿಯೋ ಟಿವಿಗೆ ನೀಡಿದ ಸಂದರ್ಶನದ ವೇಳೆ ಜನತೆಯ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಹನೆ ಕಳೆದುಕೊಂಡಿದ್ದ ಅವರಿಗೆ ಸಂದರ್ಭಕ್ಕೆ ಸೂಕ್ತ ಮಾತುಗಳನ್ನು ಆಡುವುದು ಸಾಧ್ಯವಾಗಲಿಲ್ಲ.

ಲಾಹೋರ್​ನಲ್ಲಿರುವ ಜನ ವಿಚಿತ್ರ ಪ್ರಾಣಿಗಳು. ಸಾಮಾಜಿಕ ಅಂತರದ ವಿಚಾರ ಬಿಡಿ, ಕರೊನಾ ವೈರಸ್​ ಬಗ್ಗೆ ತಿಳಿದುಕೊಳ್ಳುವ ತಾಳ್ಮೆಯೂ ಅವರಲ್ಲಿ ಇಲ್ಲ. ಈದ್ ಶಾಪಿಂಗ್ ವೇಳೆ ನಿರ್ಲಕ್ಷ್ಯ ವಹಿಸಿದ್ದರ ಪರಿಣಾಮ ಹೆಚ್ಚು ಜನರೀಗ ಸೋಂಕುಪೀಡಿತರಾಗುತ್ತಿದ್ದಾರೆ. ಇದಕ್ಕಾಗಿಯೇ ನಾನು ಹೇಳ್ತಿರೋದು ಪಾಕಿಗಳಷ್ಟು ಅನಕ್ಷರಸ್ಥರು ಬೇರಾವ ರಾಷ್ಟ್ರದಲ್ಲೂ ಇಲ್ಲ. ಇದು ದುರದೃಷ್ಟ ಎಂದು ಅವರು ಪ್ರತಿಕ್ರಿಯಿಸಿದ್ದರು.

ಪಾಕಿಸ್ತಾನದಲ್ಲಿ ಬುಧವಾರ ಬೆಳಗ್ಗೆ ತನಕ 1.54 ಲಕ್ಷ ಸೋಂಕಿತರು ಇದ್ದು, 2975 ಜನ ಸಾವನ್ನಪ್ಪಿದ್ದಾರೆ. ಪಂಜಾಬ್ ಪ್ರಾಂತ್ಯದಲ್ಲೇ ಗರಿಷ್ಠ ಕೇಸ್ 58239 ಇದೆ. ಇದೇ ವೇಳೆ, ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯದಲ್ಲಿ ಕೋವಿಡ್ ವಿರುದ್ಧ ಹೋರಾಡುವುದಕ್ಕೆ ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ಇಮ್ರಾನ್ ಖಾನ್ ಸರ್ಕಾರ ಒದಗಿಸುತ್ತಿಲ್ಲ ಎಂಬ ಆರೋಪವೂ ವ್ಯಾಪಕವಾಗಿದೆ. (ಏಜೆನ್ಸೀಸ್)