ನ್ಯೂಸ್

ಪಿಒಕೆಯಲ್ಲಿ ಪಹಲ್ಗಾಮ್​ ಉಗ್ರನ ಅಂತ್ಯಕ್ರಿಯೆ: ಕಳಚಿಬಿತ್ತು ಪಾಕಿಸ್ತಾನದ ಅಸಲಿ ಮುಖವಾಡ! Pahalgam Terrorist

Pahalgam Terrorist : ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನಲ್ಲಿ ಪ್ರವಾಸಿಗರ ಮೇಲೆ ನಡೆದ ಭೀಕರ ದಾಳಿಯ ಹಿಂದಿನ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದ ಹಬೀಬ್ ತಾಹಿರ್​ನ ಅಂತ್ಯಕ್ರಿಯೆ ಕಳೆದ ವಾರ ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಆತನ ಗ್ರಾಮದಲ್ಲಿ ನಡೆಯಿತು. ಇದು ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಕೈವಾಡವನ್ನು ಸಾಬೀತುಪಡಿಸುವ ಮತ್ತೊಂದು ಘಟನೆಯಾಗಿ ತಿರುವು ಪಡೆದುಕೊಂಡಿದೆ.

ಪಹಲ್ಗಾಮ್​ನಲ್ಲಿ ನೇಪಾಳಿ ಪ್ರಜೆ ಸೇರಿದಂತೆ 26 ಪ್ರವಾಸಿಗರನ್ನು ಕೊಂದ ಉಗ್ರ ದಾಳಿಗೆ ಸೇಡು ತೀರಿಸಿಕೊಳ್ಳಲು ಭಾರತ ಆಪರೇಷನ್ ಸಿಂಧೂರ್‌ ಪ್ರಾರಂಭಿಸಿತು. ಈ ವೇಳೆ ಸೇನಾ ದಾಳಿಗೆ ಹತ್ಯೆಯಾದ ನೂರಕ್ಕೂ ಹೆಚ್ಚು ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನ ಸೇನೆಯ ಸದಸ್ಯರು ಭಾಗವಹಿಸಿದ್ದರು. ಅಂದೇ ಪಾಕ್​ನ ಮುಖವಾಡ ಜಗತ್ತಿನೆದುರು ಕಳಚಿಬಿದ್ದಿತ್ತು. ಇದೀಗ ಮತ್ತೊಮ್ಮೆ ಬಯಲಾಗಿದೆ. ಅಂದಹಾಗೆ, ಆಪರೇಷನ್​ ಸಿಂಧೂರ ವೇಳೆ ಭಾರತೀಯ ಸೇನೆಯಿಂದ ಹತ್ಯೆಯಾದ ಭಯೋತ್ಪಾದಕರು ಉಗ್ರ ಹಫೀಜ್ ಸಯೀದ್ ನೇತೃತ್ವದ ನಿಷೇಧಿತ ಸಂಘಟನೆ ಜಮಾತ್-ಉದ್-ದವಾ (ಜೆಯುಡಿ) ಭಾಗವಾಗಿದ್ದರು.

ಮೂಲಗಳ ಪ್ರಕಾರ, ಇತ್ತೀಚೆಗೆ ಅಂತ್ಯಕ್ರಿಯೆ ನಡೆದ ತಾಹಿರ್‌ನನ್ನು ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೊಯ್ಬಾ (LeT) ನೇಮಕ ಮಾಡಿಕೊಂಡು ತರಬೇತಿ ನೀಡಿತ್ತು ಎಂದು ವರದಿಯಾಗಿದೆ. ಎಲ್‌ಇಟಿಯ ಒಂದು ಭಾಗವಾದ ರೆಸಿಸ್ಟೆನ್ಸ್ ಫ್ರಂಟ್ (TRF) ಪಹಲ್ಗಾಮ್​ ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು ಮತ್ತು ಇತ್ತೀಚೆಗೆ ಯುನೈಟೆಡ್ ಸ್ಟೇಟ್ಸ್‌ನಿಂದ ಭಯೋತ್ಪಾದಕ ಸಂಘಟನೆ ಎಂದು ಟ್ಯಾಗ್ ಕೂಡ ಪಡೆದುಕೊಂಡಿದೆ.

ಕಳೆದ ಜುಲೈ 28ರಂದು ಶ್ರೀನಗರದ ಹರ್ವಾನ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ಮೂವರು ಪಹಲ್ಗಾಮ್ ಭಯೋತ್ಪಾದಕರಲ್ಲಿ ತಾಹಿರ್ ಕೂಡ ಒಬ್ಬನಾಗಿದ್ದ. ಶ್ರೀನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಜಿ.ವಿ. ಸುಂದೀಪ್ ಚಕ್ರವರ್ತಿ ಅವರು ಭಯೋತ್ಪಾದಕರು ಎಲ್‌ಇಟಿಗೆ ಸೇರಿದವರು ಮತ್ತು ಆಪರೇಷನ್ ಮಹಾದೇವ್ ಸಮಯದಲ್ಲಿ ಹತ್ಯೆಯಾಗಿದ್ದಾರೆ ಎಂದು ದೃಢಪಡಿಸಿದರು. ಇದೇ ವಿಚಾರವನ್ನು ಗೃಹ ಸಚಿವ ಅಮಿತ್​ ಷಾ ಅವರು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ದೃಢಪಡಿಸಿದರು.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊಗಳು ಮತ್ತು ಫೋಟೋಗಳು ಜುಲೈ 30 ರಂದು ತಾಹಿರ್‌ ಅಂತ್ಯಕ್ರಿಯೆ ವೇಳೆ ಪಿಒಕೆಯ ಕುಯಿಯಾನ್ ಗ್ರಾಮದಲ್ಲಿ ಸ್ಥಳೀಯ ನಿವಾಸಿಗಳು ಒಟ್ಟುಗೂಡುತ್ತಿರುವುದನ್ನು ತೋರಿಸಿವೆ. ಅಂತ್ಯಕ್ರಿಯೆ ಸಂದರ್ಭದಲ್ಲಿ ತಾಹಿರ್ ಕುಟುಂಬವು ಭಯೋತ್ಪಾದಕ ಗುಂಪನ್ನು ನಿರ್ಬಂಧಿಸಿತ್ತು. ಆದರೂ, ಸ್ಥಳೀಯ ಎಲ್‌ಇಟಿ ಕಮಾಂಡರ್ ರಿಜ್ವಾನ್ ಹನೀಫ್, ಶಸ್ತ್ರಸಜ್ಜಿತ ಗುಂಪಿನೊಂದಿಗೆ ಆಗಮಿಸಿದಾಗ ಅಂತ್ಯಕ್ರಿಯೆ ಉದ್ವಿಗ್ನಗೊಂಡು ಅನಿರೀಕ್ಷಿತ ತಿರುವು ಪಡೆದುಕೊಂಡಿತು ಎಂದು ಮೂಲಗಳು ತಿಳಿಸಿವೆ. ಹನೀಫ್, ದುಃಖತಪ್ತರನ್ನು ಬಂದೂಕಿನಿಂದ ಬೆದರಿಸಿದಾಗ ಘರ್ಷಣೆ ಭುಗಿಲೆದ್ದಿತು. ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು. ಇದರಿಂದ ಹನೀಫ್ ಮತ್ತು ಆತನ ಸಹಚರರು ಅಂತಿಮವಾಗಿ ಸ್ಥಳದಿಂದ ಹೊರಹೋಗಬೇಕಾಯಿತು.

ಮೇ ತಿಂಗಳಲ್ಲಿ, ಆಪರೇಷನ್ ಸಿಂಧೂರ ಸಮಯದಲ್ಲಿ ಗುಂಡು ಹಾರಿಸಲ್ಪಟ್ಟ ಎಲ್‌ಇಟಿ ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಪಾಕಿಸ್ತಾನದ ಉನ್ನತ ಅಧಿಕಾರಿಗಳ ಹೆಸರುಗಳನ್ನು ಭಾರತ ಬಿಡುಗಡೆ ಮಾಡಿತು. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುರಿಡ್ಕೆಯಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕರ ಅಂತ್ಯಕ್ರಿಯೆಯ ನೇತೃತ್ವವನ್ನು ಅಮೆರಿಕವು ವಿಶೇಷವಾಗಿ ಜಾಗತಿಕ ಭಯೋತ್ಪಾದಕ ಎಂದು ಗೊತ್ತುಪಡಿಸಿದ ಎಲ್‌ಇಟಿ ಕಮಾಂಡರ್ ಅಬ್ದುಲ್ ರೌಫ್ ವಹಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುರಿಡ್ಕೆ ಎಲ್‌ಇಟಿಯ ಪ್ರಧಾನ ಕಚೇರಿಯ ನೆಲೆಯಾಗಿದ್ದು, ಇದನ್ನು ಪಾಕಿಸ್ತಾನದ "ಭಯೋತ್ಪಾದಕ ನರ್ಸರಿ" ಎಂದು ಕರೆಯಲಾಗುತ್ತದೆ. ಪಹಲ್ಗಾಮ್ ಭಯೋತ್ಪಾದಕರಿಗೆ ಈ ಸ್ಥಳದಲ್ಲಿ ತರಬೇತಿ ನೀಡಲಾಗುತ್ತಿತ್ತು ಎಂದು ವರದಿಗಳು ತಿಳಿಸಿವೆ. (ಏಜೆನ್ಸೀಸ್​)