ನ್ಯೂಸ್

'ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಇಲ್ಲಾಂದ್ರೆ ಮಾತ್ನಾಡಾಕ್ಕಾಗೋಲ್ಲ'..ಮಹಿಳಾ ಸಂಸದೆ ಕೋರಿಕೆಗೆ ಸ್ಪೀಕರ್ ಥಂಡಾ!

ಇಸ್ಲಾಮಾಬಾದ್​: ಪಾಕಿಸ್ತಾನದ ಸಂಸದೆ ಮತ್ತು ಇಮ್ರಾನ್ ಖಾನ್ ಸಂಪುಟದ ಮಾಜಿ ಸಚಿವೆ ಜರ್ತಾಜ್ ಗುಲ್ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಚರ್ಚೆಯಲ್ಲಿ ಪಾಲ್ಗೊಂಡಿದ್ದಾಗ ಸ್ಪೀಕರ್ ಅಯಾಜ್ ಸಾದಿಕ್ ಅವರನ್ನು ಉದ್ದೇಶಿಸಿ 'ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿ' ಎಂದ್ದಿದ್ದಾರೆ. ಇದರ ವೀಡಿಯೋ ಪಾಕ್​ನಲ್ಲಷ್ಟೇ ಅಲ್ಲದೆ ಭಾರತದಲ್ಲೂ ವೈರಲ್ ಆಗಿದೆ.

ಗುಲ್ ಮಾತನಾಡುವಾಗ ಸ್ಪೀಕರ್ ಅಯಾಜ್ ತಮ್ಮ ಕನ್ನಡಕ ತೆಗೆದು ಮೇಜಿನ ಮೇಲಿಟ್ಟಿದ್ದರು. ಇದನ್ನು ಗಮನಿಸಿದ ಗುಲ್​ ಸ್ಪೀಕರ್ ಅವರೇ ನಿಮ್ಮ ಕನ್ನಡಕ ಏರಿಸಿಕೊಂಡು ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಆಗ ನಿಮಗೆ ನಾನು ಮಾತನಾಡುವುದು ಅರ್ಥವಾಗುತ್ತದೆ ಎಂದು ಕೇಳಿಕೊಂಡರು.

ಆಗ ಸ್ಪೀಕರ್ ಸಾದಿಕ್​ ಮುಗುಳ್ನಗೆ ಬೀರುತ್ತಾರೆ. ಆದರೆ ಆ ಮಾತನ್ನು ಅಲ್ಲಿಗೆ ಬಿಡದ ಗುಲ್, ನನ್ನ ಪಕ್ಷದ ನಾಯಕರು ನೇರವಾಗಿ ಕಣ್ಣುಗಳನ್ನು ನೋಡುತ್ತಾ ಮಾತನಾಡಲು ನನಗೆ ಕಲಿಸಿದ್ದಾರೆ. ನೀವು ಈ ರೀತಿಯ ಕಣ್ಣಿನ ಸಂಪರ್ಕವನ್ನು ತಪ್ಪಿಸಿದರೆ ನಾನು ಮಾತನಾಡುವುದನ್ನು ಮುಂದುವರಿಸಲು ಸಾಧ್ಯವಿಲ್ಲ. ನಿಮ್ಮ ಕನ್ನಡಕವನ್ನು ಧರಿಸಿ, ಸರ್ ಎಂದು ಗುಲ್ ಹೇಳಿದರು.

ನಾನೊಬ್ಬ ನಾಯಕಿ. ನಾನು 150,000 ಮತಗಳನ್ನು ಪಡೆದಿದ್ದೇನೆ. ನೀವು ನನ್ನ ಮಾತನ್ನು ಕೇಳದಿದ್ದರೆ, ನಾನು ನಿಮ್ಮನ್ನು ಉದ್ದೇಶಿಸಿ ಮಾತನಾಡಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.

ಕಡೆಗೆ ಮೌನ ಮುರಿದ ಸ್ಪೀಕರ್ ಸಾದಿಕ್, "ನಾನು ನಿಮ್ಮ ಮಾತನ್ನು ಕೇಳುತ್ತೇನೆ, ಆದರೆ ಮಹಿಳೆಯೊಂದಿಗೆ ಕಣ್ಣಿನ ಸಂಪರ್ಕವನ್ನು ಹೊಂದಲು ಸಾಧ್ಯವಿಲ್ಲ. ಏಕೆಂದರೆ ಅದು ಸೂಕ್ತವಲ್ಲ ಎಂದು ತೋರುತ್ತಿದೆ" ಎಂದು ಅವರು ಹೇಳಿದರು. ಇದನ್ನು ಕೇಳಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ನಗೆಗಡಲಲ್ಲಿ ಮುಳುಗಿ ತೇಲಿದರು.

ಇದರ ವೀಡಿಯೋ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ. ಅನೇಕ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರ, “ಅದ್ಭುತ ಹಾಸ್ಯ. ಕ್ಲಾಸ್ ಆಕ್ಟ್" ಎಂದಿದ್ದಾರೆ. ಮತ್ತೊಬ್ಬರು, "ಜನ ಆರ್ಥಿಕವಾಗಿ ಮತ್ತು ಅಸ್ಥಿರ ರಾಜಕೀಯ ಪರಿಸ್ಥಿತಿಯಲ್ಲಿ ಹೈರಾಣಾಗಿದ್ದರೆ, ಇವರಿಗೆ ಮೋಜು ಮಾಡಬೇಕೆನಿಸುತ್ತಿದೆ" ಎಂದು ಟೀಕಿಸಿದ್ದಾರೆ.