ನ್ಯೂಸ್

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕ್​ ಕುತಂತ್ರ

ಸದಾ ಒಂದಿಲ್ಲ ಒಂದು ವಿವಾದಗಳನ್ನು ಕೆದಕಲು, ಗಡಿಯಲ್ಲಿ ಭಾರತದ ವಿರುದ್ಧ ತಂಟೆ ತೆಗೆಯಲು ಹವಣಿಸುವ ಪಾಕಿಸ್ತಾನ ಈಗ ಹೊಸ ಕುತಂತ್ರ ನಡೆಸಿದೆ. ಪಾಕಿಸ್ತಾನ ಆಕ್ರಮಿತ ಪ್ರದೇಶದಲ್ಲಿ (ಪಿಒಕೆ) ಚುನಾವಣೆ ನಡೆಸುವ ಮೂಲಕ, ‘ಆಕ್ರಮಿತ’ ಪ್ರದೇಶಗಳನ್ನು ಅಧಿಕೃತಗೊಳಿಸಲು ಯತ್ನಿಸುತ್ತಿದೆ. ಪಿಒಕೆಯಲ್ಲಿ ಕಾಶ್ಮೀರ ಪ್ರೀಮಿಯರ್ ಲೀಗ್ (ಕೆಪಿಎಲ್) ಆರಂಭಿಸುವ ಅದರ ಯತ್ನಕ್ಕೆ ಆರಂಭದಲ್ಲೇ ಹಿನ್ನಡೆಗಳಾಗಿವೆ. ಈ ಬೆಳವಣಿಗೆಗಳ ಬಗ್ಗೆ ಭಾರತದ ವಿದೇಶಾಂಗ ಇಲಾಖೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಪಿಒಕೆಯಲ್ಲಿ ಆಕ್ರಮಿಸಿಕೊಂಡಿರುವ ಪ್ರದೇಶಗಳನ್ನು ಖಾಲಿ ಮಾಡುವಂತೆ ಆ ದೇಶಕ್ಕೆ ಸೂಚಿಸಿದೆ.

ಹಿಂಸಾಚಾರದ ನಡುವೆ ಚುನಾವಣೆ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ವಿಧಾನಸಭೆಗೆ ಜುಲೈ 25 (ಭಾನುವಾರ)ರಂದು ಮತದಾನ ನಡೆದು, ಮರುದಿನ ಅಂದರೆ ಜುಲೈ 26ರಂದು ಫಲಿತಾಂಶ ಪ್ರಕಟವಾಯಿತು. ಪಾಕಿಸ್ತಾನ ಈ ಪ್ರದೇಶವನ್ನು ‘ಆಜಾದ್ ಕಾಶ್ಮೀರ’ ಎಂದು ಕರೆಯುತ್ತದೆ. ಹಿಂಸಾಚಾರದ ನಡುವೆಯೇ ಚುನಾವಣೆ ನಡೆದಿದ್ದು, ಸ್ಥಳೀಯ ಜನರು ಕೂಡ ಪಾಕ್​ನ ಧೋರಣೆ ಬಗ್ಗೆ ಭಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂಸಾಚಾರದಲ್ಲಿ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ತೆಹ್ರಿಕ್ ಎ ಇನ್ಸಾಫ್ (ಪಿಟಿಐ) ಪಕ್ಷದ ಇಬ್ಬರು ಕಾರ್ಯಕರ್ತರು ಮೃತಪಟ್ಟಿದ್ದಾರೆ. ರಾಜಕೀಯ ಪಕ್ಷಗಳ ಕಾರ್ಯಕರ್ತರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚುನಾವಣೆ ವೇಳೆ ವ್ಯಾಪಕ ಅಕ್ರಮ ನಡೆದ ಆರೋಪಗಳೂ ಕೇಳಿಬಂದಿವೆ. ಪಿಒಕೆ ವಿಧಾನಸಭೆ 53 ಸದಸ್ಯಬಲವನ್ನು ಹೊಂದಿದೆ. ಆದರೆ, ಈ ಪೈಕಿ 45 ಕ್ಷೇತ್ರಗಳಿಗಷ್ಟೇ ಚುನಾವಣೆ ನಡೆಯುತ್ತದೆ. ಐದು ಕ್ಷೇತ್ರಗಳನ್ನು ಮಹಿಳೆಯರಿಗಾಗಿ ಮೀಸಲಿಡಲಾಗಿದ್ದು, ಮೂರು ಕ್ಷೇತ್ರ ವಿಜ್ಞಾನ ರಂಗದವರಿಗೆ ಮೀಸಲು. ಪಿಟಿಐ ಪಕ್ಷ 23 ಸ್ಥಾನಗಳಲ್ಲಿ ಜಯ ಸಾಧಿಸಿದ್ದು, ಬಿಲಾವಲ್ ಭುಟ್ಟೋ ನೇತೃತ್ವದ ಪಾಕಿಸ್ತಾನ್ ಪೀಪಲ್ಸ್ ಪಕ್ಷ (ಪಿಪಿಪಿ) 9 ಸ್ಥಾನ ಗೆಲ್ಲುವ ಮೂಲಕ, ಎರಡನೇ ದೊಡ್ಡ ಪಕ್ಷವಾಗಿದೆ. ಹಾಲಿ ಅಧಿಕಾರದಲ್ಲಿರುವ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಪಕ್ಷ ಕೇವಲ ಆರು ಸ್ಥಾನ ಗೆದ್ದುಕೊಂಡಿದೆ. ಕಾಶ್ಮೀರ ಮುಸ್ಲಿಂ ಕಾನ್ಪರೆನ್ಸ್ ಹಾಗೂ ಜಮ್ಮು ಮತ್ತು ಕಾಶ್ಮೀರ್ ಪೀಪಲ್ಸ್ ಪಾರ್ಟಿ ತಲಾ ಒಂದು ಸ್ಥಾನದಲ್ಲಿ ಜಯಿಸಿವೆ. ಪಿಒಕೆಯಲ್ಲಿ ಸರ್ಕಾರ ರಚಿಸುವ ಪ್ರಹಸನವನ್ನು ಪಾಕ್ ಹಿಂದಿನಿಂದಲೂ ಮಾಡಿಕೊಂಡು ಬಂದಿದೆ. ಆದರೆ, ಇಲ್ಲಿನ ವಿಧಾನಸಭೆಗೆ ಯಾವುದೇ ಸ್ವಾತಂತ್ರ್ಯ ಅಥವಾ ಅಧಿಕಾರ ನೀಡಲಾಗಿಲ್ಲ. ಪಾಕ್ ಪ್ರಧಾನಿ ಅಧ್ಯಕ್ಷತೆಯ 14 ಜನರ ಸಮಿತಿಯೇ ಪಿಒಕೆ ಕುರಿತು ನಿರ್ಣಯಗಳನ್ನು ಕೈಗೊಳ್ಳುತ್ತದೆ.

ಭಾರತದಿಂದ ಬಲವಾದ ವಿರೋಧ

ಪಾಕಿಸ್ತಾನ ಕಾನೂನುಬಾಹಿರವಾಗಿ ಕಬಳಿಸಿಕೊಂಡ ಪ್ರದೇಶಗಳನ್ನು ಅಧಿಕೃತಗೊಳಿಸಿಕೊಳ್ಳುವ ಹುನ್ನಾರದಲ್ಲಿ ಹೀಗೆಲ್ಲ ಮಾಡುತ್ತಿದೆ. ಭಾರತಕ್ಕೆ ಸೇರಿದ ಭೂಪ್ರದೇಶದ ಮೇಲೆ ಪಾಕ್​ಗೆ ಯಾವುದೇ ಹಕ್ಕಿಲ್ಲ ಮತ್ತು ಅದು ಪಿಒಕೆಯಲ್ಲಿನ ಆಕ್ರಮಿತ ಪ್ರದೇಶಗಳನ್ನು ಭಾರತಕ್ಕೆ ಬಿಟ್ಟುಕೊಡಬೇಕು ಎಂದು ವಿದೇಶಾಂಗ ಇಲಾಖೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ‘ಇದು ಪಾಕ್​ನ ಕಾಸ್ಮೇಟಿಕ್ ಎಕ್ಸ್​ಸೈಜ್’ ಎಂದು ಬಣ್ಣಿಸಿದ್ದಾರೆ. ಪಿಒಕೆಯ ಪ್ರದೇಶದ ಮೇಲೆ ಪಾಕ್​ಗೆ ಯಾವುದೇ ಅಧಿಕಾರ ಇಲ್ಲ, ಹಾಗಾಗಿ ಅಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಮತ್ತು ಅದು ಕಾನೂನುಬಾಹಿರವಾಗಿ ನಡೆದ ಚುನಾವಣೆ. ಅಲ್ಲಿನ ಸ್ಥಳೀಯರೇ ಚುನಾವಣೆಯನ್ನು ವಿರೋಧಿಸಿದ್ದು, ಮಾನವ ಹಕ್ಕುಗಳನ್ನು ಪುನರ್ ಸ್ಥಾಪಿಸುವಂತೆ ಆಗ್ರಹಿಸಿರುವುದು ಪಾಕ್​ಗೆ ತಿಳಿದಿಲ್ಲವೇ? ಎಂದು ಅರಿಂದಮ್ ಪ್ರಶ್ನಿಸಿದ್ದಾರೆ. ಅಲ್ಲದೆ, ಪಿಒಕೆಯಲ್ಲಿ ಪಾಕ್ ಮಾಡಿರುವ ಭೌಗೋಳಿಕ ಪರಿವರ್ತನೆಗಳನ್ನು ಮುಚ್ಚಿಡಲು ಅದು ಇಂಥ ಕೃತ್ಯದಲ್ಲಿ ತೊಡಗಿದೆ ಎಂದಿದ್ದಾರೆ.

ಅಭಿವೃದ್ಧಿವಂಚಿತ ಪ್ರದೇಶ

1947-48ರ ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಪಾಕ್ ಕಬಳಿಸಿಕೊಂಡ ಭೂಭಾಗವೇ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ). ಭಾರತೀಯ ಸೇನೆ ಈ ಭೂಭಾಗವನ್ನು ವಶಕ್ಕೆ ಪಡೆಯಲು ಸಮರ್ಥವಾಗಿತ್ತಾದರೂ, ಕದನವಿರಾಮ ಮಾಡಬೇಕೆಂಬ ವಿಶ್ವಸಂಸ್ಥೆಯ ಸೂಚನೆಯನ್ನು ಆಗಿನ ಪ್ರಧಾನಿ ಜವಾಹರಲಾಲ ನೆಹರು ಒಪ್ಪಿ, ಸಮರವನ್ನು ಮಹತ್ವದ ಘಟ್ಟದಲ್ಲಿ ನಿಲ್ಲಿಸಿದ್ದರಿಂದ ಕಾಶ್ಮೀರಕ್ಕೆ ಸೇರಿದ ಭೂಭಾಗ ಪಾಕಿಸ್ತಾನದ ಬಳಿ ಕಾನೂನು ಬಾಹಿರವಾಗಿ ಉಳಿದುಕೊಂಡಿತು. ಆ ಪ್ರದೇಶದಲ್ಲಿಗ ಪಾಕ್ ಅಣತಿಯ ಸರ್ಕಾರ ಕಾರ್ಯನಿರ್ವಹಿಸುತ್ತಿದೆಯಾದರೂ, ಪಿಒಕೆಯ ಜನರಲ್ಲಿ ಪಾಕ್ ಬಗ್ಗೆ ಆಕ್ರೋಶ ಮಡುಗಟ್ಟಿದೆ. ಕಳೆದ ಬಾರಿ ಇಮ್ರಾನ್ ಖಾನ್ ಅಲ್ಲಿ ಭೇಟಿ ನೀಡಿದಾಗ ಸ್ಥಳೀಯರು ‘ಗೋ ಬ್ಯಾಕ್’ ಎಂದು ಘೋಷಣೆ ಕೂಗಿದ್ದಲ್ಲದೆ, ಪಾಕ್​ನ ಹುಸಿ ಅನುಕಂಪ ಬೇಡ ಎಂಬ ಸಂದೇಶವನ್ನು ಸ್ಪಷ್ಟವಾಗಿ ರವಾನಿಸಿದರು. ಅಭಿವೃದ್ಧಿಯಿಂದ, ಮೂಲಸೌಕರ್ಯಗಳಿಂದ ವಂಚಿತವಾಗಿರುವ ಪಿಒಕೆ ಜನರು ಈಗ ಆಶಾವಾದದ ದೃಷ್ಟಿಯಿಂದ ನೋಡುತ್ತಿರುವುದು ಭಾರತದತ್ತಲೇ. ಆದರಿದು, ಸುಲಭದಲ್ಲಿ ಪರಿಹಾರವಾಗಬಲ್ಲಂಥ ಸಮಸ್ಯೆ ಅಲ್ಲ ಎಂಬುದು ವಾಸ್ತವ. ಇದರ ಅರಿವು ಕೇಂದ್ರ ಸರ್ಕಾರಕ್ಕೂ ಇದೆ. ಅಲ್ಲದೆ, ಪಾಕ್​ನ ಬೆಂಬಲದಿಂದ ಪಿಒಕೆಯಲ್ಲಿ ಭಯೋತ್ಪಾದಕರ ಶಿಬಿರಗಳು ನಡೆಯುತ್ತಿದ್ದು, ಅವು ಭಾರತದ ಪಾಲಿಗೆ ಭದ್ರತಾ ಆತಂಕವನ್ನು ತಂದೊಡ್ಡಿವೆ. ಅಲ್ಲಿನ ಭೌಗೋಳಿಕ ಸ್ಥಿತಿ, ಜನರ ಭಾವನೆಗಳನ್ನು ಅರಿತುಕೊಂಡೆ ಮುಂದಿನ ಕ್ರಮದ ಸ್ವರೂಪ ನಿಶ್ಚಯಿಸಲು ಸರ್ಕಾರ ಬಯಸುತ್ತಿದೆ.

ಲೀಗ್​ಗೆ ಹಿನ್ನಡೆ

ಪಿಒಕೆಯಲ್ಲಿ ಆಗಸ್ಟ್ 6ರಿಂದ 16ರವರೆಗೆ ಕಾಶ್ಮೀರ ಪ್ರೀಮಿಯರ್ ಲೀಗ್ (ಕೆಪಿಎಲ್) ಟಿ-20 ಟೂರ್ನಿಯನ್ನು ನಡೆಸುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪ್ರಯತ್ನಕ್ಕೆ ಆರಂಭದಲ್ಲೇ ಹಿನ್ನಡೆ ಆಗಿದೆ. ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಂತೂ ಕಠಿಣ ಎಚ್ಚರಿಕೆ ರವಾನಿಸಿದೆ. ಈ ಲೀಗ್​ನಲ್ಲಿ ಪಾಲ್ಗೊಳ್ಳುವ ಎಲ್ಲ ಕ್ರಿಕೆಟಿಗರಿಗೆ ಭಾರತದಲ್ಲಿನ ಕ್ರಿಕೆಟ್ ಲೀಗ್​ಗಳು ಮತ್ತು ಬಿಸಿಸಿಐಗೆ ಸಂಬಂಧಿಸಿದ ವಾಣಿಜ್ಯ ವ್ಯವಹಾರಗಳಿಂದ ಸಂಪೂರ್ಣವಾಗಿ ನಿಷೇಧಿಸ ಲಾಗುವುದು ಎಂದು ಸ್ಪಷ್ಟಪಡಿಸಿದೆ.