ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಹುಲ್ಲುಗಾವಲಿನಲ್ಲಿ ಭಯೋತ್ಪಾದಕ ದಾಳಿ ನಡೆದ ದಿನದಿಂದ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಂ ಮುನೀರ್ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲದಿರುವುದು ಅಚ್ಚರಿ ಮೂಡಿಸಿದೆ. ಪ್ರವಾಸಿಗರು ಸೇರಿ ಒಟ್ಟು 26 ಮಂದಿಯನ್ನು ಬಲಿ ಪಡೆದ ಏ.22ರ ಈ ಭಯೋತ್ಪಾದಕ ಕೃತ್ಯವೆಸಗಿದ್ದು ಪಾಕ್ ಉಗ್ರರು ಹಾಗೂ ಇದರ ಹಿಂದೆ ಪಾಕಿಸ್ತಾನದ ಸಂಚು ಅಡಗಿದೆ ಎಂಬ ಆರೋಪದ ಹಿನ್ನೆಲೆ ಸೇನಾ ಮುಖ್ಯಸ್ಥರ ನಾಪತ್ತೆ ಪ್ರಕರಣ ಕುತೂಹಲ ಕೆರಳಿಸಿದೆ. ವಿಧ್ವಂಸಕ ಕೃತ್ಯ ನಡೆದ ದಿನದಿಂದ ಭಾರತ ಸೇರಿದಂತೆ ಜಗತ್ತಿನ ವಿವಿಧ ರಾಷ್ಟ್ರಗಳವರು ಪಾಕಿಸ್ತಾನದಲ್ಲಿನ ಬೆಳವಣಿಗೆ ಮೇಲೂ ಗಮನ ಇರಿಸಿದ್ದಾರೆ. ಈ ನಡುವೆ ಪಾಕ್ ಸೇನಾ ಮುಖ್ಯಸ್ಥರು ಏ.22ರಿಂದ ಇದುವರೆಗೂ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ್ದು ಗಮನ ಸೆಳೆದಿದೆ. ಅಸಿಂ ಮುನೀರ್ ಪಾಕ್ನಲ್ಲಿ ಅಡಗಿರಬಹುದು ಇಲ್ಲವೇ ಪಾಕಿಸ್ತಾನದಿಂದ ಪಲಾಯನ ಮಾಡಿರಬಹುದು ಎನ್ನಲಾಗುತ್ತಿದೆ.