ಮೇರಿ ಕೋಮ್​ ಬಯೋಪಿಕ್​ ನೋಡಿ ಬಾಕ್ಸಿಂಗ್​ ಕಲಿತೆ 
ನ್ಯೂಸ್

ಮೇರಿ ಕೋಮ್​ ಬಯೋಪಿಕ್​ ನೋಡಿ ಬಾಕ್ಸಿಂಗ್​ ಕಲಿತೆ! ಕಂಚು ಗೆದ್ದ ಪಾಕ್​ ಯುವತಿಗೆ ಭಾರತದ ಬಾಕ್ಸರ್​ ಸ್ಪೂರ್ತಿಯಂತೆ

ಪ್ರಮುಖ ಮುಖ್ಯಾಂಶಗಳು

  • ಕಂಚು ಗೆದ್ದ ಪಾಕಿಸ್ತಾನದ ಬಾಕ್ಸರ್ ಆಡಿದ ಮಾತುಗಳು ವೈರಲ್​
  • ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಮೊದಲ ಪಾಕ್​ ಮಹಿಳೆ ಫಾತಿಮಾ ಝಹ್ರಾ
  • ಭಾರತದ ಮೇರಿ ಕೋಮ್ ಸ್ಫೂರ್ತಿ, ಅವರ ಬಯೋಪಿಕ್ ನೋಡಿಯೇ ಟ್ರೇನಿಂಗ್
ಗ್ಲ್ಯಾಸ್ಗೋ: ಪ್ರಸಕ್ತ ಸ್ಕಾಟ್​ಲ್ಯಾಂಡ್​ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತಕ್ಕೆ ಚಿನ್ನ, ಬೆಳ್ಳಿ, ಕಂಚಿನ ಪದಕಗಳ ಸುರಿಮಳೆಯೇ ಹರಿದುಬರುತ್ತಿವೆ. ವಿದೇಶಿ ನೆಲದಲ್ಲಿ ಭಾರತದ ತ್ರಿವರ್ಣ ಹಾರಿಸುತ್ತಿರುವ ಕ್ರೀಡಾಪಟುಗಳು ದೇಶದ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಇದೇ ವೇದಿಕೆಯಲ್ಲಿ ಕಂಚು ಗೆದ್ದ ಪಾಕಿಸ್ತಾನದ ಬಾಕ್ಸರ್ ಆಡಿದ ಮಾತುಗಳು ಇದೀಗ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ​
ಭಾರತದ ದಿಗ್ಗಜ ಬಾಕ್ಸರ್, 6 ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್‌ ಅವರ ಕಠಿಣ ಹಾದಿ ಭಾರತೀಯರಿಗಷ್ಟೇ ಅಲ್ಲ, ನಮ್ಮ ವೈರಿ ರಾಷ್ಟ್ರ ಪಾಕಿಸ್ತಾನದ ಹೆಣ್ಣುಮಗಳಿಗೂ ಸ್ಫೂರ್ತಿಯಾಗಿದೆ ಎಂಬ ಸಂಗತಿ ಭಾರತೀಯರ ಹುಬ್ಬೇರಿಸಿದೆ. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪಾಕ್​ನ 22 ವರ್ಷದ ಫಾತಿಮಾ ಝಹ್ರಾ, ಮಹಿಳೆಯರ 60 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಕಾಮನ್‌ವೆಲ್ತ್ ಗೇಮ್ಸ್​ನ ಇತಿಹಾಸದಲ್ಲೇ ಪದಕ ಗೆದ್ದ ಮೊದಲ ಪಾಕಿಸ್ತಾನಿ ಮಹಿಳಾ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮೇರಿ ಕೋಮ್ ಬಯೋಪಿಕ್ ನೋಡಿ ಟ್ರೇನಿಂಗ್

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಗೋಧಾದಲ್ಲಿ ಬೆಳೆದ ಫಾತಿಮಾಗೆ ತಮ್ಮದೇ ದೇಶದಲ್ಲಿ ಯಾರೊಬ್ಬರು ಮಹಿಳಾ ಬಾಕ್ಸಿಂಗ್ ರೋಲ್ ಮಾಡೆಲ್‌ಗಳು ಇರಲಿಲ್ಲವಂತೆ. ಹೀಗಾಗಿ, ಗಡಿಯಾಚೆ ನೋಡಿದಾಗ ಭಾರತದ ಮೇರಿ ಕೋಮ್ ಅವರ ಬಯೋಪಿಕ್ ಚಿತ್ರವನ್ನು​ 10 ವರ್ಷದ ಬಾಲಕಿಯಾಗಿದ್ದಾಗ ನೋಡಿದರಂತೆ. ಅವರ ಜೀವನ ಆಧಾರಿತ ಬಾಲಿವುಡ್ ಚಿತ್ರವನ್ನು ನೋಡಿದ ಬಳಿಕವೇ ಬಾಕ್ಸಿಂಗ್ ಟ್ರೇನಿಂಗ್ ಶುರು ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.
"ನನಗೆ ಭಾರತದ ಮೇರಿ ಕೋಮ್ ಅವರೇ ಸ್ಫೂರ್ತಿ. ನಾನು ಬಾಕ್ಸಿಂಗ್ ಆರಂಭಿಸಿದಾಗ ಅವರ ಬಯೋಪಿಕ್ ಸಿನಿಮಾ ನೋಡುತ್ತಲೇ ಅಭ್ಯಾಸ ಮಾಡುತ್ತಿದ್ದೆ. ಅವರ ಮೇಲೆ ನನಗೆ ಅಪಾರವಾದ ಗೌರವವಿದೆ. ಮುಂದಿನ ದಿನಗಳಲ್ಲಿ ಅವರಂತೆಯೇ ಸಾಧನೆ ಮಾಡುತ್ತೇನೆ. ಮತ್ತು ಅವರನ್ನು ಒಂದಲ್ಲ ಒಂದು ದಿನ ಭೇಟಿಯಾವ ಭರವಸೆ ನನಗಿದೆ" ಎಂದು ಫಾತಿಮಾ ಹರ್ಷ ವ್ಯಕ್ತಪಡಿಸಿದ್ದಾರೆ.

ವಿರೋಧಗಳ ನಡುವೆಯೂ ಗೆದ್ದ ಪರಿ

ಮೇರಿ ಕೋಮ್ ಅವರಂತೆಯೇ ಫಾತಿಮಾ ಕೂಡ ಕಡು ಬಡತನ ಹಾಗೂ ಕುಟುಂಬದ ವಿರೋಧವನ್ನು ಎದುರಿಸಬೇಕಾಯಿತು. ಆರಂಭದಲ್ಲಿ ತರಬೇತಿಗೆ ಕಳುಹಿಸಲು ಒಪ್ಪದ ಕುಟುಂಬದ ಜತೆ ಹೋರಾಡಿ, ಕಡೆಗೂ ಬಾಕ್ಸಿಂಗ್ ಅಖಾಡಕ್ಕಿಳಿದು ಇಂದು ದಾಖಲೆಯ ಗೆಲುವು ಕಂಡು ಇತಿಹಾಸ ಸೃಷ್ಟಿಸಿದ್ದಾರೆ. ಮೇರಿ ಕೋಮ್​ರನ್ನು ಪ್ರೇರಣೆಯಾಗಿ ಬಾಕ್ಸಿಂಗ್​ಗಿಳಿದ ಯುವತಿಗೆ ಅನೇಕರು ಮೆಚ್ಚುಗೆ ನೀಡಿದ್ದಾರೆ,(ಏಜೆನ್ಸೀಸ್).