ನ್ಯೂಸ್

ಪಾಕಿಸ್ತಾನ ಅಣ್ವಸ್ತ್ರ ಯೋಜನೆ ಜಾಗತಿಕ ಭದ್ರತೆಗೆ ಮಾರಕ; ವಿಶ್ವಾಸಾರ್ಹವಲ್ಲದ ದೇಶದ ಬಳಿ ವಿನಾಶಕಾರಿ ಅಸ್ತ್ರ

Webdesk - Ravikanth

ಇಸ್ಲಾಮಾಬಾದ್: ಉಗ್ರರ ತವರೂರಾದ ಪಾಕಿಸ್ತಾನವು ರಾಜಕೀಯವಾಗಿಯೂ ಅಸ್ಥಿರವಾದ ದೇಶ. ಮೂಲಭೂತವಾದ ತೀವ್ರವಾಗಿ ಹಬ್ಬುತ್ತಿರುವ ಇಲ್ಲಿ ಅಣ್ವಸ್ತ್ರಗಳು ಸುರಕ್ಷಿತವಾಗಿರಲು ಸಾಧ್ಯವಿಲ್ಲ. ಇದು ಯಾವತ್ತಿದ್ದರೂ ಜಾಗತಿಕ ಬೆದರಿಕೆ ಆಗುತ್ತದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಪಾಕ್​ನಲ್ಲಿ ಅನೇಕ ವರ್ಷಗಳಿಂದ ರಾಜಕೀಯ ಅಪ್ರಬುದ್ಧತೆ ಇದೆ. ಇಲ್ಲಿ ಚುನಾಯಿತ ಸರ್ಕಾರಕ್ಕಿಂತ ಸಾಂಸ್ಥಿಕ ಬಲ ಹೆಚ್ಚು, ವಿನಾಶಕಾರಿಯಾದ ಅಣ್ವಸ್ತ್ರವನ್ನು ಮೊದಲು ಬಳಸುವುದಿಲ್ಲ ಎಂಬ ಸಂಯಮ ಕಾಣುವುದಿಲ್ಲ. ಹೀಗಾಗಿ ಪಾಕ್​ನ ವಿಶ್ವಾಸಾರ್ಹತೆ ಖಚಿತವಾಗಿ ತೃಪ್ತಿಕರ ಎನ್ನಲಾಗದು ಎಂದು ಜಿಯೋಪೊಲಿಟಿಕಲ್ ವರದಿ ತಿಳಿಸಿದೆ.

ತೆಹ್ರಿಕ್-ಎ-ಲಬೈಕ್ (ಟಿಎಲ್​ಪಿ) ಮತ್ತು ತೆಹ್ರಿಕ್-ಐ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಮೂಲಭೂತವಾದಿಗಳ ಗುಂಪು ರಾಜಕೀಯವಾಗಿಯೂ ಪ್ರಭಾವಿಯಾಗಿರುವ ಕಾರಣ ಇವುಗಳ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕಾದ ಇಕ್ಕಟ್ಟಿಗೆ ಸಿಲುಕಿದೆ. ಇವು ಆಡಳಿತಾತ್ಮಕ ನಿರ್ಧಾರದಲ್ಲೂ ಮೂಗುತೂರಿಸುವುದಿಲ್ಲ ಎಂಬುದಕ್ಕೆ ಯಾವುದೇ ಖಾತ್ರಿ ಇಲ್ಲ. ಹೀಗಾಗಿಯೇ ಪಾಕ್​ನಲ್ಲಿ ಅಣ್ವಸ್ತ್ರ ಶಸ್ತ್ರಾಗಾರ ಮೂಲಭೂತವಾದಿಗಳ ಕೈವಶವಾಗುವ ಅಪಾಯ ಹೆಚ್ಚಿನ ಮಟ್ಟದಲ್ಲಿ ಇದೆ. ಪಾಕ್​ನಲ್ಲಿ ಸೇನೆಯನ್ನು ಎದುರುಹಾಕಿಕೊಂಡ ರಾಜಕೀಯ ನಾಯಕ ಅಧಿಕಾರದಲ್ಲಿ ಮುಂದುವರಿಯಲಾರ ಎಂಬುದು ಈ ಹಿಂದಿನ ಅನೇಕ ನಿದರ್ಶನಗಳು ತೋರಿಸಿಕೊಟ್ಟಿವೆ. ಈಗ ಸೇನೆಯಲ್ಲಿ ತೀವ್ರವಾದಿಗಳ ಬಲ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಅಣ್ವಸ್ತ್ರಗಳು ಇಂಥವರ ಕೈವಶವಾದರೆ ಅದರ ಪರಿಣಾಮ ಘೋರವಾಗಿರುತ್ತದೆ ಎಂದು ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ಸೇನೆಯಲ್ಲೇ ಸಂಚುಕೋರರು: ಸೇನೆಯೊಳಗಿರುವ ‘ಸಂಚುಕೋರರ’ಗಳ ನೆರವಿನಿಂದಲೇ 2011ರಲ್ಲಿ ಕರಾಚಿ ಬಳಿಯ ದೇಶದ ಅತಿ ದೊಡ್ಡ ನೌಕಾನೆಲೆ ಮೆಹ್ರಾನ್ ಮೇಲೆ ಭಯೋತ್ಪಾದಕ ದಾಳಿ ನಡೆದಿತ್ತು ಎಂಬುದನ್ನು ವಿಶ್ವ ಸಮುದಾಯ ಮರೆಯಬಾರದು ಎಂದು ವರದಿ ಎಚ್ಚರಿಸಿದೆ. ಪಾಕ್​ನ ಅಣ್ವಸ್ತ್ರ ತಂತ್ರಜ್ಞಾನವು ವಿದೇಶಗಳಿಂದ ಕದ್ದವು ಮತ್ತು ಅಣ್ವಸ್ತ್ರ ಜೋಡಣೆಯ ಶಸ್ತ್ರಗಳನ್ನು ಅಂತಾರಾಷ್ಟ್ರೀಯ ಕಳ್ಳಜಾಲದಿಂದ ಪಡೆದುಕೊಂಡವು ಎಂಬ ಗಂಭೀರ ಆರೋಪ ಇದೆ. ಪಾಕಿಸ್ತಾನದ ಪರಮಾಣು ಕಾರ್ಯಕ್ರಮದ ಪಿತಾಮಹ ಎನ್ನಲಾಗುವ ಅಬ್ದುಲ್ ಖದೀರ್ ಖಾನ್ ಅಣ್ವಸ್ತ್ರ ತಂತ್ರಜ್ಞಾನವನ್ನು ಉತ್ತರ ಕೊರಿಯಾ ಮತ್ತು ಇರಾನ್​ಗೆ ಕಳ್ಳಮಾರ್ಗದಲ್ಲಿ ಪೂರೈಸಿದ ಆಪಾದನೆಗೆ ಗುರಿಯಾಗಿದ್ದರು. ಈ ರೀತಿ ಆತ್ಮವಂಚಕ ರಾಷ್ಟ್ರದಿಂದ ಅಣ್ವಸ್ತ್ರ ವಿಷಯದಲ್ಲಿ ಬದ್ಧತೆಯನ್ನು ಹೇಗೆ ನಿರೀಕ್ಷಿಸಲು ಸಾಧ್ಯ ಎಂದು ವರದಿ ಪ್ರಶ್ನಿಸಿದೆ.

ಪರಮಾಣು ಶಕ್ತಿ ವಿಸ್ತರಣೆ ಉತ್ಸಾಹ: ಪರಮಾಣು ಕಾರ್ಯಕ್ರಮವನ್ನು ಅನಿಯಂತ್ರಿತವಾಗಿ ವಿಸ್ತರಿಸುವ ಉತ್ಸಾಹ ಹೊಂದಿರುವ ಪಾಕಿಸ್ತಾನ ದಕ್ಷಿಣ ಏಷ್ಯಾ ಪ್ರಾದೇಶಿಕಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಅಪಾಯಕಾರಿ ಆಗಬಲ್ಲದು ಎಂದು ನಾರ್ವೆಯ ಭದ್ರತಾ ಸಂಸ್ಥೆಯೊಂದು ಇತ್ತೀಚೆಗೆ ನಡೆಸಿದ ‘ಬೆದರಿಕೆಗಳ ಮೌಲ್ಯಮಾಪನ ವರದಿ’ಯಲ್ಲಿ ಉಲ್ಲೇಖಿಸಿತ್ತು. ಹೀಗಾಗಿ ಪಾಕ್​ನ ನಾಗರಿಕ ಮತ್ತು ಮಿಲಿಟರಿ ಪರಮಾಣು ಕಾರ್ಯಕ್ರಮಗಳ ಮೇಲೆ ವಿಶ್ವ ಸಮುದಾಯ ಹೆಚ್ಚಿನ ನಿಗಾ ಇರಿಸಬೇಕು ಎಂದು ವರದಿ ಸಲಹೆ ನೀಡಿದೆ.

ಪಾಕ್ ಬಿಕ್ಕಟ್ಟು, 50 ಸಚಿವರು ನಾಪತ್ತೆ

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ಗೊತ್ತುವಳಿ ಮಂಡನೆ ಸಮಯ ಸಮೀಪಿಸುತ್ತಿರುವಂತೆಯೇ 50 ಸಚಿವರು ನಾಪತ್ತೆಯಾಗಿರುವುದು ದೇಶದ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಆಳುವ ಪಾಕಿಸ್ತಾನ್ ತೆಹ್ರಿಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಕನಿಷ್ಠ 50 ಮಂತ್ರಿಗಳು ನಾಪತ್ತೆಯಾಗಿದ್ದಾರೆ ಎಂದು ಎಕ್ಸ್​ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಖಾನ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಪ್ರತಿಪಕ್ಷಗಳು ಸಿದ್ಧತೆ ಆರಂಭಿಸಿದಾಗಿನಿಂದಲೂ 50ಕ್ಕೂ ಹೆಚ್ಚು ಕೇಂದ್ರ ಹಾಗೂ ಪ್ರಾಂತೀಯ ಸಚಿವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಹೇಳಲಾಗಿದೆ. ಆಳುವ ಹಾಗೂ ಮಿತ್ರ ಪಕ್ಷಗಳ ಸಚಿವರು ಮೌನವಹಿಸಿರುವುದು ಅವರೆಲ್ಲ ಸರಿಯಾದ ಸಮಯಕ್ಕೆ ಕಾಯುತ್ತಿರಬಹುದು ಎಂಬ ಊಹಾಪೋಹಕ್ಕೆ ಕಾರಣವಾಗಿದೆ. ಆದರೆ, ಕೇಂದ್ರ ಮಟ್ಟದಲ್ಲಿ ಖಾನ್​ಗೆ ಸಂಪೂರ್ಣ ಬೆಂಬಲವಿದೆ ಎಂದು ಹೇಳಲಾಗಿದೆ.