ನ್ಯೂಸ್

15 ನಿಮಿಷದ ಸಂಘರ್ಷದಲ್ಲಿ ತಾಲಿಬಾನ್​ಗೆ ಪಾಕಿಸ್ತಾನ ಸೇನೆ ಶರಣಾಗತಿ! | Taliban

ಕಾಬೂಲ್: ಅಫ್ಘಾನಿಸ್ತಾನ(Taliban) ಮತ್ತು ಪಾಕಿಸ್ತಾನ ಸೇನಾಪಡೆಗಳ ನಡುವೆ ಸಂಘರ್ಷ ಇದೀಗ ಭೀಕರತೆ ಪಡೆದಿದ್ದು, ಕಂದಹಾರ್ ಗಡಿ ಪ್ರದೇಶವನ್ನು ತಲುಪಿದೆ. ಇಂದು(ಅ.15) ಮುಂಜಾನೆ 4.30ರ ಸುಮಾರಿಗೆ ನಡೆದ 15 ನಿಮಿಷದ ಘರ್ಷಣೆಯಲ್ಲಿ ಶಸ್ತ್ರಸಹಿತ ಪಾಕ್ ಸೇನೆ ತಾಲಿಬಾನ್​ಗೆ ಶರಣಾಗಿದೆ ಎಂದು ಬುಧವಾರ ವರದಿಯಾಗಿದೆ. ಅಲ್ಲದೇ, ಸಂಘರ್ಷದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸ್ಪಿನ್ ಬೋಲ್ಡಕ್‌ನಲ್ಲಿ (ಅಫ್ಘಾನ್​-ಪಾಕ್​ ಗಡಿ) ಅಫ್ಘಾನಿಸ್ತಾನ-ಪಾಕಿಸ್ತಾನ ಎರಡೂ ಸೇನೆಗಳು ಸಂಘರ್ಷಕ್ಕಿಳಿದಿವೆ. ಪಾಕಿಸ್ತಾನಿ ಸೈನಿಕರೊಂದಿಗಿನ ಘರ್ಷಣೆಯ 15 ನಿಮಿಷಗಳಲ್ಲಿ, ತಾಲಿಬಾನ್ ಪಾಕಿಸ್ತಾನಿಗಳನ್ನು ಶರಣಾಗುವಂತೆ ಒತ್ತಾಯಿಸಿತು ಮತ್ತು ಅವರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಯಿತು ಎಂದು ಸ್ಪಿನ್ ಬೋಲ್ಡಕ್ ಜಿಲ್ಲಾ ಮಾಹಿತಿ ಮುಖ್ಯಸ್ಥ ಅಲಿ ಮೊಹಮ್ಮದ್ ಹಕ್ಮಲ್ ಖಾಸಗಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಸಾವುನೋವುಗಳ ಸಂಖ್ಯೆಯ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಇಲ್ಲ, ಆದರೆ ವರದಿಗಳ ಪ್ರಕಾರ, ಪಾಕಿಸ್ತಾನದ ಫಿರಂಗಿ ದಾಳಿಯು ನಾಗರಿಕರ ಮನೆಗಳನ್ನು ನಾಶಪಡಿಸಿದೆ. ಇದರಿಂದಾಗಿ ಅನೇಕ ನಿವಾಸಿಗಳು ಪ್ರದೇಶದಿಂದ ಪಲಾಯನ ಮಾಡಿದ್ದಾರೆ.

ಇತ್ತೀಚಿನ ಪಾಕಿಸ್ತಾನ-ಅಫ್ಘಾನಿಸ್ತಾನ ಸಂಘರ್ಷ

ಪಾಕಿಸ್ತಾನದ ವೈಮಾನಿಕ ದಾಳಿಗೆ ಪ್ರತಿಯಾಗಿ ಅಫ್ಘಾನ್ ತಾಲಿಬಾನ್ ಅಕ್ಟೋಬರ್ 11-12ರ ರಾತ್ರಿಯಂದು ಪಾಕಿಸ್ತಾನಿ ಮಿಲಿಟರಿ ಪೋಸ್ಟ್‌ಗಳ ಮೇಲೆ ದಾಳಿ ಮಾಡಿತು. ತಾಲಿಬಾನ್ 58 ಪಾಕಿಸ್ತಾನಿ ಸೈನಿಕರನ್ನು ಕೊಂದು 25 ಪೋಸ್ಟ್‌ಗಳನ್ನು ವಶಪಡಿಸಿಕೊಂಡಿದೆ ಎಂದು ಹೇಳಿಕೊಂಡದೆ. ಪಾಕಿಸ್ತಾನವು ತನ್ನ 23 ಸೈನಿಕರನ್ನು ಕೊಂದು 200ಕ್ಕೂ ಅಧಿಕ ತಾಲಿಬಾನ್ ಹೋರಾಟಗಾರರನ್ನು ಕೊಂದಿದೆ ಎಂದು ವರದಿ ಮಾಡಿದೆ. (ಏಜೆನ್ಸೀಸ್​)