ನ್ಯೂಸ್

ಆಫ್ಘನ್ ನೆಲೆ ಮೇಲೆ ಪಾಕ್ ದಾಳಿ; ಕಾರ್ಯಾಚರಣೆಯಲ್ಲಿ 46 ಮಂದಿ ಹತ್ಯೆ

ಪೇಶಾವರ: ಪೂರ್ವ ಅಫ್ಘಾನಿಸ್ತಾನದ ಪ್ರದೇಶವೊಂದರ ಮೇಲೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಲ್ಲಿ 46 ಜನರು ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ತಾಲಿಬಾನ್ ಸರ್ಕಾರಿ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ಉಗ್ರರ ನೆಲೆಗಳ ಮೇಲೆ ತಾನು ವೈಮಾನಿಕ ದಾಳಿ ನಡೆಸಿದ್ದಾಗಿ ಪಾಕಿಸ್ತಾನ ಹೇಳಿಕೊಂಡಿದೆ. ಈ ಬೆನ್ನಲ್ಲೇ ಎರಡೂ ದೇಶಗಳ ಮಧ್ಯೆ ಸಂಘರ್ಷ ಹೆಚ್ಚುವ ಲಕ್ಷಣ ಕಂಡುಬರುತ್ತಿದೆ.

ಅಫ್ಘಾನಿಸ್ತಾನದ ಪಕ್ಟಿಕಾ ಪ್ರಾಂತ್ಯದಲ್ಲಿ ಉಗ್ರರ ತರಬೇತಿ ನೆಲೆಗಳನ್ನು ನಾಶಪಡಿಸಲು ಮತ್ತು ಭಯೋತ್ಪಾದಕರನ್ನು ಹತ್ಯೆ ಮಾಡುವ ಉದ್ದೇಶದಿಂದ ಪಾಕಿಸ್ತಾನಿ ಭದ್ರತಾ ಪಡೆ ದಾಳಿ ನಡೆಸಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯಲ್ಲಿ 27 ಮಹಿಳೆಯರು ಮತ್ತು ಮಕ್ಕಳು ಸೇರಿ ಸುಮಾರು 50 ಜನರು ಸಾವನ್ನಪ್ಪಿದ್ದಾರೆ ಎಂದು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನದ ವಕ್ತಾರ ಮೊಹಮ್ಮದ್ ಖುರಾಸಾನಿ ಹೇಳಿದ್ದಾನೆ.

ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಈ ಪ್ರದೇಶದ ನಿವಾಸಿಗಳು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ದಾಳಿಯ ಬಗ್ಗೆ ಪಾಕಿಸ್ತಾನ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಪೂರ್ವ ಅಫ್ಘಾನಿಸ್ತಾನದ ಪಕ್ಟಿಕಾ ಪ್ರಾಂತ್ಯದ ದಕ್ಷಿಣ ವಜಿರಿಸ್ತಾನ್ ಜಿಲ್ಲೆಯಲ್ಲಿ ಗುಪ್ತಚರ ಮಾಹಿತಿ ಆಧಾರಿತ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು 13 ಬಂಡುಕೋರರನ್ನು ಹತ್ಯೆ ಮಾಡಿವೆ ಎಂದು ಪಾಕಿಸ್ತಾನಿ ಮಿಲಿಟರಿ ತಿಳಿಸಿದೆ.

ಟಿಟಿಪಿ ಹಿನ್ನೆಲೆ ಏನು?: ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಉಗ್ರ ಸಂಘಟನೆ 2007ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಇದು ಅಫ್ಘಾನ್ ತಾಲಿಬಾನ್​ನಿಂದ ಪ್ರತ್ಯೇಕಗೊಂಡು ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುವ ಸಂಘಟನೆ. ಇದನ್ನು ಪ್ರಬಲ ಸುನ್ನಿ ಇಸ್ಲಾಮಿಸ್ಟ್ ಗುಂಪು ಎಂದೂ ಗುರುತಿಸಲಾಗುತ್ತದೆ. ಪಾಕ್- ಅಫ್ಘಾನಿಸ್ತಾನದ ಗಡಿ ಪ್ರದೇಶಗಳಲ್ಲಿ ಇದರ ಪ್ರಮುಖ ನೆಲೆ ಇದೆ. ಬೈತುಲ್ಲಾ ಮೆಹ್ಸೂದ್ ನೇತೃತ್ವದಲ್ಲಿ ರೂಪುಗೊಂಡ ಈ ಗುಂಪಿನಲ್ಲಿ ಸುಮಾರು 35,000 ಸದಸ್ಯರು ಇದ್ದಾರೆ ಎನ್ನಲಾಗಿದೆ. ಇಸ್ಲಾಮಿಕ್ ಕಾನೂನಿನ ಪ್ರಕಾರ ಆಡಳಿತವನ್ನು ಸ್ಥಾಪಿಸಲು ಮತ್ತು ಪಾಕಿಸ್ತಾನದ ಚುನಾಯಿತ ಸರ್ಕಾರವನ್ನು ಉರುಳಿಸುವ ಉದ್ದೇಶದಿಂದ ಈ ಉಗ್ರ ಸಂಘಟನೆಯನ್ನು ಸ್ಥಾಪನೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಪಾಕಿಸ್ತಾನ ಸೇನೆಯ ಮೇಲೆ ನೇರ ದಾಳಿಗಳನ್ನು ನಡೆಸಲಾಗುತ್ತಿದೆ. ಪ್ರಮುಖ ರಾಜಕಾರಣಿಗಳನ್ನು ಹತ್ಯೆ ಮಾಡುವ ಮೂಲಕ ಪಾಕಿಸ್ತಾನವನ್ನು ಅಸ್ಥಿರಗೊಳಿಸುವ ಕೆಲಸವನ್ನು ಟಿಟಿಪಿ ಮಾಡುತ್ತಿದೆ ಎನ್ನಲಾಗಿದೆ. ಈವರೆಗೆ ನಡೆದ ಅನೇಕ ಆತ್ಮಹತ್ಯಾ ಬಾಂಬ್ ದಾಳಿಗಳಲ್ಲಿ ಪಾಕಿಸ್ತಾನ ರಕ್ಷಣಾ ಪಡೆಗಳ ಸಾವಿರಾರು ಸಿಬ್ಬಂದಿ, ನಾಗರಿಕರು ಮೃತಪಟ್ಟಿದ್ದಾರೆ. ಚರ್ಚುಗಳು, ಶಾಲೆಗಳು ಮತ್ತು ಮಹಿಳಾ ಶಿಕ್ಷಣವನ್ನು ಈ ಸಂಘಟನೆ ವಿರೋಧಿಸುತ್ತದೆ. 2021ರಲ್ಲಿ ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದ ನಂತರ ಟಿಟಿಪಿ ಶಕ್ತಿ ಮತ್ತಷ್ಟು ಹೆಚ್ಚಾಗಿದೆ. ಅವರ ನಾಯಕರು ಅಫ್ಘಾನಿಸ್ತಾನದಲ್ಲಿ ಆಶ್ರಯ ಪಡೆದು, ಪಾಕಿಸ್ತಾನ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಪ್ರತಿದಾಳಿ ಎಚ್ಚರಿಕೆ: ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯವು ಪಾಕಿಸ್ತಾನದ ವೈಮಾನಿಕ ದಾಳಿಯನ್ನು ಖಂಡಿಸಿದೆ. ಮಹಿಳೆಯರು ಮತ್ತು ಮಕ್ಕಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ. ಇದು ಅಂತಾ ರಾಷ್ಟ್ರೀಯ ತತ್ವಗಳಿಗೆ ವಿರುದ್ಧ ವಾಗಿದೆ. ಏಕಪಕ್ಷೀಯ ಕ್ರಮಗಳು ಯಾವುದೇ ಸಮಸ್ಯೆಗೆ ಪರಿಹಾರ ವಲ್ಲ. ಪಾಕಿಸ್ತಾನದ ಹೇಡಿತನದ ಕೃತ್ಯಕ್ಕೆ ತಕ್ಕ ಉತ್ತರ ನೀಡಲಾಗುತ್ತದೆ ಎಂದು ಪ್ರತಿಕ್ರಿಯೆ ನೀಡಿದೆ.

ಪಾಕಿಸ್ತಾನ - ತಾಲಿಬಾನ್ ಸಂಘರ್ಷ ಏಕೆ?

  • ಪಾಕಿಸ್ತಾನ-ಅಫ್ಘಾನಿಸ್ತಾನದ ಗಡಿಯಾದ ‘ಡುರಾಂಡ್ ರೇಖೆ’ಗೆ ಮಾನ್ಯತೆ ನೀಡಲು ತಾಲಿಬಾನ್ ಇತ್ತೀಚೆಗೆ ನಿರಾಕರಿಸಿದೆ. ಹೀಗಾಗಿ ಗಡಿಯಲ್ಲಿ ಹಿಂಸಾಚಾರ, ದಾಳಿ ಆಗಾಗ ನಡೆಯುತ್ತಲೇ ಇದೆ. ಡುರಾಂಡ್ ರೇಖೆ ‘ವಸಾಹತುಶಾಹಿ ಶಕ್ತಿಗಳ ಹೇರಿಕೆ’ ಎಂದು ಪ್ರತಿಪಾದಿಸಿರುವ ತಾಲಿಬಾನ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಎರಡನ್ನೂ ಒಳಗೊಂಡಿರುವ ಏಕೀಕೃತ ಇಸ್ಲಾಮಿಕ್ ರಾಷ್ಟ್ರ ನಿರ್ವಣಕ್ಕೆ ಪ್ರತಿಪಾದನೆ ಮಾಡುತ್ತಿದೆ.
  • ಪಾಕಿಸ್ತಾನಿ ತಾಲಿಬಾನ್ ಉಗ್ರಗಾಮಿಗಳಿಗೆ ಅಫ್ಘಾನಿಸ್ತಾನ ಸುರಕ್ಷಿತ ಸ್ಥಳವಾಗಿದೆ ಎಂಬುದು ಪಾಕ್ ಸರ್ಕಾರದ ಆರೋಪ. ಪಾಕಿಸ್ತಾನದ ಭದ್ರತಾ ಪಡೆಗಳು ಮತ್ತು ನಾಗರಿಕರ ಮೇಲೆ ಈ ಉಗ್ರರು ಹಲವಾರು ದಾಳಿಗಳನ್ನು ನಡೆಸಿದ್ದಾರೆ.
  • ಪಾಕ್ ತಾಲಿಬಾನ್ ವಿರುದ್ಧ ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆ ತೀವ್ರಗೊಳಿಸಿದೆ. ಪೇಶಾವರದ ಮಸೀದಿಯ ಮೇಲಿನ ವಿಧ್ವಂಸಕ ದಾಳಿ ಸೇರಿ ಅನೇಕ ಉಗ್ರಕೃತ್ಯ ಹಿನ್ನೆಲೆಯಲ್ಲಿ ಪಾಕ್ ಸರ್ಕಾರ ಈ ಕ್ರಮ ಕೈಗೊಂಡಿದೆ. ಇದು ತಾಲಿಬಾನ್ ಆಡಳಿತವನ್ನು ಕೆರಳಿಸಿದೆ.
  • ಚೀನಾದೊಂದಿಗೆ ತಾಲಿಬಾನ್ ಸಂಬಂಧ ಹೆಚ್ಚುತ್ತಿರುವುದು ಪಾಕಿಸ್ತಾನದ ಕೋಪಕ್ಕೆ ಕಾರಣವಾಗಿದೆ. ಅಫ್ಘಾನಿಸ್ತಾನದ ಮೂಲಸೌಕರ್ಯ ಮತ್ತು ನೈಸರ್ಗಿಕ ಸಂಪನ್ಮೂಲ ಕ್ಷೇತ್ರದ ಮೇಲೆ ಚೀನಾ ಭಾರಿ ಹೂಡಿಕೆ ಮಾಡಲು ಮುಂದಾಗಿದೆ. ಅಫ್ಘಾನಿಸ್ತಾನದಲ್ಲಿ ಕಾನೂನುಬದ್ಧ ಮತ್ತು ಸ್ಥಿರ ಸರ್ಕಾರವನ್ನು ಚೀನಾ ಬಯಸುತ್ತಿದೆ. ಈವರೆಗೆ ಚೀನಾ ಪಾಕಿಸ್ತಾನದ ಆಪ್ತ ರಾಷ್ಟ್ರವಾಗಿತ್ತು. ಈಗ ಅದು ಅಫ್ಘಾನಿಸ್ತಾನದತ್ತ ಮುಖ ಮಾಡುತ್ತಿ ರುವುದು ಪಾಕಿಸ್ತಾನದ ಆತಂಕವನ್ನು ಹೆಚ್ಚಿಸಿದೆ.
  • ಅಫ್ಘಾನಿಸ್ತಾನದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕ ಗುಂಪುಗಳನ್ನು ಹತ್ತಿಕ್ಕಲು ತಾಲಿಬಾನ್ ನಿರಾಕರಿಸುತ್ತಿದೆ. ಅಲ್- ಖೈದಾ, ಹಕ್ಕಾನಿ ನೆಟ್​ವರ್ಕ್ ನಂತಹ ಭಯೋತ್ಪಾದಕ ಗುಂಪುಗಳಿಗೆ ಅಫ್ಘಾನಿ ಸ್ತಾನ ಆಶ್ರಯ ಒದಗಿಸುತ್ತಿದೆ ಎಂದು ಆರೋಪಿಸಲಾಗಿದೆ.